ಗುಬ್ಬಿ : ವಿವಿಧ ಪಕ್ಷದ ಮುಖಂಡರ ಸಭೆ ಕರೆದು ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯ ಬಗ್ಗೆ ಮಾಹಿತಿ ನೀಡಿ ತಿದ್ದುಪಡಿ, ಆಕ್ಷೇಪಣೆ ಇದ್ದಲ್ಲಿ ಡಿ.10 ರೊಳಗೆ ಸಲ್ಲಿಸಬಹುದಾಗಿದೆ ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು.
ತಾಲೂಕು ಕಚೇರಿಯ ತಹಶೀಲ್ದಾರ್ ಕಚೇರಿಯಲ್ಲಿ ಕರೆದಿದ್ದ ವಿವಿಧ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಆಗ್ನೆಯ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಸಿ.ಇ.ಓ ಕರ್ನಾಟಕ ವೆಬ್ ಸೈಟ್ ಹಾಗೂ ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 6 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 1678 ಪುರುಷ ಹಾಗೂ 1267ಮಹಿಳೆಯರು ಸೇರಿದಂತೆ ಒಟ್ಟು 2945 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು ಸ್ವೀಕೃತ ಅರ್ಜಿಗಳು 3234 ಬಂದಿದ್ದು, ಅದರಲ್ಲಿ 106 ಅರ್ಜಿಗಳು ತಿರಸ್ಕೃತಗೊಂಡಿವೆ. ಗುಬ್ಬಿ 1168 ಬಂದಿದ್ದು, 1141 ಸ್ವೀಕೃತವಾಗಿ 27 ತಿರಸ್ಕೃತವಾದರೆ, ಹಾಗಲವಾಡಿ ಹೋಬಳಿಯಲ್ಲಿ 290 ಅರ್ಜಿಗಳು ಬಂದಿದ್ದು 13 ತೀರಸ್ಕೃತವಾದರೆ, ಕಡಬ ಹೋಬಳಿ 416 ಅರ್ಜಿಗಳಲ್ಲಿ 11 ತಿರಸ್ಕೃತ ವಾಗಿದ್ದು, ನಿಟ್ಟೂರು ಹೋಬಳಿ 721 ಅರ್ಜಿ ಸ್ವಿಕೃತವಾಗಿ 29 ಅರ್ಜಿಗಳು ತಿರಸ್ಕೃತವಾದರೆ, ಚೇಳೂರು ಹೋಬಳಿ 516 ಅರ್ಜಿಗಳ ಪೈಕಿ 23 ತಿರಸ್ಕೃತ ಆಗಿದ್ದರೆ, ಸಿ ಎಸ್ ಪುರ ಹೋಬಳಿ 123 ಅರ್ಜಿಗಳ ಪೈಕಿ 3 ಅರ್ಜಿಗಳು ತಿರಸ್ಕೃತಗೊಂಡಿವೆ. ಒಟ್ಟಾರೆ ತಾಲೂಕಿನಲ್ಲಿ 106 ಅರ್ಜಿಗಳು ನಾನಾ ಕಾರಣಕ್ಕೆ ತಿರಸ್ಕೃತವಾದರೆ, 3128 ಅರ್ಜಿಗಳು ಪುರಸ್ಕ್ರತವಾಗಿವೆ ಎಂದು ತಹಶೀಲ್ದಾರ್ ಆರತಿ ಬಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಬ್ಬಿ ಆಗ್ನೆಯ ಪದವೀಧರರ ಕ್ಷೇತ್ರದ ಮತದಾರರು ಪ್ರಕಟಿತ ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 10 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಡಿಸೆಂಬರ್ 25ರಂದು ಸಲ್ಲಿಸಲಾದ ಆಕ್ಷೇಪಣೆಗಳ ವಿಲೇವಾರಿ ಮತ್ತು ಪೂರಕ ಪಟ್ಟಿಯನ್ನು ಸಿದ್ದಪಡಿಸಿ ಮುದ್ರಿಸಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 30ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ಶಿರಸ್ತೇದಾರ್ ಗುರುಪ್ರಸಾದ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ ಆರ್ ವೆಂಕಟೇಶ್, ಮಲ್ಲಿಕಾರ್ಜುನ್, ಜೆಡಿಎಸ್ ನ ಶಿವು, ಬಿಜೆಪಿಯ ಶಿವಮೂರ್ತಿ, ರವಿ, ಕೇಸ್ ವರ್ಕರ್ ರಂಗಸ್ವಾಮಿ ಉಪಸ್ಥಿತರಿದ್ದರು