ಮೀಸಲಾತಿ ಜಾರಿಗೆ 35 ವರ್ಷಗಳಿಂದ ನಿರಂತರ ಹೋರಾಟ ಮಾಡಿದ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಸರ್ಕಾರ ವಿಳಂಬ ದೋರಣೆ ಅನುಸರಿಸುತ್ತಿದ್ದು. ಸಮಾಜದಲ್ಲಿ ಶೋಷಣೆಗೆ ಒಳಗಾದ ಮಾದಿಗ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಒಳ ಮೀಸಲಾತಿಯನ್ನು ಕೂಡಲೇ ಜಾರಿ ಕೂಡಲೇ ಮಾಡಬೇಕು ಎಂದು ಆಗ್ರಹಿಸಿ ಗುಬ್ಬಿ ತಾಲ್ಲೂಕಿನ , ಮಾದಿಗ ಸಮುದಾಯದ ಮುಖಂಡರು ಹಾಗೂ ದಲಿತಪರ ಸಂಘಟನೆಗಳು ಒಗ್ಗೂಡಿ ತಾಲ್ಲೂಕು ಕಚೇರಿಯ ಮುಂದೆ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು.
ಗುಬ್ಬಿ ಪ್ರವಾಸಿ ಮಂದಿರದಿಂದ ತಮಟೆ ಬಡಿಯುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿ ತಲುಪಿದ ಪ್ರತಿಭಟನಾಕಾರರು ತುಮಕೂರು ಜಿಲ್ಲಾ ಉತ್ಸುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಪ್ರಿಯಾಂಕಾ ಖರ್ಗೆ, ಹಾಗೂ ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಮಾದಿಗ ಸಮುದಾಯದ ಮುಖಂಡರಾದ ಜಿ ಹೆಚ್ ಜಗನ್ನಾಥ್ ಒಳ ಮೀಸಲಾತಿ ವಿಧೇಯಕವು ರಾಜ್ಯಪಾಲರ ಸಹಿ ಪಡೆದು ಅನುಮೋದನೆಗೊಂಡಿದ್ದರು ಸಹ ಒಳ ಮೀಸಲಾತಿ ಅನ್ವಯವಾಗದಂತೆ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂಬ ಫೆಬ್ರವರಿ 26ರ ಸಚಿವ ಸಂಪುಟದ ತೀರ್ಮಾನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬಗೆದ ಘೋರ ಅನ್ಯಾಯವಾಗಿದೆ. ಆ ಮೂಲಕ 35 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಮಹಾದ್ರೋಹ ಎಸಗಲಾಗಿದೆ ಸರ್ಕಾರದ ಈ ತೀರ್ಮಾನವನ್ನು ಒಳ ಮೀಸಲಾತಿ ಹೋರಾಟಗಾರರು, ಸಾಮಾಜಿಕ ನ್ಯಾಯದ ಪರವಿರುವ ಬುದ್ದಿಜೀವಿಗಳು ಒಕ್ಕೊರಲಿನಿಂದ ಉಗ್ರವಾಗಿ ಖಂಡಿಸುತ್ತೇವೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.
ಚುನಾವಣೆ ಪೂರ್ವದಲ್ಲಿ ಸರ್ಕಾರ ಬಂದ ಮೊದಲನೇ ಅಧಿವೇಶನದಲ್ಲಿಯೇ ಒಳ ಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿಗೊಳಿಸುತ್ತದೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿತ್ತು. ಚಿತ್ರದುರ್ಗ ಸಮಾವೇಶದಲ್ಲಿಯೂ ಅದೇ ಭರವಸೆ ನೀಡಲಾಗಿತ್ತು. ಸರ್ಕಾರ ಬಂದು 2 ವರ್ಷ ಮುಗಿಯುತ್ತಿದ್ದರೂ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಹೋರಾಟದ ಒತ್ತಡಕ್ಕೆ ಮಣಿದು ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿಗೆ ತರುತ್ತೇವೆಂದು ತಾತ್ವಿಕವಾಗಿ ಒಪ್ಪಿಕೊಂಡು 25 ಆಗಸ್ಟ್ 2025 ರಂದು ಆದೇಶ ಹೊರಡಿಸಿದಿರಿ. 2025ರ ಚಳಿಗಾಲದ ಅಧಿವೇಶನದಲ್ಲಿ ಶಾಸನ ಬದ್ದ ಕಾಯ್ದೆ ಮಾಡಿಕೊಂಡು ರಾಜ್ಯಪಾಲರಿಂದ ಅಂತಿಮ ಅಂಗೀಕಾರ ಪಡೆಯಲಾಗಿದೆ. ಇಷ್ಟೆಲ್ಲ ಇದ್ದರೂ ಒಳ ಮೀಸಲಾತಿ ಇಲ್ಲದೇ ನೇಮಕಾತಿಗಳನ್ನು ಭರ್ತಿ ಮಾಡುವಂತೆ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿರುವುದನ್ನು ನೋಡಿದರೆ ಸರ್ಕಾರಕ್ಕೆ ಮಾದಿಗ ಸಮೂದಾಯ ಮೇಲಿನ ಕಾಳಜಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನಾವುಗಳು ತಿಳಿಯಬೇಕಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು .
ಮಾದಿಗ ಸಮಾಜದ ಮತ್ತೋರ್ವ ಮುಖಂಡ ಜಿ.ವಿ.ಮಂಜುನಾಥ್ ಮಾತನಾಡಿ ಭಾರತದ ಹಲವಾರು ರಾಜ್ಯದಲ್ಲಿ ಪ.ಜಾತಿ/ಪ.ಪಂಗಡ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ದವಾಗಿ ಮಿಸಲಾತಿ ಪ್ರಮಾಣ ಹೆಚ್ಚಿಸಿ ಅನುಷ್ಠಾನ ಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ದಿನಾಂಕ 28.12.2022ರಿಂದ ಜಾರಿಗೆ ಬಂದ ಪ.ಜಾ 17% ಮತ್ತು ಪ.ಪಂ 7% ಮಿಸಲು ಪ್ರಮಾಣ ಹೆಚ್ಚಳದಂತೆ ಉದ್ಯೋಗಗಳನ್ನು ನೀಡದೆ ಪರಿಶಿಷ್ಟ ಜಾತಿಗೆ 2% ಕಡಿತ ಎಂದರೆ 1129 ಮತ್ತು ಪರಿಶಿಷ್ಟ ಪಂಗಡಕ್ಕೆ 4% ಕಡಿತ ಎಂದರೆ 2,258 ಒಟ್ಟು ಪ.ಜಾ-ಪ.ಪ ದಲಿತ ಸಮುದಾಯಕ್ಕೆ ಸಿಗಬೇಕಾದ 3387ಕ್ಕು ಹೆಚ್ಚಿನ ಹುದ್ದೆಗಳನ್ನು ತಪ್ಪಿಸಿ 56.432ಹುದ್ದೆಗಳ ಭರ್ತಿಗೆ ಮುಂದಾದ ಪರಿಶಿಷ್ಟ ಜಾತಿಗಳ ವಿರೋಧಿ ನೀತಿಯ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟರ ಮೀಸಲಾತಿ ಹೆಚ್ಚಳದಿಂದ 56% ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಆದರೆ ಅರ್ಜಿದಾರರ ಪರ ವಕೀಲರು ಅದಕ್ಕೆ ತಡೆ ನೀಡುವಂತೆ ವಾದ ಮಂಡಿಸಿರುವುದಿಲ್ಲ ಮತ್ತು ನ್ಯಾಯಾಲಯವು ತಡೆಯಾಜ್ಞೆ ನೀಡಿಲ್ಲ. ಹಾಗಾಗಿ 56% ನಂತೆ ನೇರ ನೇಮಕಾತಿ ಮಾಡಿಕೊಳ್ಳಲು ನ್ಯಾಯಾಲವು ತಡೆಯಾಜ್ಞೆ ನೀಡಿದೆ ಎಂಬುದು ಸತ್ಯಕ್ಕೆ ದೂರವಾದ ಮಾತಾಗಿದೆ. ಆದರೂ ಸರ್ಕಾರ ದಿಕ್ಕು ತಪ್ಪಿಸುತ್ತಿರುವುದು ಮಾದಿಗ ಸಮೂದಾಯಕ್ಕೆ ಮಾಡುತ್ತಿರುವ ಮಹಾ ಅನ್ಯಾಯವಾಗಿದೆ
ಅಧಿಕಾರದ ಚುಕ್ಕಾಣಿ ಹಿಡಿಯುವ ಸಂದರ್ಭದಲ್ಲಿ ಬಾಬಾ ಸಾಹೇಬರು ರಚಿಸಿದ ಸಂವಿಧಾನದ ಆಶಯದಂತೆ ನಡೆದುಕೊಳ್ಳುತ್ತೇವೆ ಎಂದು ಸುಳ್ಳು ಹೇಳುವ ಈ ಸರ್ಕಾರ ನೀತಿಯಲ್ಲಿ ಮಾತ್ರ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿ ನಡೆದುಕೊಂಡಿದೆ. ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕಾದ ಸಮಾಜ ಕಲ್ಯಾಣ ಇಲಾಖೆಯ ಸಚಿವರೇ ಒಳಮೀಸಲಾತಿಗೆ ಅಡ್ಡಲಾಗಿ ನಿಂತಿದ್ದಾರೆ. ಎಲ್ಲಾ ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯ ಒದಗಿಸುವ ಬದಲು ಸದಾ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಾ ಬಂದಿದ್ದಾರೆ. ಹಾಗಾಗಿ ಇಡೀ ಅಧಿಕಾರಿ ವರ್ಗ ಒಳಮೀಸಲಾತಿ ವಿಫಲಗೊಳಿಸಲು ಕೆಲಸ ಮಾಡುತ್ತಿದೆ. ಈ ಅನ್ಯಾಯಗಳನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮಾದಿಗ ಸಮಾಜದ ಬುದ್ದಿ ಜೀವಿಗಳು ಮತ್ತು ಸಮುದಾಯ ಹಿರಿಯರು ನಮ್ಮ ಮುಂದಿನ ಪೀಳಿಗೆಯ ಉಳಿವಿಗಾಗಿ ಮಾರ್ಚ್ 12 ರ ಗುರುವಾರ ದಂದು ಬೆಂಗಳೂರಿನಲ್ಲಿ ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿರುವ ಮಾದಿಗರು ಒಂದಾಗಿ ಬರುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮಾದಿಗರ ಶಕ್ತಿ ಏನೆಂಬುದನ್ನು ತಿಳಿಸುವ ಮೂಲಕ ಮಾದಿಗ ಸಮೂದಾಯದ ವಿರೋಧಿಗಳಿಗೆ ತಕ್ಕ ಪಾಠವನ್ನು ಕಲಿಸುವಂತಹ ಕೆಲಸ ಮಾಡುತ್ತಿರುವುದು ಸ್ವಾಗತ ಅರ್ಹ ಹಾಗಾಗಿ ನಾಡಿನ ಸಮಸ್ತ ಮಾದಿಗ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾದಿಗ ಸಮುದಾಯಕ್ಕೆ ಕರೆ ನೀಡಿದರು.
ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರಾದ ಪಾಂಡುರಂಗಯ್ಯ, ರತ್ನಕುಮಾರ್, ನಿಟ್ಟೂರು ರಂಗಸ್ವಾಮಯ್ಯ, ಕೋಡಿಯಾಲ ಮಹಾದೇವಯ್ಯ, ಈಶ್ವರಯ್ಯ ಅದಲಗೆರೆ,ಕಡಬ ಶಂಕರ್, ನಟರಾಜು ಕುಂದರನಹಳ್ಳಿ, ಶ್ರೀಧರ್ ದಾಸರಕಲ್ಲಹಳ್ಳಿ, ಲಕ್ಷ್ಮಣ್ ದಾಸರಕಲ್ಲಹಳ್ಳಿ, ಚೇಳೂರು ಶಿವನಂಜಪ್ಪ, ಕಲ್ಲೇಶ್ ನಿಟ್ಟೂರು, ವಿದ್ಯಾಸಾಗರ್, ಮನು ಗುಬ್ಬಿ, ದಲಿತ್ ಗಂಗಣ್ಣ ಹಾಗೂ ಗುಬ್ಬಿ ತಾಲೂಕಿನ ಹಲವಾರು ಗ್ರಾಮಗಳ ಮಾದಿಗ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.