ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರನಿಂದ ಕುತಂತ್ರ ರಾಜಕಾರಣ’

ಷಡ್ಯಂತರಗಳಿಗೆ ಜಗ್ಗುವುದಿಲ್ಲ: ಜೆಡಿಎಸ್ ಮುಖಂಡ ನಾಗರಾಜು ತಿರುಗೇಟು

ತುಮಕೂರು: ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪುತ್ರ ದುಷ್ಯಂತ್ ತಮ್ಮ ವಿರುದ್ಧ ಷಡ್ಯಂತರ ನಡೆಸಿ ತಮ್ಮನ್ನು ರಾಜಕೀಯವಾಗಿ ಕುಗ್ಗಿಸುವ ಕುತಂತ್ರ ನಡೆಸಿದ್ದಾರೆ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಖಂಡ ಬಿ.ಎಸ್. ನಾಗರಾಜು ಆರೋಪಿಸಿದರು.

ಇಂದು ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಮೊದಲು ತಮ್ಮ ಕಾರು ಚಾಲಕ, ಆಪ್ತ ಸಹಾಯಕರಾಗಿದ್ದು, ಈಗ ತಮ್ಮನ್ನು ಬಿಟ್ಟುಹೋಗಿರುವವರನ್ನು ಜೊತೆಯಾಗಿಸಿಕೊಂಡು ನನ್ನ ದೌರ್ಬಲ್ಯಗಳನ್ನು ಸಂಗ್ರಹಿಸಿ ತಮ್ಮ ತೇಜೋವಧೆ ಮಾಡುವ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಮಗನ ಈ ದುಷ್ಕೃತ್ಯದಲ್ಲಿ ತಂದೆ ಶಾಸಕ ಶ್ರೀನಿವಾಸ್ ಕೈವಾಡವಿದೆ ಎಂದು ದೂರಿದರು.
ವೈಚಾರಿಕವಾದ, ಆರೋಗ್ಯಕರ ರಾಜಕಾರಣ ಮಾಡಬೇಕೆ ಹೊರತು ಮತ್ತೊಬ್ಬರ ದೌರ್ಬಲ್ಯ ಹುಡುಕಿ ಆ ಮೂಲಕ ಅವರನ್ನು ಮಣಿಸುವಂತೆ ಕೀಳು ಮಟ್ಟದ ರಾಜಕಾರಣ ಮಾಡಬಾರದು, ಅಂತಹ ಯಾವುದೇ ತಂತ್ರಗಳಿಗೆ ತಾವು ಹೆದರುವುದಿಲ್ಲ, ಶಾಸಕ ಶ್ರೀನಿವಾಸ್ ಹಾಗೂ ಅವರ ಪುತ್ರ ದುಷ್ಯಂತ್ ತಮ್ಮ ವಿರುದ್ಧ ನೇರ ರಾಜಕಾರಣಕ್ಕೆ ಇಳಿಯಲಿ ಅವರ ಎಲ್ಲಾ ಸವಾಲುಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ಸವಾಲು ಹಾಕಿದರು.

