ತುಮಕೂರು : ಇಂದು ಭಾರತದ ಇತಿಹಾಸ ಕಂಡ ಅಪ್ರತಿಮ ಮಹಿಳೆ, ತ್ಯಾಗದ ಪ್ರತೀಕವಾದ ಮಾತೃಶ್ರೀ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರ 91ನೇ ವರ್ಷದ ಪುಣ್ಯತಿಥಿಯನ್ನು ಅಖಿಲ ಭಾರತ ಡಾ. ಅಂಬೇಡ್ಕರ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಇಂದು ತುಮಕೂರು ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ಯುಗದನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹೋನ್ನತ ಸಾಧನೆಗಳ ಹಿಂದೆ ಮತ್ತು ಅವರ ಯಶಸ್ಸಿನ ಪ್ರತಿಯೊಂದು ಹೆಜ್ಜೆಯಲ್ಲೂ ದೃಢವಾಗಿ ನಿಂತ ದಿವ್ಯ ಶಕ್ತಿ ರಮಾಬಾಯಿ ಅವರಾಗಿದ್ದರು. ಬಾಬಾಸಾಹೇಬರು ಲಂಡನ್ ಮತ್ತು ಅಮೆರಿಕಾಗಳಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಹಾಗೂ ಅವರ ನಿಜವಾದ ಸಾಮರ್ಥ್ಯವನ್ನು ಜಗತ್ತಿಗೆ ತೋರ್ಪಡಿಸಲು ರಮಾಬಾಯಿಯವರ ನಿರಂತರ ಬೆಂಬಲ ಮತ್ತು ಅಚಲವಾದ ವಿಶ್ವಾಸವೇ ಪ್ರಮುಖ ಕಾರಣವಾಗಿತ್ತು. ಕಡುಬಡತನ ಮತ್ತು ವೈಯಕ್ತಿಕ ಜೀವನದ ಸಾಲು ಸಾಲು ಕಷ್ಟಗಳ ನಡುವೆಯೂ ಅವರು ಎಂದಿಗೂ ಬಾಬಾಸಾಹೇಬರು ಧೃತಿಗೆಡದಂತೆ ನೋಡಿಕೊಂಡ ಮಹಾತಾಯಿ ಅವರಾಗಿದ್ದರು ಎಂದರಲ್ಲದೇ ಅವರಿಗೆ ಜೀವನದ ಕೊನೆಯುಸಿರಿನವರೆಗೂ ಬದುಕಿನಲ್ಲಿ ಎದುರಾದ ಕಷ್ಟಗಳನ್ನು ನುಂಗಿ ಪತಿಗೆ ಪ್ರೋತ್ಸಾಹ ನೀಡಿದ ರಮಾಬಾಯಿ ಮಹಾನ್ ಮಾತೆ. ಬದುಕಿನಲ್ಲಿ ಕಷ್ಟವೆನ್ನುವುದು ಆಕೆಗೆ ಹೊಸತೇನಲ್ಲ. ಬಾಲ್ಯದಿಂದಲೇ ಕಷ್ಟಗಳು ಆಕೆಯ ಸುತ್ತಲೂ ಸುತ್ತಿಕೊಂಡಿದ್ದವು. ಅವುಗಳ ಮಧ್ಯದಲ್ಲಿದ್ದುಕೊಂಡೇ ಬದುಕು ಸವೆಸಿದ ರಮಾಬಾಯಿ, ಅಂಬೇಡ್ಕರ್ ಅವರಿಗೆ ಮಡದಿಯಷ್ಟೇ ಅಲ್ಲ ಮಾತೆಯೂ ಆಗಿದ್ದಳೆಂದರೆ ತಪ್ಪಾಗಲಾರದು ಎಂದು ಭಾವುಕರಾಗಿ ನುಡಿದರು.
ನಂತರ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ಎಸ್ ರವರು ಮಾತನಾಡುತ್ತಾ ತಮ್ಮ ಇಡೀ ಜೀವನವನ್ನು ಸಮಾಜದ ಏಳಿಗೆಗಾಗಿ ಮುಡುಪಾಗಿಟ್ಟ ರಮಾಬಾಯಿ ಅವರು ಕೇವಲ ಬಾಬಾಸಾಹೇಬರ ಪತ್ನಿಯಾಗಿ ಮಾತ್ರವಲ್ಲದೆ, ಸೌಲಭ್ಯಗಳ ವಂಚಿತರ, ಶೋಷಿತರ ಮತ್ತು ದೀನದಲಿತರ ಪಾಲಿನ ಹೆಮ್ಮೆಯ ಮಾತೃಶ್ರೀಯಾಗಿ ಹೊರಹೊಮ್ಮಿದಂತಹವರು. ಬಾಬಾಸಾಹೇಬರು ಸಮಾಜದ ಉದ್ಧಾರಕ್ಕಾಗಿ ಮತ್ತು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ ತರಲು ಹಗಲಿರುಳು ಶ್ರಮಿಸುತ್ತಿದ್ದಾಗ, ರಮಾಬಾಯಿಯವರು ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ ಮಹಾನ್ಮಾತೆ ಎಂದು ತಿಳಿಸಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಕಾನೂನು ಘಟಕದ ಜಿಲ್ಲಾಧ್ಯಕ್ಷರಾದ ವಸಂತ್ ಕುಮಾರ್ ರವರು ಮಾತನಾಡುತ್ತಾ ನಮ್ರತೆ, ಸಹನೆ ಮತ್ತು ಕರುಣೆಯ ಸಾಕಾರ ಮೂರ್ತಿಯಾಗಿದ್ದ ತಾಯಿ ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗದ ಬದುಕು ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ. ಈ ಪುಣ್ಯದಿನದಂದು ಆ ಮಹಾನ್ ಚೇತನಕ್ಕೆ ಇಡೀ ದೇಶವು ಭಕ್ತಿಪೂರ್ವಕ ಹಾಗೂ ಗೌರವಪೂರ್ವಕ ನಮನಗಳನ್ನು ಸಲ್ಲಿಸಲಾಗುತ್ತಿದೆ, ಅಂತೆಯೇ ನಾವು ಸಹ ಅವರ ವಿಚಾರಧಾರೆಗಳನ್ನು ನಮ್ಮ ಸಂಘದ ಸನ್ಮಿತ್ರರೊಂದಿಗೆ ಹಂಚಿಕೊಳ್ಳುತ್ತಾ ನಮ್ಮ ದೇಶದ ಪ್ರತಿಯೊಬ್ಬರೂ ಸಹ ತ್ಯಾಗಮಯಿಯವರ ಆದರ್ಶಗಳನ್ನು ಪಾಲಿಸುವಂತಗಾಲಿ ಎಂಬ ಸದುದ್ದೇಶವನ್ನು ಹೊಂದಿದ್ದೇವೆಂದರು.
ಕಾರ್ಯಕ್ರಮದಲ್ಲಿ ಎನ್.ಕೆ.ನಿಧಿಕುಮಾರ್, ಎಸ್.ಲಕ್ಷ್ಮೀನಾರಾಯಣ, ವಸಂತ್ ಕುಮಾರ್, ಗೂಳೂರು ರಾಜಣ್ಣ, ಗಂಗಾಧರ್ ಜಿ.ಆರ್, ರಂಜನ್, ದರ್ಶನ್, ಸಿದ್ಧಲಿಂಗಯ್ಯ, ರಂಗಸ್ವಾಮಯ್ಯ, ದೇವರಾಜ್, ತ್ಯಾಗರಾಜು, ಎನ್.ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.