ತುಮಕೂರು : ಇತ್ತೀಚೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಕೆ ನಾಗರಾಜು ಅವರನ್ನು ಇಂದು ನಗರದ ಕುಣಿಗಲ್ ಮುಖ್ಯರಸ್ತೆಯಲ್ಲಿ ಸಂಭ್ರಮ ಪಾರ್ಟಿ ಹಾಲ್ ನಲ್ಲಿ ಛಲವಾದಿ ನೌಕರರ ಬಳಗದ ವತಿಯಿಂದ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತಪ್ಪನವರು ಮಾತನಾಡಿ ಚುನಾವಣೆಗೆ ಆರ್ಥಿಕವಾಗಿ ವ್ಯಯವಾಗಲಿದೆ ಅದನ್ನು ತಡೆಗಟ್ಟುವುದು ಮತ್ತು ನಾಗರಾಜು ಅವರು ಮಾಡಿಕೊಂಡು ಬಂದಿರುವ ಸೇವೆಯನ್ನು ಪರಿಗಣಿಸಿ ಶಿಕ್ಷಕರುಗಳು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದರಿಂದ, ವೈಯುಕ್ತಿಕವಾಗಿ ನನಗೂ ಖುಷಿ ತಂದಿದೆ, ಚುನಾವಣೆ ನಿಮಿತ್ತ ಆಗಬೇಕಾಗಿದ್ದ ಖರ್ಚಿನ ಮೊತ್ತವನ್ನು ಸಂಘಕ್ಕೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆಂದು ಶ್ಲಾಘಿಸಿದರು. ಕೆ ನಾಗರಾಜು ಅವರು ಈ ಹಿಂದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ನೆರವೇರಿಸಿದರ ಪ್ರಯುಕ್ತ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೂ ಸಹ ಭಾಜನರಾಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಛಲವಾದಿ ಸಮಾಜದ ಹಿರಿಯರು, ರಂಗಭೂಮಿ ಕಲಾವಿದರಾದ ಕಲಾಶ್ರೀ ಡಾ. ಲಕ್ಷ್ಮಣ್ ದಾಸ್ ರವರು ಕೆ.ನಾಗರಾಜು ಅವರ ಬಗ್ಗೆ ಮಾತನಾಡುತ್ತಾ ತುಮಕೂರು ಗ್ರಾಮಾಂತರದ ಅದಲಾಪುರ ಗ್ರಾಮದಲ್ಲಿ ಹುಟ್ಟಿ ಬೆಳೆದ ಕೆ.ನಾಗರಾಜು ಅವರ ಕುಟುಂಬಕ್ಕೂ ನಮಗೂ ಅತ್ಯಂತ ಅವಿನಾಭವ ನಂಟು ಬೆಳೆದಿದ್ದು, ಅವರ ಕುಟುಂಬದವರೂ ಸಹ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ, ನಿರಂತರ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿರುವುದನ್ನು ನಾನು ನೋಡಿಕೊಂಡು ಬರುತ್ತಿದ್ದೇನೆ, ಅಂತೆಯೇ ನಾಗರಾಜು ಸಹ ಶಿಕ್ಷಕರ ಸಂಘದಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅವರು ನಿರಂತರವಾಗಿ ಸಲ್ಲಿಸಿರುವ ಸೇವೆಯ ಪ್ರತಿಫಲವಾಗಿದೆ ಎಂದು ಕೆ.ನಾಗರಾಜು ಪರ ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಸನ್ಮಾನವನ್ನು ಸ್ವೀಕರಿಸಿ ಕೆ.