ತುಮಕೂರು:- ‘ವೈಸಿರಿ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಟೆಕ್ನಾಲಜಿ’ ಕಾಲೇಜು ಆವರಣದಲ್ಲಿ ಪ್ರಸಕ್ತ ಸಾಲಿನ ಪ್ರಥಮ ವರ್ಷದ ಬಿ.ಬಿ.ಎ ಮತ್ತು ಬಿ.ಸಿ.ಎ ವಿದ್ಯಾರ್ಥಿಗಳನ್ನು ಸ್ವಾಗತಿಸುವ ‘ವಿ-ನೂತನ’ ಎಂಬ ವಿಶೇಷ ಪ್ರವೇಶಾತಿ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಆಯೋಜಿಸಲಾಗಿತ್ತು. ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಶೈಕ್ಷಣಿಕ ವಾತಾವರಣ, ನಿಯಮಗಳು ಮತ್ತು ಸೌಲಭ್ಯಗಳ ಪರಿಚಯ ಮಾಡಿಕೊಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.



ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಕುಮಾರ್ ಎನ್. ಬಿ. ಅವರು “ವೈಸಿರಿ ಸಂಸ್ಥೆಯು ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳಲ್ಲಿ ಜ್ಞಾನ , ಸಂಶೋಧನಾ ಪ್ರವೃತ್ತಿ ಹಾಗೂ ವ್ಯವಹಾರಿಕ ತಂತ್ರಗಾರಿಕೆಯನ್ನು ಬೆಳೆಸುವ ಮೂಲಕ ಅವರನ್ನು ಜಾಗತಿಕ ಮಟ್ಟದ ನಾಯಕರನ್ನಾಗಿ ರೂಪಿಸುವುದು ನಮ್ಮ ಧ್ಯೇಯವಾಗಿದೆ” ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಇರುವ ವಿದ್ಯಾರ್ಥಿ ಕಲ್ಯಾಣ ಯೋಜನೆಗಳು ಹಾಗೂ ರಾಗಿಂಗ್ ಮುಕ್ತ ಕ್ಯಾಂಪಸ್ ಸೌಲಭ್ಯ ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹಾಗೂ ಕೌಶಲ್ಯವನ್ನು ಉತ್ತೇಜಿಸಲು ಕಾಲೇಜು ಆಡಳಿತ ಮಂಡಳಿಯು ವಿಶೇಷ ಬಹುಮಾನಗಳನ್ನು ಘೋಷಿಸಿದೆ ನಮ್ಮ ಕಾಲೇಜಿನಲ್ಲಿ ಪ್ರತಿ ಸೆಮಿಸ್ಟರ್ ನಲ್ಲಿ ಟಾಪರ್ ಬರುವ ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗೂ 40.000 ನಗದು ಬಹುಮಾನವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ತುಮಕೂರು ವಿಶ್ವವಿದ್ಯಾಲಯದ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಂದ ಪ್ರಮಾಣವಚನ ಸ್ವೀಕಾರ:- ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಹುಮೇರ ಪರ್ವೀನ್ ಅವರು ಹೊಸ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಸಾಂಪ್ರದಾಯಿಕ ಪ್ರಮಾಣವಚನ ಬೋಧಿಸಿದರು ವಿದ್ಯಾರ್ಥಿಗಳು ಶೈಕ್ಷಣಿಕ ಶಿಸ್ತು, ನೈತಿಕ ಮೌಲ್ಯಗಳು ಹಾಗೂ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಪ್ರತಿಜ್ಞೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವೈಸಿರಿ ಕುಟುಂಬಕ್ಕೆ ಸೇರ್ಪಡೆಯಾಗಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಮುಂದಿನ ದಿನಗಳ ಪಯಣವು ಅತ್ಯಂತ ಯಶಸ್ವಿಯಾಗಲಿ ಎಂದು ಹಾರೈಸಿದರು.
ಟಾಪರ್ ಗಳಿಗೆ ಗೌರವ ಹಾಗೂ ಪ್ರಶಸ್ತಿ ವಿತರಣೆ:- ಕಾಲೇಜಿಗೆ ಹೊಸದಾಗಿ ಬಂದ ಪ್ರಥಮ ವರ್ಷದ ಬಿ.ಬಿ.ಎ ಮತ್ತು ಬಿ.ಸಿ.ಎ ವಿದ್ಯಾರ್ಥಿಗಳಲ್ಲಿ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ನಮ್ಮ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿ ಅಧಿಕೃತ ವೆಬ್ ಸೈಟ್ ಅನ್ನು ನವೀಕರಿಸಿ ಅದರ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ಅಂತಹ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಅವರಿಗೆ ಪ್ರಸಂಷನಾ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.