ತುಮಕೂರು: ವೈಸಿರಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ & ಟೆಕ್ನಾಲಜಿ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ (NSS), ತುಮಕೂರು ರೌಂಡ್ ಟೇಬಲ್ 173, ಸಂಜೀವಿನಿ ಬ್ಲಡ್ ಸೆಂಟರ್ ಹಾಗೂ HDFC ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಅಕ್ಟೋಬರ್ 7ರಂದು ವೈಸಿರಿ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವಾಹಿನಿ ಸಮೂಹದ ಕಾರ್ಯದರ್ಶಿಗಳಾದ ಶ್ರೀ ಎನ್. ಬಿ. ಪ್ರದೀಪ್ ಕುಮಾರ್ ಅವರು ವಹಿಸಿದ್ದರು. ಗೌರವ ಅತಿಥಿಗಳಾಗಿ ತುಮಕೂರು ರೌಂಡ್ ಟೇಬಲ್ ಇಂಡಿಯಾದ ಅಧ್ಯಕ್ಷರಾದ ಶ್ರೀ ಪ್ರಮೋದ್, HDFC ಬ್ಯಾಂಕ್‌ನ ವ್ಯವಸ್ಥಾಪಕರಾದ ಶ್ರೀ ಅರವಿಂದ್ , ಸಂಜೀವಿನಿ ಬ್ಲಡ್ ಬ್ಯಾಂಕ್‌ನ ವ್ಯವಸ್ಥಾಪಕರಾದ ಶ್ರೀ ಅರುಣ್ ಕುಮಾರ್ ಅವರು ಹಾಗೂ ವೈಸಿರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಹುಮೇರ ಪರ್ವೀನ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯದರ್ಶಿಗಳಾದ ಶ್ರೀ ಎನ್. ಬಿ. ಪ್ರದೀಪ್ ಕುಮಾರ್ ಅವರು ಮಾತನಾಡಿ, “ರಕ್ತದಾನವೆಂದರೆ ಕೇವಲ ರಕ್ತವನ್ನು ನೀಡುವುದಲ್ಲ; ಅದು ಸಂಕಷ್ಟದಲ್ಲಿರುವ ಮತ್ತೊಬ್ಬರ ಬದುಕಿಗೆ ಭರವಸೆಯನ್ನು ನೀಡುವ ಮಹಾನ್ ಮಾನವೀಯ ಸೇವೆ” ಎಂದು ಹೇಳಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯುವಜನತೆ ಶಿಕ್ಷಣದ ಜೊತೆಗೆ ಸಮಾಜದ ಬಗ್ಗೆ ಕಾಳಜಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ರಕ್ತದಾನ ಮಾಡುವ ಮೂಲಕ ನಾವು ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಸಮಾಜಕ್ಕೆ ಅಮೂಲ್ಯವಾದ ಸೇವೆಯನ್ನು ಸಲ್ಲಿಸಬಹುದು. ಪ್ರತಿಯೊಬ್ಬ ಆರೋಗ್ಯವಂತ ನಾಗರಿಕನೂ ರಕ್ತದಾನದ ಮಹತ್ವವನ್ನು ಅರಿತು, ಅವಶ್ಯಕತೆ ಇದ್ದಾಗ ರಕ್ತದಾನಕ್ಕೆ ಮುಂದಾಗಬೇಕು.“ನಮ್ಮ ಒಂದು ಹನಿ ರಕ್ತವು ಮತ್ತೊಂದು ಕುಟುಂಬದ ಕಣ್ಣೀರನ್ನು ತಡೆಯಬಲ್ಲದು. ಇಂದು ನಾವು ನೀಡುವ ರಕ್ತವು ನಾಳೆ ಯಾರದೋ ಬದುಕಿಗೆ ಹೊಸ ಆಶಾಕಿರಣವಾಗಬಹುದು. ಆದ್ದರಿಂದ ‘ರಕ್ತದಾನ ಮಾಡಿ – ಜೀವ ಉಳಿಸಿ’ ಎಂಬ ಮಾನವೀಯ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸೋಣ” ಎಂದು ಅವರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. “ಒಂದು ಹನಿ ರಕ್ತವು ಒಂದು ಜೀವವನ್ನು ಉಳಿಸಬಲ್ಲದು” ಹಾಗೂ “ರಕ್ತದಾನ ಮಾಡಿ – ಜೀವ ಉಳಿಸಿ, ಭರವಸೆ ನೀಡಿ” ಎಂಬ ಸಂದೇಶದೊಂದಿಗೆ ಶಿಬಿರ ಯಶಸ್ವಿಯಾಗಿ ನಡೆಯಿತು.