ತುಮಕೂರು: ದಸರಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಸಹಯೋಗದಲ್ಲಿ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಾಟಾಗಿರುವ 11 ದಿನಗಳ ತುಮಕೂರು ರಂಗ ದಸರಾ ನಾಟಕೋತ್ಸವವನ್ನು ಸೋಮವಾರ ಉದ್ಘಾಟನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ಕುರುಕ್ಷೇತ್ರದ ಶ್ರೀಕೃಷ್ಣ ಪಾತ್ರದ ರಂಗಗೀತೆ ಹಾಡಿ ರಂಜಿಸಿದರು. ಸಚಿವರ ರಂಗಗೀತೆಗೆ ಮನಸೋತ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಆನಂದಿಸಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಸಚಿವವ ಡಾ.ಪರಮೇಶ್ವರ್, ಅನೇಕ ಕಲಾವಿದರನ್ನು ನಾಡಿಗೆ ಕೊಡುಗೆ ಕೊಟ್ಟ ತುಮಕೂರು ಜಿಲ್ಲೆಯು ರಂಗಭೂಮಿಯ ತವರೂರು. ಜಿಲ್ಲೆಯ ಡಾ.ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣ್ಣಯ್ಯ ಸೇರಿದಂತೆ ಅನೇಕ ಹಿರಿಯವರು ಸಾವಿರಾರು ಕಲಾವಿದರನ್ನು ನಾಡಿಗೆ ನೀಡಿದ್ದಾರೆ. ಇಂತಹ ಮಹನೀಯರ ಕರ್ಮಭೂಮಿಯಲ್ಲಿ ರಂಗ ದಸರಾ ಆಯೋಜನೆ ಮಾಡಿರುವುದು ಅರ್ಥಪೂರ್ಣ ಹಾಗೂ ಆ ಕಲಾವಿದರಿಗೆ ಸಲ್ಲಿಸುವ ಗೌರವ ಎಂದರು.
ಹಾಲಿವುಡ್, ಬಾಲಿವುಡ್ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ರಂಗಭೂಮಿಯಿಂದಲೇ ಬಂದವರು. ನಮ್ಮ ಡಾ.ರಾಜ್ಕುಮಾರ್ ಆವರೂ ರಂಗಭೂಮಿಯಿಂದಲೇ ಕಲಾ ಬದುಕು ಆರಂಭಿಸಿದರು. ಸಮಾಜದ ಆಗುಹೋಗುಗಳನ್ನು ಜನರಿಗೆ ತಲುಪಿಸಲು ನಮ್ಮ ಹಿರಿಯರು ಕಂಡುಕೊಂಡಿದ್ದ ಮಾಧ್ಯಮವೇ ರಂಗಭೂಮಿ. ಈಗಿನ ಸಿನಿಮಾ, ಸಾಮಾಜಿಕ ಜಾಲತಾಣಗಳ ಕಾಲದಲ್ಲೂ ರಂಗಭೂಮಿಯ ಮಹತ್ವ ಕಡಿಮೆಯಾಗಿಲ್ಲ. ರಂಗಕಲೆಗೆ ಅಷ್ಟು ಶಕ್ತಿ ಇದೆ ಎಂದು ಹೇಳಿದರು.
ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ, ತುಮುಲ್ ಅಧ್ಯಕ್ಷ ವೆಂಕಟೇಶ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎ.ಅಶೋಕ್, ನಗರಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಸಚಿವ ಡಾ.ಪರಮೇಶ್ವರ್ ಪತ್ನಿ ಕನ್ನಿಕಾ ಪರಮೇಶ್ವರ್, ಸಮಾಜ ಸೇವಕ ಪಾಪಣ್ಣ, ನಾಟಕ ಅಕಾಡೆಮಿ ಸದಸ್ಯ, ಪತ್ರಕರ್ತ ಉಗಮ ಶ್ರೀನಿವಾಸ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ, ಹಿರಿಯ ಕಲಾವಿದರಾದ ಡಾ.ಲಕ್ಷ್ಮಣದಾಸ್, ಎಂ.ವಿ.ನಾಗಣ್ಣ, ಯೋಗಾನಂದಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎ.ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.