ನಾಗರಾಜು ಮಾತನಾಡುತ್ತಾ ನಾನು ಕಳೆದ 37 ವರ್ಷಗಳಿಂದ ನಿರಂತರವಾಗಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದು, ಬೆಂಗಳೂರು, ಮಾಗಡಿ, ಕುಣಿಗಲ್ ಸೇರಿದಂತೆ ತುಮಕೂರು ಗ್ರಾಮಾಂತರ ಭಾಗದ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಹೆಬ್ಬೂರು ಹೋಬಳಿ ಬಿಸಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ, ನನ್ನ ಕುಟುಂಬ ಹಾಗೂ ನನ್ನ ಹಿರಿಯರ ಮಾರ್ಗದರ್ಶನ ಜೊತೆಗೆ ನನ್ನ ಒಡನಾಡಿಗಳು, ಸ್ನೇಹಿತರ ಸಹಕಾರ ಒಡನಾಟದಿಂದ ಶಿಕ್ಷಕನಾಗಿ, ಸಮಾಜಮುಖಿ ಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದು, ಅದರ ಪ್ರತಿಫಲವಾಗಿ ನಾನು ಗಳಿಸಿರುವ ಪ್ರೀತಿ, ವಿಶ್ವಾಸದ ಪ್ರತಿಫಲವಾಗಿ ಇಂದು ನಾನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ, ಈ ನನ್ನ ಆಯ್ಕೆಗೆ ಸಹರಿಸಿದ ಪ್ರತಿಯೊಬ್ಬರಿಗೂ ನಾನು ಸದಾ ಚಿರ ಋಣಿಯಾಗಿದ್ದೇನೆಂದು ಕೃತಜ್ಞತೆಗಳನ್ನು ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲೆಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಛಲವಾದಿ ಸಮಾಜದ ಮತ್ತೋರ್ವ ಶ್ರೀಕಾಂತ್ ಛಲವಾದಿ, ಸರ್ಕಾರಿ ನೌಕರರ ವೇದಿಕೆ ಪದಾಧಿಕಾರಿಯಾದ ಕಂದಾಯ ನಿರೀಕ್ಷಕರಾದ ಗೋಪಿನಾಥ್ ಅವರುಗಳನ್ನೂ ಸಹ ಛಲವಾದಿ ನೌಕರರ ಬಳಗದ ವತಿಯಿಂದ ಸೇರಿದಂತೆ ಹಲವಾರು ಜಿಲ್ಲೆಗಳಿಂದ ಛಲವಾದಿ ಸಮುದಾಯದ ಶಿಕ್ಷಕರು ಹಾಗೂ ಉಪನ್ಯಾಸಕರು ಹಾಗೂ ವಿವಿಧ ಸಮಾಜದ ಮುಖಂಡರು, ಒಡನಾಡಿಗಳು, ಸ್ನೇಹಿತರು ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಛಲವಾದಿ ಸಮುದಾಯದ ಮುಖಂಡರುಗಳಾದ ಶ್ರೀನಿವಾಸ್, ವಸಂತಣ್ಣ, ಲಕ್ಷ್ಮೀಪುತ್ರ, ವೆಂಕಟಪ್ಪ, ಬೆಳಧರ ಮಂಜಣ್ಣ, ವೆಂಕಟಪ್ಪ, ಶಿವಣ್ಣ, ಗೋವಿಂದರಾಜು (ಇ.ಸಿ.ಓ), ನರಸಿಂಹಮೂರ್ತಿ ಹೆಗ್ಗೆರೆ, ಹನುಮಂತರಾಜು, ಸಿದ್ಧಗಂಗಯ್ಯ, ನಾಗೇಂದ್ರಯ್ಯ, ಸೈಯದ್ ಮಹಬೂಬ್ ಪಾಷ, ಕುಮಾರಯ್ಯ, ಗೋವಿಂದರಾಜು ಕೊತ್ತಿಹಳ್ಳಿ, ರವೀಶ್, ಕೆ.ಗೋವಿಂದರಾಜು, ಎನ್.ಕೆ.ನಿಧಿಕುಮಾರ್, ರಾಜು, ರಂಗಸ್ವಾಮಯ್ಯ ಕೆ.ಎಸ್, ತ್ಯಾಗರಾಜು, ಆಗಲಕೋಟೆ ನರಸಿಂಹರಾಜು, ನಾಗೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.