
ವೈಸಿರಿ ಇನ್ಸ್ಟಿಟ್ಯೂಟ್ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ: ಸಾಧಕಿಯರಿಗೆ ಗೌರವ
ತುಮಕೂರು: ಮಹಿಳೆಯರು ಕೇವಲ ಅದೃಷ್ಟದಿಂದ ಸಾಧನೆ ಮಾಡುವುದಿಲ್ಲ, ಬದಲಾಗಿ ತಮ್ಮ ಶ್ರಮ ಮತ್ತು ಛಲದಿಂದ ಗುರಿ ತಲುಪುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅಭಿಪ್ರಾಯಪಟ್ಟರು.
ನಗರದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯಲ್ಲಿ ಶನಿವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಜೀವನದ ಕಥೆಗೆ ನೀವೇ ಹಿರೋಯಿನ್. ಸಮಾಜದಲ್ಲಿ ನಿಮ್ಮ ಸ್ಥಾನವನ್ನು ನೀವೇ ನಿರ್ಧರಿಸಬೇಕು. ನೀವು ಇಲ್ಲಿರುವುದು ಕೇವಲ ಅದೃಷ್ಟದಿಂದಲ್ಲ, ನಿಮ್ಮ ಪರಿಶ್ರಮದಿಂದ ಎಂದು ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ತುಂಬಿದರು.
ಇತಿಹಾಸದಲ್ಲಿ ಗಾರ್ಗಿ, ಮೈತ್ರೇಯಿಯಂತಹ ವಿದ್ವಾಂಸರಿದ್ದರೂ ಅವರು ಗಣ್ಯರ ಕುಟುಂಬಕ್ಕೆ ಸೀಮಿತವಾಗಿದ್ದರು. ಆದರೆ ಇಂದು ಸಾಮಾನ್ಯ ಮಹಿಳೆಯರಿಗೂ ಶಿಕ್ಷಣ ಮತ್ತು ಸಮಾನತೆಯ ಅವಕಾಶವಿದೆ. ಮಹಿಳೆಯನ್ನು ದೇವತೆಯೆಂದು ಪೂಜಿಸಿ, ಅವಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರವೃತ್ತಿಯನ್ನು ಅವರು ಖಂಡಿಸಿದರು.
ತಮ್ಮ ಜೀವನದ ಸವಾಲುಗಳನ್ನು ಹಂಚಿಕೊಂಡ ನ್ಯಾಯಾಧೀಶರು, “ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯದಿಂದ ಬಂದ ಮೊದಲ ಮಹಿಳಾ ನ್ಯಾಯಾಧೀಶೆಯಾಗುವುದು ಸುಲಭವಿರಲಿಲ್ಲ. ಮದುವೆಯ ನಂತರ ಐದು ವರ್ಷಗಳ ಕಾಲ ಗೃಹಿಣಿಯಾಗಿದ್ದರೂ, ಹಠ ಬಿಡದೆ ಓದಿ ಜುಡಿಷಿಯಲ್ ಪರೀಕ್ಷೆಯಲ್ಲಿ ಯಶಸ್ವಿಯಾದೆ. ಹೆರಿಗೆಯಾದ ಎಂಟೇ ದಿನಗಳಲ್ಲಿ ಪರೀಕ್ಷೆ ಬರೆದ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ” ಎಂದು ಸ್ಮರಿಸಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಮಾತ್ರ ಗೃಹಹಿಂಸೆಯಂತಹ ಪಿಡುಗುಗಳಿಂದ ಹೊರಬರಲು ಸಾಧ್ಯ. ನಿಮ್ಮ ಭಾವನೆಗಳ ಮೇಲೆ ನಿಮಗೇ ನಿಯಂತ್ರಣವಿರಲಿ. ಮೊದಲು ನಿಮ್ಮನ್ನು ನೀವು ಪ್ರೀತಿಸಿ, ಆಗಲೇ ಇತರರನ್ನು ಗೌರವಿಸಲು ಸಾಧ್ಯ. ಸಾಮಾಜಿಕ ಜಾಲತಾಣಗಳ ವ್ಯಾಮೋಹಕ್ಕೆ ಬಲಿಯಾಗದೆ, ನಿಮ್ಮ ಸಮಯವನ್ನು ಸಾಧನೆಗಾಗಿ ಮೀಸಲಿಡಿ ಎಂದು ಹೇಳಿದರು.
ವಿಟೆಕ್ ಸೊಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕಿ ನಾಗಪ್ರಿಯಾ ಕೆ.ಜೆ. ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಒಂದು ಕನಸು, ಗುರಿ ಮತ್ತು ಮಹತ್ವಾಕಾಂಕ್ಷೆ ಇರಬೇಕು. ಕೇವಲ ದೃಷ್ಟಿಕೋನವಿದ್ದರೆ ಸಾಲದು, ಆ ಕನಸನ್ನು ನನಸಾಗಿಸಲು ನಿರಂತರ ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಭಾರತೀಯ ಮಹಿಳಾ ದೃಷ್ಟಿಚೇತನ ಕ್ರಿಕೆಟ್ ತಂಡದ ಆಟಗಾರ್ತಿ ಕಾವ್ಯ ಎನ್.ಆರ್ ಮಾತನಾಡಿ, ಜೀವನದಲ್ಲಿ ಅಡೆತಡೆಗಳು ಎದುರಾದಾಗ ಕುಗ್ಗಬಾರದು. ಆರಂಭದಲ್ಲಿ ನಾನೊಬ್ಬಳೇ ದೃಷ್ಟಿಚೇತನ ಎಂದು ಭಾವಿಸಿ ನೋವು ಅನುಭವಿಸಿದ್ದೆ, ಆದರೆ ಸಮರ್ಥನಂ ಸಂಸ್ಥೆ ನೀಡಿದ ಪೆÇ್ರೀತ್ಸಾಹ ನನ್ನ ಬದುಕನ್ನೇ ಬದಲಿಸಿತು ಎಂದು ಸ್ಮರಿಸಿದರು.
ಭಾರತೀಯ ಮಹಿಳಾ ದೃಷ್ಟಿಚೇತನ ಕ್ರಿಕೆಟ್ ತಂಡದ ಮ್ಯಾನೇಜರ್ ಶಿಖಾ ಮಾತನಾಡಿ, ಕಾವ್ಯರಂತಹ 16 ಜನ ಹೆಣ್ಣುಮಕ್ಕಳು ಇಂದು ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇತ್ತೀಚಿನ ಚಾಂಪಿಯನ್ಶಿಪ್ನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಭಾರತ ಜಯಭೇರಿ ಬಾರಿಸಿದೆ ಎಂದು ಹೆಮ್ಮೆಯಿಂದ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಅಮೂಲ್ಯ ಜಿ ಅವರು ಸ್ವಾಗತಿಸಿದರು. ವಿದ್ಯಾವಾಹಿನಿ ಸಮೂಹ ಸಂಸ್ಥೆಯ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಹುಮೇರಾ ಪರ್ವೀನ್, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಸಿಡಿಸಿ ಮುಖ್ಯಸ್ಥರು ಹಾಗೂ ಎಂ.ಬಿ.ಎ ವಿಭಾಗದ ನಿರ್ದೇಶಕರಾದ ಡಾ. ಪ್ರಸನ್ನಕುಮಾರ್ ಟಿ.ಎಂ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು