ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ರವರು ದೇಶಕ್ಕಾಗಿ ನೀಡಿದ ಕೊಡುಗೆಗಳ ಬಗ್ಗೆ ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಎಂದರೆ ದಲಿತ ಕೆಳಜಾತಿ, ಮೀಸಲಾತಿ ಕಲ್ಪಿಸಿಕೊಟ್ಟವರು ಎಂಬುದಷ್ಟೇ ಸಾಕಷ್ಟು ಮಂದಿಗೆ ತಿಳಿದಿದೆ. ಆದರೆ, ಇವರ ಹಲವು ವಿಭಿನ್ನ ವಿಚಾರಗಳ ಬಗ್ಗೆ ಗೊತ್ತಿಲ್ಲ, ಆದರೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಬೇಡ್ಕರ್ ರವರನ್ನು ಇಂದಿಗೂ ಒಂದು ವರ್ಗಕ್ಕೆ ಸೀಮಿತಗೊಳಿಸಿದಂತೆ ಇವರನ್ನು ಭಾವಿಸಲಾಗುತ್ತಿದೆ. ಅವರು ಹೇಗೆ ಶಿಕ್ಷಣ ಪಡೆದರು, ಅದರ ಜೊತೆಗೆ ಉನ್ನತ ಶಿಕ್ಷಣ ಪಡೆದ ವೈಖರಿ ಒಳಗೊಂಡಂತೆ ಅವರು ನಿರ್ವಹಿಸಿದ ಹುದ್ದೆಗಳಲ್ಲಿನ ಅನುಭವಗಳು ಎಂತಹವರಿಗೂ ಪ್ರೇರಣೆ ನೀಡುವಂತಹದ್ದು ಎಂದರು.
ಭಾರತೀಯರಾದ ನಾವು ಅವರ ಬಗ್ಗೆ ತಿಳಿದುಕೊಳ್ಳಲೇಬೇಕು. ಅಂಬೇಡ್ಕರ್ ರವರು ಗಳಿಸಿದ ಜ್ಞಾನ, ಅವರು ದೇಶಕ್ಕಾಗಿ ನೀಡಿದ ಕೊಡುಗೆಗಳನ್ನು ವಿದೇಶಿಯರೇ ಚೆನ್ನಾಗಿ ತಿಳಿದುಕೊಂಡು ಹಲವಾರು ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಕುರಿತಾದ ಪುಸ್ತಕಗಳನ್ನು ಓದಿ ತಿಳಿಯಬೇಕು ಎಂದು ಸಲಹೆ ನೀಡಿದರು.
ನಮ ದೇಶ ಇಂದಿಗೂ ಭದ್ರವಾಗಿರಲು ಕಾರಣ ಪ್ರಪಂಚದ ಅತಿದೊಡ್ಡ ಲಿಖಿತ ಭಾರತದ ಸಂವಿಧಾನ. ಈ ರಾಷ್ಟ್ರಕ್ಕೆ ಎಲ್ಲ ತರಹದಲ್ಲೂ ಕೂಡ ಅನ್ವಯವಾಗುವಂತಹ ವಿಭಿನ್ನ ಮಾದರಿಯ ಸಂವಿಧಾನ ನಮದಾಗಿದೆ. ಆದರೆ ಇಂತಹದ್ದನ್ನು ತರಲು ಡಾ.ಬಿ.ಆರ್.ಅಂಬೇಡ್ಕರ್, ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಡಾ.ಕೆ.ಎಂ.ಮುನ್ಸಿ, ಸಯ್ಯದ್ ಮಹಮದ್ ಸಾದುಲ್ಲಾ, ಎನ್.ಮಾದವ್ ರಾವ್, ಟಿ.ಟಿ.ಕೃಷ್ಣಾಮಾಚಾರಿ ಇವರುಗಳು ಬಹು ಭಿನ್ನವಾಗಿ ಶ್ರಮಿಸಿದ್ದಾರೆ. ಆದರೆ ಸಂವಿಧಾನ ರಚನಾ ಸಭೆಯ ಪ್ರಮುಖರ ಅಭಿಪ್ರಾಯ ಹಾಗೂ ದೇಶ, ವಿದೇಶಗಳ ಕೆಲವರ ಹೇಳಿಕೆಗಳ ಅನ್ವಯ ಅಂಬೇಡ್ಕರ್ ಪಾತ್ರ ವಿಶೇಷವಾಗಿದೆ ಎಂದು ಹೇಳಿದರು.
ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ವೆಕಟಸ್ವಾಮಿ ಮಾತನಾಡಿ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿರಬಹುದು ಬೇರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿರಬಹುದು ಪದವಿ ಶಿಕ್ಷಣವನ್ನು ಮೊಟಕುಗೊಳಿಸಬೇಡಿ. ಉನ್ನತ ವ್ಯಾಸಂಗ ಮಾಡಿಯೇ ಮಾಡುತ್ತೇವೆ ಎಂಬುದಾಗಿ ಛಲ ಬೆಳೆಸಿಕೊಳ್ಳಿ. ಸಾಧ್ಯವಾದರೆ ವಿದೇಶಕ್ಕೂ ತೆರಳಿ ಉನ್ನತ ವ್ಯಾಸಂಗ ಮಾಡುತ್ತೇನೆ ಎಂದು ದೃಢ ನಿಶ್ಚಯ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು. ಈ ವೇಳೆ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಾಹಿತಿ ಡಾ.ಸತ್ಯಮೂರ್ತಿ ಗೂಗಿ ಅವರ ವಿದ್ಯಾರ್ಥಿ ತೆರೆದ ಸತ್ಯ ಎಂಬ ಕೃತಿ ಲೋಕಾರ್ಪಣೆಗೊಳ್ಳಿಸಿದರು
ಇದೇ ಸಂದರ್ಭದಲ್ಲಿ ಹಿರಿಯ ಲೇಖಕಿ ಡಾ.ಎಂ.ಎಸ್.ಆಶಾದೇವಿ, ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್ ಬಿ.ಅಶೋಕ, ಕುಲಸಚಿವೆ ಶ್ರೀಮತಿ ಸೀಮಾ ಬಿ. ನಾಯಕ್, ಮೌಲ್ಯಮಾಪನ ಕುಲಸಚಿವ ಪ್ರೊ. ವೈ. ರಮೇಶ್, ಡಾ. ಶಿವಕೋಟಿ, ಪ್ರೊ. ಮುನಿವೆಂಕಟಪ್ಪ, ಉಪ ಕುಲಸಚಿವರಾದ ಪ್ರೊ.ಎಸ್.ಡಿ.ನಾಗೇಂದ್ರಶಾಸ್ತ್ರಿ, ಪ್ರೊ.ಎಲ್.ಎಸ್.ಶಿವಶಂಕರಪ್ಪ, ಶ್ರೀನಾಥ್ ರಾಜ್, ವಿತ್ತಾಧಿಕಾರಿ ಎಂ.ಎಸ್.ಚೇತನ್ ಕುಮಾರ್, ವಿವಿಯ ಪ್ರಾಂಶುಪಾಲರಾದ ಕುಶಲ, ಪ್ರೊ.ಆರ್.ಕೆ.ವಾಣಿಶ್ರೀ, ಪ್ರೊ.ವಜೀಹಾ ಸುಲ್ತಾನ, ಗಣಪತಿ ಗೋ ಚಲವಾದಿ, ಡಾ. ಮೀರಾ ಎಲ್.ಜಿ. ಡಾ. ಶಿವಕುಮಾರ್ ಮತ್ತು ಬಿ. ರಾಜಶೇಖರ ಮೂರ್ತಿ,ಡಾ.ಗೋವಿಂದಯ್ಯ ಜಿ, ಡಾ. ಅರ್ಜುನ್ ಗೋಪಾಲಯ್ಯ, ಕಾರ್ಯಕ್ರಮದ ಸಂಪರ್ಕಾಧಿಕಾರಿ ಹಾಗೂ ಪ್ರಾಧ್ಯಾಪಕರಾದ ಡಾ.ರಾಧಕೃಷ್ಣ ಜಿ.ವಿ, ಡಾ.ಹನುಮಂತರಾಜು, ಡಾ. ಮುನಿಯಪ್ಪ ವಿ,
ಡಾ. ಸುಲೋಚನ, ಲಿಂಗರಾಜ, ಮುರಳೀಧರ ಎಸ್.ಪಿ, ಮಹಮ್ಮದ್ ರಫಿ ಹಂಚಿನಾಳ, ಡಾ.ಈಶ್ವರ್ ಸಿರಿಗೇರಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ವಿವಿಧ ವಿಷಯಗಳ ಉಪನ್ಯಾಸಕರು, ವಿದ್ಯಾರ್ಥಿ ವೃಂದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.