ತುಮಕೂರು :ತುಮಕೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳನ್ನು ಅದ್ಧೂರಿಯಾಗಿ ಶೃಂಗರಿಸಿ, ಬೆಳಕಿನ ಅಲಂಕಾರದಿಂದ ಮಧುವಣಗಿತ್ತಿಯಂತೆ ಕಂಗೊಳಿಸುವಂತೆ ಮಾಡಿರುವುದು ಶ್ಲಾಘನೀಯ. ಆದರೆ, ರಂಗಭೂಮಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾದ *ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದ* ಆವರಣದಲ್ಲಿ ಸ್ವಚ್ಛತೆ ಕಾಪಾಡದೆ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯ ಕಲಾಪ್ರೇಮಿಗಳು ಮತ್ತು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ನಾಡಹಬ್ಬ ತುಮಕೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಪ್ರಮುಖ ಬೀದಿಗಳು, ಬಿ.ಎಚ್. ರಸ್ತೆ, ಮಹಾತ್ಮ ಗಾಂಧಿ ವೃತ್ತ ಹಾಗೂ ಪಾಲಿಕೆ ಆವರಣಗಳನ್ನು ಕಣ್ಣು ಕೋರೈಸುವ ವಿದ್ಯುತ್ ದೀಪಾಲಂಕಾರಗಳಿಂದ ವಧುವಿನಂತೆ ಶೃಂಗರಿಸಲಾಗಿದೆ. ನಗರಕ್ಕೆ ಕಾಲಿಡುತ್ತಿದ್ದಂತೆ ದಸರಾ ವೈಭವ ಎದ್ದು ಕಾಣುತ್ತಿದೆ. ಆದರೆ, ತುಮಕೂರಿನ ಸಾಂಸ್ಕೃತಿಕ ಪರಂಪರೆಯ ಹೆಮ್ಮೆಯ ಸಂಕೇತವಾದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ಹಾಗೂ ರಂಗಕರ್ಮಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ದಸರಾ ಹಬ್ಬವು ಕೇವಲ ದೀಪಾಲಂಕಾರಕ್ಕೆ ಸೀಮಿತವಾಗದೆ, ಸ್ಥಳೀಯ ರಂಗಭೂಮಿ ಹಾಗೂ ಕಲೆಗೆ ಉತ್ತೇಜನ ನೀಡುವ ವೇದಿಕೆಯಾಗಬೇಕು. ನಾಟಕ ರತ್ನ ಗುಬ್ಬಿ ವೀರಣ್ಣನವರ ಹೆಸರಿನಲ್ಲಿರುವ ರಂಗಮಂದಿರವೇ ನಿರ್ಲಕ್ಷ್ಯಕ್ಕೆ ಒಳಗಾದರೆ ದಸರಾದ ಸಾಂಸ್ಕೃತಿಕ ಆಶಯಕ್ಕೆ ಧಕ್ಕೆಯಾಗುತ್ತದೆ.

ಕಲಾಕ್ಷೇತ್ರದ ಆವರಣ, ಶೌಚಾಲಯ ಹಾಗೂ ಪ್ರೇಕ್ಷಕರ ಆಸನಗಳ ನೈರ್ಮಲ್ಯವನ್ನು ತಕ್ಷಣವೇ ಸುಧಾರಿಸಬೇಕಿದೆ. ಸಾರ್ವಜನಿಕರು ಹಾಗೂ ಕಲಾವಿದರು ಬಂದು ಹೋಗುವ ಈ ಜಾಗದಲ್ಲಿ ದುರ್ನಾತ ಹಾಗೂ ಕಸದ ರಾಶಿ ಇರದಂತೆ ನಗರಸಭೆ ಮತ್ತು ಜಿಲ್ಲಾಡಳಿತ ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು.

ದಸರಾ ರಂಗೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮುಖ್ಯ ಕೇಂದ್ರಗಳಲ್ಲಿ ಒಂದಾದ ಕಲಾಕ್ಷೇತ್ರವನ್ನು ಸುಸಜ್ಜಿತವಾಗಿಡುವುದು ಆಗಮಿಸುವ ಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ ನೀಡುವ ಕನಿಷ್ಠ ಗೌರವವಾಗಿದೆ.
ಕಲಾಕ್ಷೇತ್ರದ ಮುಖ್ಯ ದ್ವಾರ, ಹಿಂಭಾಗ ಹಾಗೂ ಪಾರ್ಕಿಂಗ್ ಆವರಣದಲ್ಲಿ ಕಸದ ರಾಶಿ ಬಿದ್ದಿದ್ದು, ದುರ್ನಾತ ಬೀರುತ್ತಿದೆ.

ಶೌಚಾಲಯಗಳ ದುಃಸ್ಥಿತಿ: ಸಾರ್ವಜನಿಕರು ಹಾಗೂ ಕಲಾವಿದರು ಬಳಸುವ ಶೌಚಾಲಯಗಳು ನೈರ್ಮಲ್ಯವಿಲ್ಲದೆ ದುರ್ನಾತಪೂರಿತವಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ ನಗರದ ಮೂಲೆ ಮೂಲೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ದೀಪಾಲಂಕಾರ ಮಾಡಿರುವ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೀವನಾಡಿಯಾದ ಕಲಾಕ್ಷೇತ್ರದ ಆವರಣಕ್ಕೆ ಸೂಕ್ತ ಬೆಳಕಿನ ವ್ಯವಸ್ಥೆಯನ್ನೂ ಸಹಾ ಮಾಡಿಲ್ಲ.

