ನವೆಂಬರ್ 7 ಭಾರತೀಯರ ಪಾಲಿಗೆ ವಿಶೇಷ ದಿನ, ಎನ್, ಕೆ, ನಿಧಿಕುಮಾರ್

 

 

ತುಮಕೂರು : ಇಂದು ನವೆಂಬರ್ 07 ಬಾಬಾ ಸಾಹೇಬ್ ಅಂಬೇಡ್ಕರ್ ರವರು ಶಾಲೆಗೆ ದಾಖಲಾತಿ ಪಡೆದ ದಿನವಾಗಿದ್ದು ಆ ಪ್ರಯುಕ್ತ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಇಂದು ನಗರದ ಬಿಜಿಎಸ್ ವೃತ್ತದ ಬಳಿಯಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಅವರ ತತ್ವ ಆದರ್ಶಗಳನ್ನು ನೆನಪಿಸಿಕೊಳ್ಳುವುದರ ಮುಖೇನ ವಿಶೇಷ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್. ಕೆ. ನಿಧಿಕುಮಾರ್ ರವರು ಡಾ. ಬಿ.ಆರ್.ಅಂಬೇಡ್ಕರ್ ರವರ ಕುರಿತಾಗಿ ಮಾತನಾಡುತ್ತಾ ನವೆಂಬರ್ 7 ಭಾರತೀಯರ ಪಾಲಿಗೆ ವಿಶೇಷ ದಿನ, ಭಾರತ ದೇಶದ ಭವಿಷ್ಯವನ್ನು ಉದ್ಧರಿಸಿದ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನವಾಗಿದೆ. ಭಾರತದ ಸರ್ವಕಾಲಿಕ ಐಕಾನ್ ಡಾ.ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಅವರು ಶಾಲೆಗೆ ಸೇರುವ ಮೂಲಕ ಇಡೀ ಭಾರತದ ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ಬದಲಾವಣೆಯನ್ನು ಮಾಡುವಂತಹ ಶಿಕ್ಷಣವನ್ನು ಪಡೆಯಲು ತಳಪಾಯ ಹಾಕಿದ ದಿನ ಎಂದೇ ಹೇಳಬಹುದಾಗಿದೆ ಎಂದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1900ರ ನವೆಂಬರ್ 7ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರಾತಾಪ್ ಸಿಂಗ್ ಹೈಸ್ಕೂಲ್ ಎಂಬ ಶಾಲೆಗೆ ಸೇರಿದರು. ಅವರು ಶಾಲೆಗೆ ಸೇರಿದ ದಿನವೇ ಇಡೀ ದೇಶದಲ್ಲಿ ಒಳ್ಳೆಯ ಗಾಳಿ ಪಸರಿಸಲು ಆರಂಭವಾಯಿತು. ಭಾರತೀಯರೆಲ್ಲರೂ ಅವರನ್ನು ಬಾಬಾ ಸಾಹೇಬರು ಎಂದೇ ಪ್ರೀತಿಯಿಂದ ಕರೆಯುವಂತಹ ಶಿಕ್ಷಣ ಪಡೆದು ಮುಂದೆ ನಮ್ಮ ಭಾರತ ದೇಶವನ್ನು ಗಣತಂತ್ರ ದೇಶವನ್ನಾಗಿ ಮಾಡಿದ ಅಪಾರ ಕೀರ್ತಿ ಅವರಿಗೆ ಸಲ್ಲುತ್ತದೆಂದು ಗುಣಗಾನ ಮಾಡಿದರು.

ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಗೌರವಧ್ಯಕ್ಷರಾದ ಟಿ, ಆರ್, ಗುರುಪ್ರಸಾದ್ ಮಾತನಾಡುತ್ತಾ ದೌರ್ಜನ್ಯ, ಅಸ್ಪೃಷ್ಯತೆ, ಅನಿಷ್ಠ ಪದ್ಧತಿಗಳನ್ನು ತಮ್ಮ ಬಾಲ್ಯದಲ್ಲೇ ನೋಡಿಕೊಂಡು ಬೆಳೆದ ಬಾಬಾ ಸಾಹೇಬರು, ಸಾಮಾಜಿಕ ತಾರತಮ್ಯದ ವಿರುದ್ಧ ಧ್ವನಿಯೆತ್ತಿದರು. ನ್ಯಾಯಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಾಮಾಜಿಕ ಸುಧಾರಕ ಮತ್ತು ನಿಜವಾದ ದೇಶ ಭಕ್ತ, ಭಾರತದ ಮೊದಲ ಕಾನೂನು ಸಚಿವರು ಆಧುನಿಕ ಭಾರತದ ರಾಷ್ಟ್ರಪಿತರಾಗಿರುವ ಅಂಬೇಡ್ಕರ್ ಅವರ ಸಾಧನೆಯೆ ಅಡಿಪಾಯ ದೊರೆತ ದಿನ ನವೆಂಬರ್ 7 ಆಗಿದೆಂದು ಸ್ಮರಿಸಿದರು