ಕಳೆದ ಚುನಾವಣೆಯಲ್ಲಿ ತಮ್ಮ ಜೊತೆ ಕೆಲಸ ಮಾಡಿದ ಆಪ್ತ ಸಹಾಯಕರು, ಡ್ರೈವರ್‌ಗಳು, ಹುಡುಗರ ಜೊತೆ ದುಷ್ಯಂತ್ ಶ್ರೀನಿವಾಸ್ ಮಧ್ಯರಾತ್ರಿವರೆಗೆ ಬೆಂಗಳೂರಿನ ಫ್ಲಾಟ್‌ನಲ್ಲಿ ಮೀಟಿಂಗ್ ಮಾಡಿದ್ದಾರೆ. ನನಗೆ ಸಂಬಂಧಿಸಿದ ಡೇಟಾವನ್ನು ಪಡೆದಿದ್ದಾರೆ. ನನಗೇನಾದರೂ ಅನೈತಿಕ ಸಂಬಂಧಗಳಿವೆಯೆ, ಅಕ್ರಮ ಚಟುವಟಿಕೆ ನಡೆಸುತ್ತಿದ್ದೇನೆ ಎಂದು ತಿಳಿಯುವ ಪ್ರಯತ್ನ ಮಾಡಿದ್ದಾರೆ. ನನ್ನ ಆದಾಯದ ಮೂಲಗಳ ಮಾಹಿತಿ ಪಡೆದಿದ್ದಾರೆ. ಆದಾಯ ಮೂಲಗಳಿಗೆ ಕಡಿವಾಣ ಹಾಕಲು ಹಾಗೂ ದೌರ್ಬಲ್ಯಗಳನ್ನು ಹಿಡಿದು ಅಪ್ರಚಾರ ಮಾಡಿ ತಮ್ಮ ತೇಜೋವಧೆ ಮಾಡುವ ಕುತಂತ್ರ ನಡೆಸಿದ್ದಾರೆ ಎಂದು ನಾಗರಾಜು ಹೇಳಿದರು.

ನನ್ನ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿ ನಾನು ಗುಬ್ಬಿ ತಾಲೂಕಿಗೆ ಅವರು ತಿರುಗಿ ನೋಡದಂತೆ ಮಾಡುತ್ತೇನೆ ಎಂದು ದುಷ್ಯಂತ ಹೇಳಿದ್ದಾರೆ. ಇಂತಹ ತಂತ್ರಗಳಿಗೆ ತಾವು ಸೊಪ್ಪು ಹಾಕುವುದಿಲ್ಲ. ದುಷ್ಯಂತನು ತಮ್ಮ ತಂದೆಯ ಶಾಸಕ ಸ್ಥಾನದ ಅಧಿಕಾರ ದುರುಪಯೋಗಪಡಿಸಿಕೊಂಡು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ನನ್ನ ವ್ಯವಹಾರಗಳಿಗೆ ಬ್ರೇಕ್ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ನನ್ನ ಉದ್ಯಮ ಕ್ರಷರ್ ವ್ಯವಹಾರವನ್ನು ಹೇಗೆ ನಡೆಸುತ್ತಾರೆ ಎಂದು ಧಮ್ಮಿ ಹಾಕಿರುವುದು ಗೊತ್ತಾಗಿದೆ. ನನ್ನನ್ನು ರಾಜಕೀಯವಾಗಿ ನೇರವಾಗಿ ಎದುರಿಸಲಾಗದೆ ವಾಮ ಮಾರ್ಗ ಅನುಸರಿಸಿದ್ದಾರೆ. ನನ್ನನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ ಯಾವುದಕ್ಕೂ ನಾನು ಜಗ್ಗುವುದಿಲ್ಲ ಎಂದು ತಿಳಿಸಿದರು.

ಗುಬ್ಬಿಯ ಜೆಡಿಎಸ್ ಮುಖಂಡ ಹೊನ್ನಗಿರಿಗೌಡ, ಜಿ.ಎನ್. ಬೆಟ್ಟಸ್ವಾಮಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾನಂದಕುಮಾರ್, ಮುಖಂಡ ಕಳ್ಳಿಪಾಳ್ಯ ಲೋಕೇಶ್ ಅವರು ನಾಗರಾಜು ಅವರನ್ನು ಬೆಂಬಲಿಸಿ ಮಾತನಾಡಿ, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ತಮ್ಮ ಮಗನನ್ನು ಮುಂದಿಟ್ಟುಕೊಂಡು ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ರಾಜಕಾರಣ ಬಿಟ್ಟು ವಿಷಯಾಧಾರಿತ ರಾಜಕಾರಣ ಮಾಡಲಿ. ಇದೇ ವರ್ತನೆ ಮುಂದುವರೆಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು.
ಗುಬ್ಬಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಚಿಕ್ಕೀರಪ್ಪ, ಮುಖಂಡ ಶಿವಲಿಂಗಯ್ಯ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!