ಬಲಿಜರು ತಪ್ಪದೇ 9ನೇ ಕಾಲಂನಲ್ಲಿ ಬಲಿಜ ಎಂದು ನಮೂದಿಸಿ’

ಸಮಾಜ ಬಾಂಧವರಿಗೆ ಜಿಲ್ಲಾ ಬಲಿಜ ಸಂಘದ ಮುಖಂಡರ ಮನವಿ

ತುಮಕೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಪೂರಕವಾಗಿ ಈ ತಿಂಗಳ 22ರಿಂದ ಆರಂಭವಾಗುವ ಜಾತಿ ಜನಗಣತಿಯಲ್ಲಿ ಜಿಲ್ಲೆಯ ಬಲಿಜ ಸಮಾಜದವರು ತಪ್ಪದೇ ನಿಖರ ಮಾಹಿತಿ ನೀಡಿ 9ನೇ ಕಾಲಂನಲ್ಲಿ ಕೋಡ್ ನಂ. ಎ-0120ರಲ್ಲಿ ಬಲಿಜ ಎಂಬುದಾಗಿ ನಮೂದಿಸಬೇಕು ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಆಂಜನಪ್ಪ ಹಾಗೂ ಖಜಾಂಚಿ, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಮನವಿ ಮಾಡಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ರಾಜ್ಯ ಬಲಿಜ ಸಂಘದ ಸಲಹೆ ಮೇರೆಗೆ ಆಯಾ ಜಿಲ್ಲಾ ಸಂಘಗಳ ಜಿಲ್ಲೆಯ ಬಲಿಜ ಬಾಂಧವರಲ್ಲಿ ಈ ಕುರಿತು ತಿಳುವಳಿಕೆ ನೀಡಲು ಸಲಹೆ ನೀಡಿದ್ದಾರೆ ಎಂದು ಹೇಳಿದ ಎಸ್.ಪಿ.ಚಿದಾನಂದ್, ಸಮೀಕ್ಷೆಯ ಮಾಹಿತಿ ಸಂಗ್ರಹಕ್ಕಾಗಿ ಮನೆಮನೆಗೆ ಬರುವ ಸಮೀಕ್ಷಾ ಸಿಬ್ಬಂದಿ ನಿಮ್ಮ ಕುಟುಂಬದ ಸ್ಥಿತಿಗತಿ ಸಂಬಂಧ ಸುಮಾರು 60 ಪ್ರಶ್ನೆಗಳನ್ನು ಕೇಳುತ್ತಾರೆ. ಎಲ್ಲಾ ಪ್ರಶ್ನೆಗಳಿಗೂ ನಿಖರ ಮಾಹಿತಿ ನೀಡಿ, ಪೂರಕ ದಾಖಲಾತಿ ಒದಗಿಸಿ ಎಂದು ಹೇಳಿದರು.

ಸಮೀಕ್ಷೆಯಲ್ಲಿ ನಿಮ್ಮ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಸ್ತುಸ್ಥಿತಿಯ ಸ್ವಯಂಘೋಷಣೆ. ಯಾವ ವಿಚಾರವನ್ನೂ ಬಚ್ಚಿಡದೆ ನಿಖರವಾದ ಮಾಹಿತಿ ನೀಡಬೇಕು. ಮುಖ್ಯವಾಗಿ 9ನೇ ಕಾಲಂನಲ್ಲಿ ತಪ್ಪದೇ ಬಲಿಜ ಎಂದು ನಮೂದಿಸಬೇಕು. ಉಪಜಾತಿಯ ಬಗ್ಗೆ ಹೆಚ್ಚು ಚರ್ಚಿಸುವ ಅವಶ್ಯಕತೆ ಇರುವುದಿಲ್ಲ. ಈ ಮೂಲಕ ರಾಜ್ಯದಲ್ಲಿ ಬಲಿಜ ಸಮಾಜದವರ ಜನಸಂಖ್ಯೆಯ ನಿಖರ ಮಾಹಿತಿ ದಾಖಲಾಗಬೇಕು ಎಂದು ಹೇಳಿದರು.