ಮತ್ತೊಬ್ಬ ಮುಖಂಡರಾದ ರಾಜೇಶ್ ಹೆಚ್.ಬಿ. ಮಾತನಾಡುತ್ತಾ ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಶಾಲೆಗೆ ಸೇರಿದ ದಿನವಾಗಿದ್ದು ದೀನ ದಲಿತರು ಸೇರಿದಂತೆ ಭಾರತದ ಕಟ್ಟಕಡೆಯ ವ್ಯಕ್ತಿಯು ಸಹ ಶಿಕ್ಷಣ ಪಡೆದು ವಿದ್ಯಾವಂತರಾಗುವಂತಹ, ಸರ್ವರಿಗೂ ಸಮಪಾಲು ನೀಡುವಂತಹ ಸಂವಿಧಾನವನ್ನು ನೀಡಿದ ಮಹಾನ್ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ನಮ್ಮ ಸರ್ಕಾರಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತೀಚಿಗೆ ನಡೆಸುಕೊಳ್ಳುತ್ತಿರುವ ರೀತಿ ಅಮಾನುಷವಾಗಿದೆ ಎಂದರು, ಇದಕ್ಕೆ ಕಾರಣವಾಗಿ ಇತ್ತೀಚೆಗೆಷ್ಟೇ ನಮ್ಮ ಉಪ ಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ ರವರು ಅತ್ಯಂತ ಕಾಳಜಿ ವಹಿಸಿ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಬಾಬಾ ಸಾಹೇಬರ ಬೃಹತ್ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸುವಲ್ಲಿ ಶ್ರಮವಹಿಸಿರುವುದು ಶ್ಲಾಘನೀಯ ವಿಚಾರ ಹಾಗೂ ಪ್ರತಿಯೊಬ್ಬರಿಗೂ ಗರ್ವದ ವಿಚಾರವೆಂದರೆ ತಪ್ಪಾಗಲಾರದು, ಆದರೆ ಈ ಪ್ರತಿಮೆಯನ್ನು ನಿಲ್ಲಿಸಲು ಮಾಡಿರುವ ನೆಲ ಸ್ಥಂಭ ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿಯಿಂದ ಮಾಡಿದ್ದಾರೆ, ಏಕೆಂದರೆ ಇನ್ನೂ ಎರಡು ವರ್ಷಗಳು ಸಹ ಸರಿಯಾಗಿ ಪೂರ್ಣಗೊಂಡಿಲ್ಲ ಆಗಲೇ ಪ್ರತಿಮೆಯ ಕೆಳಗಡೆ ಅಳವಡಿಸಿರುವ ಸಂವಿಧಾನ ಪೀಠಿಕೆಯ ಫಲಕ ಕಿತ್ತುಬರುವ ರೀತಿಯಾಗಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಈ ಕೂಡಲೇ ಎಚ್ಚೆತ್ತು ಇದಕ್ಕೆ ಸರಿಯಾದ ಕಾರ್ಯಕಲ್ಪವನ್ನು ಕೊಡಬೇಕಾಗಿದೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್. ಕೆ.ನಿಧಿಕುಮಾರ್, ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ವೇದಿಕೆಯ ರಾಜ್ಯಾಧ್ಯಕ್ಷರಾದ ಹೆಚ್.ಬಿ.ಪ್ರಕಾಶ್, ಮುಖಂಡರುಗಳಾದ ರಾಜೇಶ್ ಹೆಚ್.ಬಿ., ಟಿ.ಆರ್.ಗುರುಪ್ರಸಾದ್ (ಛಲವಾದಿ ಮುಖಂಡರು, ಜೈಪುರ), ಪುಟ್ಟರಾಜು (ನರುಗನಹಳ್ಳಿ), ರುದ್ರೇಶ್ (ಜೈಪುರ), ನರಸಿಂಹಮೂರ್ತಿ, ಜೆಬಿನೇಷನ್, ಮಂಜುನಾಥ್ (ದಿಬ್ಬೂರು), ಹರೀಶ್, ಎಸ್.ಲಕ್ಷ್ಮೀನಾರಾಯಣ, ವೆಂಕಟೇಶ್ ಎಂ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!