ಒಳಮೀಸಲಾತಿ ಹಂಚಿಕೆ: ಸದ್ಯಕ್ಕೆ ಸಮಾಧಾನಕರ ಮಾದಿಗ ಸಮುದಾಯಕ್ಕೆ ನಿರಾಳ ಸ್ಥಿತಿ: ಡಾ.ಲಕ್ಷ್ಮೀಕಾಂತ್

ತುಮಕೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಉಪಜಾತಿಗಳಿಗೆ ಹಂಚಿಕೆ ಮಾಡಿರುವ ಮೀಸಲಾತಿ ಪ್ರಮಾಣ ಸಮಾಧಾನ ತಂದಿದೆ. ಇದೂವರೆಗೆ ಉಸಿರು ಕಟ್ಟಿದ ಪರಿಸ್ಥಿತಿಯಲ್ಲಿದ್ದ ಮಾದಿಗ ಸಮಾಜ ಈ ನಿರ್ಧಾರದಿಂದ ತಕ್ಕಮಟ್ಟಿಗೆ ಉಸಿರಾಡುವಷ್ಟು ನಿರಾಳವಾಗಿದೆ ಎಂದು ಒಳಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಮಾದಿಗ ಸಮುದಾಯದ ಮುಖಂಡ ನಗರದ ಡಾ.ಲಕ್ಷ್ಮೀಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.

ಇದರೊಂದಿಗೆ ಮಾದಿಗ ಸಮುದಾಯಕ್ಕೆ ಶಕ್ತಿ ಸಿಕ್ಕಿದಂತಾಗಿದೆ. ಪರಿಶಿಷ್ಟ ಜಾತಿಗಾಗಿ ಶಾಶ್ವತ ಆಯೋಗ ರಚನೆ ಮಾಡಬೇಕೆಂಬ ಸರ್ಕಾರದ ತೀರ್ಮಾನವೂ ಸ್ವಾಗತಾರ್ಹ. ಮುಂದೆ ಜಾತಿ ಜನಗಣತಿ ನಂತರ ಜನಸಂಖ್ಯೆ, ಮಾದಿಗ ಸಮಾಜದ ಆರ್ಥಿಕ, ಸಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಸ್ಥಿತಿಗತಿ ಆಧರಿಸಿ ಒಳಮೀಸಲಾತಿಯಲ್ಲಿ ಪುನರ್‍ಪರಿಶೀಲನೆ ಮಾಡಬೇಕಾಗುತ್ತದೆ. ಈ ಸರ್ಕಾರದಲ್ಲಿ ಬಲಗೈ ಸಮುದಾಯವೇ ಪ್ರಬಲವಾಗಿದ್ದು, ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮೀಸಲಾತಿ ವರ್ಗೀಕರಣ ಮಾಡಲಾಗಿದೆ ಎಂದು ಕಂಡುಬರುತ್ತದೆ. ಪರಿಶಿಷ್ಟ ಜಾತಿಯ ಉಪಜಾತಿಗಳನ್ನು ತೃಪ್ತಿಪಡಿಸುವ ರಾಜಕೀಯ ಅಜೆಂಡ ಇದಾಗಿದೆ ಎಂದು ಹೇಳಿದ್ದಾರೆ.
ಒಳಮೀಸಲಾತಿ ಪ್ರಮಾಣ ಹಂಚಿಕೆ ಮಾಡುವಲ್ಲಿ ಸುಪ್ರೀಂ ಕೋರ್ಟ್ ಸೂಚನೆಗಳು ಪೂರ್ಣ ಪ್ರಮಾಣದಲ್ಲಿ ಪಾಲನೆಯಾಗಿಲ್ಲ. ಇದೂವರೆಗೂ ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಯಾವ ಪ್ರಾತಿನಿಧ್ಯ, ಸೌಲಭ್ಯಗಳು ಸಿಕ್ಕಿರಲಿಲ್ಲವೋ ಅಂತಹ ವಿಚಾರಗಳಿಗೆ ಪ್ರಾತಿನಿಧ್ಯ ನೀಡಬೇಕಾಗಿದೆ. ಇಷ್ಟರ ನಡುವೆ ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ಜಯ ದೊರಕಿದೆ ಎಂದು ಡಾ.ಲಕ್ಷ್ಮೀಕಾಂತ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!