ಒಟ್ಟಾರೆಯಾಗಿ ನಮ್ಮ ಜಾತಿ ಸಮೀಕ್ಷೆ ಮುಖ್ಯವಾದ ವಿಚಾರವಾಗಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ದೃಷ್ಟಿಯಿಂದ ಗಮನಾರ್ಹ ತಿರುವುಗಳನ್ನು ತೆಗೆದುಕೊಳ್ಳುವ ಉದ್ದೇಶವಾಗಿದ್ದು ಮುಂದಿನ ದಿನಗಳಲ್ಲಿ ಬಲಿಜ ಸಮಾಜ 3ಎಯಿಂದ 2ಎ ವರ್ಗಕ್ಕೆ ಸೇರಬಹುದಾಗಿದ್ದು ಸರ್ಕಾರಿ ಉದ್ಯೋಗ ಹಾಗೂ ರಾಜಕೀಯವಾಗಿ ಸ್ಥಾನಮಾನ ಪಡೆದು ನಮ್ಮ ಬಲಿಜ ಜನಾಂಗ ಮುಂದೆ ಬರಲು ನಮ್ಮ ಸಮಾಜದ ನೀವೆಲ್ಲರೂ ಕೂಡಾ 9ನೇ ಕಾಲಂನಲ್ಲಿ ಬಲಿಜ ಎಂದು ನಮೂದಿಸಬೇಕು ಎಂದು ಎಸ್.ಪಿ.ಚಿದಾನಂದ್ ಕೋರಿದರು.
ಈ ಸಮೀಕ್ಷೆಯಿಂದ ರಾಜ್ಯದಲ್ಲಿ ಬಲಿಜ ಜನಾಂಗದ ನಿಖರ ಸಂಖ್ಯೆ ಸರ್ಕಾರದ ದಾಖಲೆ ಸೇರುತ್ತದೆ. ಆ ಮೂಲಕ ನಮ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಎಷ್ಟರಮಟ್ಟಿಗೆ ಹಿಂದುಳಿದಿದೆ ಎನ್ನುವ ವಿಚಾರ ಸರ್ಕಾರದ ಗಮನಕ್ಕೆ ಬರಲಿದ್ದು ನಮ್ಮ ಜನಸಂಖ್ಯೆ ಆಧಾರದಲ್ಲಿ ನಮಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಅವಕಾಶವಾಗುತ್ತದೆ. ಸಮೀಕ್ಷೆ ವೇಳೆ ಕೇಳುವ 60 ಪ್ರಶ್ನೆಗಳಿಗೆ ವಸ್ತುಸ್ಥಿತಿಯ ವಿವರಗಳನ್ನು ನಮೂದಿಸಬೇಕು. ಮಾಹಿತಿ ನೋಂದಾಯಿಸಲು ಗೊಂದಲವಾದರೆ ಅನುಭವಿಗಳ ಸಲಹೆ, ಸಹಕಾರ ಪಡೆಯಬೇಕು. ವೈಯಕ್ತಿಕ ಮಾಹಿತಿಗಳ ಬಗ್ಗೆ ತಪ್ಪಾಗಿ ಮಾಹಿತಿ ಕೊಟ್ಟಲ್ಲಿ ಬಲಿಜ ಸಮಾಜಕ್ಕೆ ಅನ್ಯಾಯ ಮಾಡಿದಂತೆ ಹಾಗೂ ತಾವು ಆತ್ಮದ್ರೋಹ ಮಾಡಿಕೊಂಡಂತಾಗುತ್ತದೆ ಎಂದು ಎಸ್.ಪಿ.ಚಿದಾನಂದ ಸಮಾಜ ಬಾಂಧವರಿಗೆ ಹೇಳಿದರು.
ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಆಂಜನಪ್ಪ ಮಾತನಾಡಿ, ಸಮೀಕ್ಷೆಗೆ ಬಂದವರು ಕೇಳುವ 60 ಪ್ರಶ್ನೆಗಳಿಗೂ ಸರಿಯಾದ ಮಾಹಿತಿ ನಮೂದಿಸಬೇಕು. 9ನೇ ಕಾಲಂನಲ್ಲಿ ಬಲಿಜ ಎಂದು ಕಡ್ಡಾಯವಾಗಿ ನಮೂದಿಸಬೇಕು. ಉಪಜಾತಿಗಳು ಈ ಸಂದರ್ಭದಲ್ಲಿ ಅವಶ್ಯಕತೆ ಇರುವುದಿಲ್ಲ. ಉಪಜಾತಿಗಳ ಬಗ್ಗೆ ಆಸಕ್ತಿ ಇದ್ದವರು ಬೇಕಾದರೆ 11ನೇ ಕಾಲಂನಲ್ಲಿ ಬರೆಸಬಹುದು. ಯಾವುದೇ ಗೊಂದಲಕ್ಕಿಡಾಗದೆ ಮಾಹಿತಿ ನೀಡುವಂತೆ ತಿಳಿಸಿದರು.

 

ಹಿಂದುಳಿದ ವರ್ಗಗಳ ಪರ ಅನೇಕ ವರ್ಷಗಳಿಂದ ತಾವು ಹೋರಾಟ ಮಾಡಿಕೊಂಡು ಬಂದಿದ್ದು, ಆ ಸಮುದಾಯದವರು ತಮ್ಮ ಸಮಾಜದ ಮುಖಂಡರ ಸಲಹೆ ಅನುಸರಿಸಿ 9ನೇ ಕಾಲಂನಲ್ಲಿ ತಮ್ಮ ಜಾತಿಯನ್ನು ನೋಂದಾಯಿಸಬೇಕು ಎಂದು ಟಿ.ಆರ್.ಆಂಜನಪ್ಪ ಹೇಳಿದರು.

 

ಸಂಘದ ಉಪಾಧ್ಯಕ್ಷ ಮಾರುತಿ ಗಣೇಶ್, ಜಂಟಿ ಕಾರ್ಯದರ್ಶಿ ಜಯಣ್ಣ, ನಿವೃತ್ತ ಪ್ರಾಚಾರ್ಯ ಪ್ರಕಾಶ್, ಮಹಿಳಾ ಘಟಕ ಅಧ್ಯಕ್ಷೆ ಗೀತಮ್ಮ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!