ತುಮಕೂರು: ತಾಲ್ಲೂಕಿನ ಬೆಳ್ಳಾವಿಯಲ್ಲಿ ಸೋಮವಾರ ಇತಿಹಾಸ ಪ್ರಸಿದ್ಧ ಪ್ರಸನ್ನ ಜಗದಾಂಬ ಸಮೇತ ಸೋಮೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ವೈಭವದಿಂದ ನೆರವೇರಿತು. ಅಲಂಕೃತ ರಥದಲ್ಲಿ ದೇವರುಗಳನ್ನು ಪ್ರಷ್ಠಾಪಿಸಿ, ಪೂಜೆ ಸಲ್ಲಿಸಿ ಮಂಗಳವಾದ್ಯಗಳೊಂದಿಗೆ ರಥೋತ್ಸವ ನೆರವೇರಿತು. ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ಬೆಳ್ಳಾವಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ರಥೋತ್ಸವದ ಅಂಗವಾಗಿ ಬೆಳ್ಳಾವಿಯ ವಿವಿಧೆಡೆ ಕೊಪ್ಪಲುಗಳಲ್ಲಿ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಟಿ.ಸಿ.ಪ್ರಭಾಕರ್ ಅವರು ಇಲ್ಲಿನ ನಿಧಿಶ್ರೀ ಫಾರಂನಲ್ಲಿ ಏರ್ಪಡಿಸಿದ್ದ ಅನ್ನದಾಸೋಹ ಸೇವೆಯನ್ನು ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಉದ್ಘಾಟಿಸಿದರು.
ಈ ವೇಳೆ ಮಾತಾಡಿದ ಸ್ವಾಮೀಜಿ, ಅನ್ನದಾಸೋಹ ಶೇಷ್ಠ ಸೇವೆ. ಹಸಿದವರಿಗೆ ಅನ್ನ ನೀಡುವುದು ನಮ್ಮ ಸಂಸ್ಕøತಿ. ಮಠಮಾನ್ಯಗಳನ್ನು ಆಗಿನಿಂದಲೂ ದಾಸೋಹ ಪರಂಪರೆ ಅನುಸರಿಸಿಕೊಂಡು ಸಮಾಜಕ್ಕೆ ಮಾದರಿಯಾಗಿವೆ. ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳು ಆರಂಭಿಸಿದ ಅಕ್ಷರ, ಅನ್ನ, ಆಶ್ರಯದ ತ್ರಿವಿಧ ದಾಸೋಹ ಆದರ್ಶವಾಗಿದೆ. ಸರ್ಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತರಲು ಸಿದ್ಧಗಂಗಾ ಮಠದ ಅನ್ನದಾಸೋಹ ಸೇವೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಪ್ರತಿವರ್ಷದ ಜಾತ್ರೆ ಸಂದರ್ಭದಲ್ಲಿ ಟಿ.ಸಿ.ಪ್ರಭಾಕರ್ ಕುಟುಂಬದವರು ದಾಸೋಹ ವ್ಯವಸ್ಥೆ ಮಾಡಿ ರಥೋತ್ಸವಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಇಂದು ಕೂಡಾ ಸಾವಿರಾರು ಭಕ್ತರು ಊಟ ಮಾಡಿದರು. ಇದು ಕೂಡಾ ದೇವರಿಗೆ ಸಲ್ಲಿಸುವ ಭಕ್ತಿ. ಮನುಷ್ಯನಿಗೆ ಬೇರೆ ಏನು ಕೊಟ್ಟರೂ ತೃಪ್ತಿ ಆಗಲಾರದು, ಹಸಿದವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ಸಂತೃಪ್ತಿ ಪಡಿಸಬಹುದು. ಅಂತಹ ಕಾರ್ಯವನ್ನು ಪ್ರಭಾಕರ್ ಮಾಡುತ್ತಾ ಬಂದಿದ್ದಾರೆ ಎಂದು ಸ್ವಾಮೀಜಿ ಶ್ಲಾಘಿಸಿದರು.
ದಾಸೋಹ ವ್ಯವಸ್ಥೆ ಮಾಡಿದ್ದ ಟೂಡಾ ಮಾಜಿ ಸದಸ್ಯ ಟಿ.ಸಿ.ಪ್ರಭಾಕರ್ ಮಾತನಾಡಿ, ಕಳೆದ 28 ವರ್ಷಗಳಿಂದ ಪ್ರತಿ ವರ್ಷದ ಬೆಳ್ಳಾವಿ ಸೋಮೇಶ್ವರಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಅನ್ನಸಂತರ್ಪಣೆ ಮಾಡಿಕೊಂಡು ಬರಲಾಗುತ್ತಿದೆ. ಇದೊಂದು ದೇವರ ಸೇವೆ ಎಂದು ಮಾಡಿಕೊಂಡುಬರುತ್ತಿದ್ದೇವೆ ಎಂದ ಅವರು, ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಇದರ ಅಂಗವಾಗಿ ಮಾಜಿ ಶಾಸಕ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್.ನಿಂಗಪ್ಪ, ಸಾರಿಗೆ ಕ್ಷೇತ್ರದ ಸಾಧಕ ಜಿ.ರಮೇಶ್‍ಬಾಬು, ಉದ್ಯಮಿ ಓಂ ಸ್ಟಾಂಜಾ, ಇಂಜಿನಿಯರ್ ಸುನಿಲ್ ಇವರನ್ನು ಈ ವೇಳೆ ಗೌರವಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ಮಂಜುನಾಥ್, ಡಿಪೋ ರಾಜೇಂದ್ರ ಸೇರಿದಂತೆ ವಿವಿಧ ಮುಖಂಡರು, ಸಂಘಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.