ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಾಯ ಅನುದಾನಿತ ಶಾಲಾಕಾಲೇಜು ಸಿಬ್ಬಂದಿ ಸಂಘದಿಂದ ಹೋರಾಟದ ಎಚ್ಚರಿಕೆ

ತುಮಕೂರು: ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಪ್ರಕಾರ ಸರ್ಕಾರ ರಾಜ್ಯದ ಎಲ್ಲಾ ಅನುದಾನಿತ ಶಾಲಾಕಾಲೇಜು ಸಿಬ್ಬಂದಿಗೆ ನಿಶ್ಚಿತ ಪಿಂಚಣಿ ಯೋಜನೆ ಜಾರಿ ಮಾಡಲೇಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸುವುದಾಗಿ ರಾಜ್ಯ ಅನುದಾನಿತ ಶಾಲಾಕಾಲೇಜು ನೌಕರರ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶನಿವಾರ ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ರಾಜ್ಯ ಅನುದಾನಿ ಶಾಲಾಕಾಲೇಜು ಪಿಂಚಣಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಿಂಚಣಿ ಹೋರಾಟದಲ್ಲಿ ತಾವು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಆಕ್ರೋಶಗೊಂಡು ಭಾವುಕರಾಗಿ ಹೇಳಿದರು.

ಪಿಂಚಣಿ ಯೋಜನೆ ನಿಮ್ಮ ಹಕ್ಕು, ನೀವು ಅದನ್ನು ಪಡೆದೇ ತೀರಬೇಕು ಎಂದು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2014ರಲ್ಲಿ ನಮ್ಮ ಹೋರಾಟ ಬೆಂಬಲಿಸಿ ತಿಳಿಸಿದ್ದರು. ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಹಾಗೂ ಇವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪಿಂಚಣಿ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದುಕೊಂಡು ರಾಜ್ಯದ ಅನುದಾನಿತ ಶಾಲಾಕಾಲೇಜು ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

 

ಹಿಂದಿನ ಸಭೆಯಲ್ಲಿ ರಾಜ್ಯದ ಅನುದಾನಿತ ಶಾಲಾಕಾಲೇಜು ನೌಕರರ ಪಿಂಚಣಿಗೆ ಹತ್ತು ಸಾವಿರ ಕೋಟಿ ರೂ. ಮೀಸಲಿಡಬೇಕು ಎಂದು ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು. ಆದರೆ, ನಮ್ಮ ಸಂಘ ರಾಜ್ಯದ ಅನುದಾನಿತ ಶಾಲಾಕಾಲೇಜುಗಳ ನಿವೃತ್ತ ನೌಕರರ ಮಾಹಿತಿ ಸಂಗ್ರಹಿಸಿದ್ದು, ಅದರ ಪ್ರಕಾರ ಪಿಂಚಣಿ ವೆಚ್ಚ ಕೇವಲ 90 ಕೋಟಿ ರೂ. ತಗುಲುತ್ತದೆ ಎಂದು ಸರ್ಕಾರಕ್ಕೆ ಮನಗಾಣಿಸಿದ್ದೇವೆ ಎಂದು ಜಿ.ಹನುಮಂತಪ್ಪ ತಿಳಿಸಿದರು.
ಈ ಸಭೆ ಅನುದಾನಿತ ಶಾಲಾಕಾಲೇಜು ನೌಕರರ ತೀವ್ರ ರೂಪದ ಹೋರಾಟಕ್ಕೆ ನಾಂದಿಯಾಗಲಿದೆ. ಮುಂದಿನ ಎಲ್ಲಾ ಹಂತದ ಹೋರಾಟಗಳಿಗೆ ಅನುದಾನಿತ ಶಾಲಾಕಾಲೇಜು ಸಿಬ್ಬಂದಿ ಸಜ್ಜಾಗಬೇಕು ಎಂದು ಕರೆ ನೀಡಿದ ರಾಜ್ಯಾಧ್ಯಕ್ಷರು, ಹೋರಾಟಕ್ಕೆ ಅವಕಾಶ ಮಾಡದೆ ಸರ್ಕಾರ ಎಚ್ಚೆತ್ತುಕೊಂಡು ಪಿಂಚಣಿ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

 

ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಆರೋಗ್ಯ ಸಂಜೀವಿನಿ, ಶಿಶುಪಾಲನಾ ರಜೆ, ಹಬ್ಬದ ಮುಂಗಡ ಹಣ ನೀಡುವುದು ಮುಂತಾದ ಸವಲತ್ತನ್ನು ಅನುದಾನಿತ ಶಾಲಾಕಾಲೇಜು ಸಿಬ್ಬಂದಿಗೂ ವಿಸ್ತರಿಸಬೇಕು ಎಂದು ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಸರ್ಕಾರವನ್ನು ಒತ್ತಾಯಿಸಿದರು.

 

 

ರಾಜ್ಯ ಸಂಘದ ಗೌರವಾಧ್ಯಕ್ಷ ಬುಕ್ಕಂಬುದಿ ನಾಗರಾಜು, ಖಜಾಂಚಿ ಸಿ.ವಿ.ವೆಂಕಟಾಚಲ, ನಿಕಟಪೂರ್ವ ಸಂಚಾಲಕ ಜಾಲಮಂಗಲ ನಾಗರಾಜ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ, ಕಾರ್ಯಾಧ್ಯಕ್ಷ ರಾಜಗೋಪಾಲ್, ಉಪಾಧ್ಯಕ್ಷ ನಿಡಸಾಲೆ ಪ್ರಸಾದ್, ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಸತೀಶ್ ಸಿ.ಜಿ., ತುಮಕೂರು ಶೈಕ್ಷಣಿಕ ಜಿಲ್ಲಾಧ್ಯಕ್ಷ ಹನುಮೇಶ್, ಮಧುಗಿರಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಧರ್ಮೇಂದ್ರಪ್ರಸಾದ್, ಕಾರ್ಯದರ್ಶಿಗಳಾದ ಸಿದ್ದೇಶ್, ಕೆ.ಸಿ.ರಾಮರಾಜ್, ಸತೀಶ್, ರವೀಶ್, ಸಿದ್ಧವೀರಪ್ಪ, ಶ್ರೀನಿವಾಸ್, ರಾಮಕೃಷ್ಣಪ್ಪ ಸೇರಿದಂತೆ ಸಂಘದ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!