ಅಕ್ಷರ ಸೂರ್ಯ

 

​ಕತ್ತಲೆ ಆವರಿಸಿದ ಕಾಲದ ಗರ್ಭದಿ
ಜ್ಞಾನದ ದೀವಿಗೆಯ ಹಚ್ಚಿದೆ
ಅವಮಾನದ ಸುಳಿಯಲ್ಲಿ ನೊಂದ ಜೀವಗಳಿಗೆ
ಅಭಯದ ಹಸ್ತವ ಚಾಚಿದೆ ನೀ..

​ಅಕ್ಷರವನ್ನೇ ಅಸ್ತ್ರವನ್ನಾಗಿಸಿ
ಗುಲಾಮಗಿರಿಯ ಸಂಕೋಲೆ ಮುರಿದೆ
ಮಹಾಡ್ ಕೆರೆಯ ನೀರ ಹನಿಹನಿಯಲ್ಲೂ
ಸ್ವಾಭಿಮಾನದ ಕಿಚ್ಚನು ಹಚ್ಚಿದೆ ನೀ..

ಸಂವಿಧಾನದ ಪುಟಪುಟಗಳಲಿ ಸಮಾನತೆ ಬರೆದು
ಭಾರತ ಭಾಗ್ಯವ ಬದಲಿಸಿದೆ
ಜಾತಿ ರಹಿತ ಸಮಾಜದ ಕನಸನು ಕಂಡು
ಭ್ರಾತೃತ್ವದ ಬೀಜವ ಬಿತ್ತಿದೆ ನೀ..

​ಕಲಿಯಿರಿ, ಸಂಘಟಿತರಾಗಿ
ಹೋರಾಡಿ ಎಂದು
ಸರ್ವ ಶೋಷಿತರ ದನಿಯಾಗಿ ಗುಡುಗಿದೆ
ಬೌದ್ಧ ಧಮ್ಮದ ಶಾಂತಿಯ ಹಾದಿಯಲಿ
ಮನುಕುಲದ ಬೆಳಗಿದ ಸೂರ್ಯನು ನೀ..

ಕಾನೂನು ಕವಚವ ನಮಗೆ ತೊಡಿಸಿ
ಹಕ್ಕುಗಳ ರಕ್ಷಿಸಿದ ಕಾವಲುಗಾರ
ವಿಶ್ವವೇ ಸ್ಮರಿಸುವ ಪ್ರಜ್ಞೆಯ ಆಗರ
ಕರುಣಾ ಸಾಗರ ನೀ..

ಮಹಿಳೆಯ ಬಾಳಿಗೆ ಬೆಳಕನು ತಂದು
ಸಮಾನ ಹಕ್ಕುಗಳ ಸಂಹಿತೆ ಬರೆದು
ಮನುಷ್ಯತ್ವವೇ ಶ್ರೇಷ್ಠವೆಂದು ಸಾರಿದ
ಮಹಾನ್ ಮಾನವತಾವಾದಿ ಧೀರ..

ಹನ್ನೆರಡು ಗಂಟೆಯ ಶ್ರಮದ ಭಾರವ ಇಳಿಸಿ
ಎಂಟು ಗಂಟೆಯ ದುಡಿಮೆಗೆ ನಾಂದಿ ಹಾಡಿ
ಕಾರ್ಮಿಕರ ಬೆವರಿನ ಹನಿಗೂ ಬೆಲೆಯ ತಂದು
ಹಕ್ಕುಗಳ ರಕ್ಷೆಗೆ ಶಾಸನ ರೂಪಿಸಿದವ ನೀ..

ದುಡಿಯುವ ಕೈಗಳಿಗೆ ಭರವಸೆಯ ವಿಮೆ ನೀಡಿ
ಬದುಕು ಕಟ್ಟಿಕೊಟ್ಟ ಶ್ರಮಿಕರ ಬಂಧು
ಸಂಘಟಿತ ಶಕ್ತಿಯ ಮಹಿಮೆಯ ಸಾರುತ
ಕಾರ್ಮಿಕ ಕುಲದ ಕಣ್ಮಣಿಯಾದವ
ಬಂಧು..

ಸಮತೆಯ ಮಂತ್ರವ ಎದೆಯಲಿ ಬಿತ್ತಿ
ಮಮತೆಯ ಸೆಲೆಯನು ತೋರಿದೆ
ಕರುಣೆಯ ಬೆಳಕಲಿ ಬುದ್ಧನ ಹಾದಿಯ
ಜಗಕೆ ಸಾರಿದ ದೀಪವೆ..

ಜಾತಿ ಭೇದದ ವಿಷವನು ಅಳಿಸಿ
ಒಂದೇ ಕುಲವೆಂದು ಸಾರಿದ ಚತುರ
ಎಲ್ಲರ ಮನದಲಿ ಮನುಷ್ಯತ್ವ ತುಂಬಿದ
ಕರುಣಾಳು ತಂದೆ ಬಾಬಾಸಾಹೇಬ ಅಂಬೇಡ್ಕರ್..

ತಮ್ಮೆಲ್ಲರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು

– ಪಿ.ಬಿ. ಆನಂದ, ಉಪನ್ಯಾಸಕರು

Leave a Reply

Your email address will not be published. Required fields are marked *

error: Content is protected !!