ಸಂಸ್ಕೃತಿ ಆರಾಧಕರು ಹಾಗೂ ರಂಗಕರ್ಮಿಗಳ ಆಗ್ರಹ:
ಸಾಂಸ್ಕೃತಿಕ ಕೇಂದ್ರಕ್ಕೆ ಆದ್ಯತೆ ನೀಡಿ: ರಂಗಭೂಮಿ ದಿಗ್ಗಜ ನಾಟಕ ರತ್ನ ಗುಬ್ಬಿ ವೀರಣ್ಣನವರ ಹೆಸರಿನಲ್ಲಿರುವ ಈ ಕಲಾಕ್ಷೇತ್ರ ತುಮಕೂರಿನ ಅಸ್ಮಿತೆ. ಕೇವಲ ರಸ್ತೆ ಮತ್ತು ಕಟ್ಟಡಗಳ ಅಲಂಕಾರಕ್ಕೆ ಕೋಟಿ ಕೋಟಿ ಹಣ ವ್ಯಯಿಸುವ ಪಾಲಿಕೆ, ಕಲೆ ಮತ್ತು ಕಲಾವಿದರನ್ನು ಗೌರವಿಸುವ ಈ ವೇದಿಕೆಯನ್ನು ತಕ್ಷಣ ಶುಚಿಗೊಳಿಸಬೇಕೆಂದು ಕಲಾಪ್ರೇಮಿಗಳ ಆಗ್ರಹವಾಗಿದೆ.

ದಸರಾ ಹಬ್ಬದ ಅವಧಿಯಷ್ಟೇ ಅಲ್ಲದೆ, ವರ್ಷಪೂರ್ತಿ ಕಲಾಕ್ಷೇತ್ರವನ್ನು ಸುಸ್ಥಿತಿಯಲ್ಲಿಡಲು ಪ್ರತ್ಯೇಕ ನಿರ್ವಹಣಾ ಸಮಿತಿ ಹಾಗೂ ಅನುದಾನ ಕಾಯ್ದಿರಿಸಬೇಕು ಎಂಬುದು ಕಲಾವಿದರ ಒತ್ತಾಯವಾಗಿದೆ.

ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಸಹ ಕಲಾಕ್ಷೇತ್ರದ ಪಕ್ಕದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಕಣ್ಮುಚ್ಚಿ ಕುಳಿತಿರುವುದರ ಇಂದಿನ ಮರ್ಮವೇನು ಎಂಬುದು ತಿಳಿಯದಾಗಿದೆ.
ಇತ್ತೀಚಿನ ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಆವರಣದಲ್ಲಿ ಹಲವಾರು ಬದಲಾವಣೆಗಳನ್ನು ತರಲು ಮುಂದಾಗಿದ್ದು ಸರಿ ಅಷ್ಟೇ ಆದರೆ ಇಲ್ಲಿ ರಾಶಿ ರಾಶಿ ಬಿದ್ದಿರುವ ಕಸ ಮಾತ್ರ ಅವರಿಗೆ ಕಣ್ಣಿಗೆ ಬಿದ್ದಿರುವುದಿಲ್ಲ ಪ್ರತಿ ದಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಇರುವ ರಂಗ ತಾಲಿಮು ಕೊಠಡಿಗಳಲ್ಲಿ ಸಾಕಷ್ಟು ಕಲಾವಿದರು ರಂಗ ತಾಲಿಮು ನಡೆಸಲು ಬಹಳ ಅನಾನುಕೂಲವಾಗಿದೆ ರಂಗ ತಾಲಿಮ ಕೊಠಡಿಗಳಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆಯು ಸಹ ಇರುವುದಿಲ್ಲ ಇದರ ಬಗ್ಗೆ ಯಾವೊಬ್ಬ ಅಧಿಕಾರಿಯು ಸಹ ಇಲ್ಲಿಯವರೆಗೆ ಗಮನ ಹರಿಸಿಲ್ಲ ಎಂದು ಅಲ್ಲಿನ ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ.

ತುಮಕೂರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ತಕ್ಷಣವೇ ಗಮನಹರಿಸಿ, ನಗರದ ಅಲಂಕಾರದಷ್ಟೇ ಪ್ರಾಮುಖ್ಯತೆಯನ್ನು ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಸ್ವಚ್ಛತೆ ಮತ್ತು ನಿರ್ವಹಣೆಗೂ ಒತ್ತು ನೀಡಿ, ರಂಗಮಂದಿರವನ್ನು ಶುಚಿಗೊಳಿಸಬೇಕೆಂಬುದೆ ನಮ್ಮ ಆಶಾಯವಾಗಿದೆ.

*ವಿಶೇಷ ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ*

Leave a Reply

Your email address will not be published. Required fields are marked *

error: Content is protected !!