ತುಮಕೂರು, : ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಪ್ರಜ್ಞಾವಂತ ಜನರೇ ಸೈಬರ್ ಅಪರಾಧ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಅಥವಾ ಆನ್‍ಲೈನ್‍ನಲ್ಲಿ ಯಾವುದೇ ವಿಚಾರವನ್ನು ಹುಡುಕುವಾಗ ಎಚ್ಚರಿಕೆಯಿಂದಿರಬೇಕು. ಇಲ್ಲದಿದ್ದರೆ ಸೈಬರ್ ವಂಚಕರ ಮೋಸದ ಬಲೆಗೆ ಬೀಳುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಎಸ್‍ಇಎ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಸಿಎಸ್‍ಇ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣಕುಮಾರ್ ಪಿ.ಆರ್ ಅವರು ಹೇಳಿದರು.

ನಗರದ ವೈಸಿರಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಂಡ್ ಟೆಕ್ನಾಲಜಿ ಕಾಲೇಜಿನ ಬಿಸಿಎ ವಿಭಾಗದ ವತಿಯಿಂದ ಶುಕ್ರವಾರ ಸೈಬರ್ ಭದ್ರತೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ, ಡಿಜಿಟಲ್ ಯುಗದಲ್ಲಿ ಸೈಬರ್ ಭದ್ರತೆಯ ಮಹತ್ವ, ವಾಸ್ತವಿಕ ಸವಾಲುಗಳು ಮತ್ತು ಪರಿಹಾರಗಳು ಹಾಗೂ ಸೈಬರ್ ಭದ್ರತೆಯಲ್ಲಿ ವೃತ್ತಿ ಅವಕಾಶಗಳ ಕುರಿತು ವಿವರವಾಗಿ ಚರ್ಚಿಸಿದರು.
ವಂಚಕರು ದೂರದಿಂದಲೇ ಸೈಬರ್ ಅಪರಾಧಗಳನ್ನು ಎಸಗುವುದರಿಂದ ಅವರನ್ನು ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದೆ. ಉಚಿತ ಆ್ಯಪ್‍ಗಳು ಹೆಚ್ಚಿನ ಅಪಾಯವನ್ನು ತರುತ್ತವೆ. ಅವುಗಳನ್ನು ಡೌನ್‍ಲೋಡ್ ಮಾಡುವಾಗ ಕೇಳುವ ಮಾಹಿತಿಯನ್ನು ಒದಗಿಸುವುದರಿಂದ ಮೋಸದ ಸಾಧ್ಯತೆ ಹೆಚ್ಚು. ತಂತ್ರಜ್ಞಾನದ ಆವಿಷ್ಕಾರದೊಂದಿಗೆ ಅಪರಾಧಗಳು ಹೆಚ್ಚುತ್ತವೆ. ನಾವು ಅಪರಾಧದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಕಳ್ಳರು ಆಧುನಿಕ ತಂತ್ರಜ್ಞಾನದ ಮೂಲಕ ನಮ್ಮನ್ನು ಮೋಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಅತಿ ಹೆಚ್ಚು ಮೊಬೈಲ್ ಬಳಸುವುದರಿಂದ ಅವರ ಭವಿಷ್ಯ ಹಾಳಾಗುತ್ತಿದೆ ಎಂದು ಎಚ್ಚರಿಸಿದರು.
ಡಿಜಿಟಲ್ ಸಾಧನಗಳು ಮತ್ತು ನೆಟ್‍ವರ್ಕ್‍ಗಳಲ್ಲಿ ವೈಯಕ್ತಿಕ ಡಾಟಾವನ್ನು ಸೈಬರ್ ಬೆದರಿಕೆಗಳಿಂದ ರಕ್ಷಿಸುವುದು ಅತ್ಯಗತ್ಯ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಜಾಗೃತಿಗೆ ಗಮನ ಕೊಡಬೇಕು ಮತ್ತು ಹೊಸ ಅಪ್‍ಡೇಟ್‍ಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ತುಮಕೂರಿನ ವಿ-ಟೆಕ್ ಸೊಲ್ಯುಷನ್ಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ನಾಗಪ್ರಿಯಾ ಕೆ.ಜೆ ಅವರು ಮಾತನಾಡಿ, ಮೊಬೈಲ್ ಬಳಕೆದಾರರಲ್ಲಿ ವಿದ್ಯಾರ್ಥಿಗಳು ಪ್ರಮುಖರಾಗಿರುವುದರಿಂದ ಸೈಬರ್ ಅಪರಾಧಗಳಿಂದ ದೂರವಿರಬೇಕು ಮತ್ತು ತಂತ್ರಜ್ಞಾನದ ಬದಲಾವಣೆಗಳ ಬಗ್ಗೆ ಮಾಹಿತಿ ಪಡೆಯಬೇಕು. ಫೇಸ್‍ಬುಕ್, ವಾಟ್ಸಾಪ್, ಇನ್‍ಸ್ಟಾಗ್ರಾಂ, ಟ್ವಿಟರ್ ಮುಂತಾದ ಅಪ್ಲಿಕೇಷನ್‍ಗಳು ಬಳಕೆದಾರರನ್ನು ಆಕರ್ಷಿಸುತ್ತವೆಯಾದರೂ ಕೆಲವು ಅಪರಾಧಗಳಿಗೆ ಪ್ರಚೋದನೆ ನೀಡುತ್ತವೆ. ಬಳಕೆಯ ಸಂದರ್ಭದಲ್ಲಿ ಎಚ್ಚರ ತಪ್ಪಿದರೆ ಸೈಬರ್ ಅಪರಾಧಗಳು ಸುತ್ತಿಕೊಳ್ಳುತ್ತವೆ. ಸೈಬರ್ ಅಪರಾಧಗಳಲ್ಲಿ ದೂರು ಕೊಡುವುದು ಕಷ್ಟವಾಗುತ್ತದೆ. ಆದ್ದರಿಂದ ಜಾಗೃತಿ ಬಹಳ ಮುಖ್ಯ ಎಂದರು.
ಪ್ರಸ್ತುತ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಅಪರಾಧಗಳ ಸ್ವರೂಪ ಬದಲಾಗುತ್ತಿದ್ದು, ಸೈಬರ್ ಅಪರಾಧಗಳ ಕುರಿತು ಎಚ್ಚರಿಕೆ ವಹಿಸಬೇಕು. ಕೌಟುಂಬಿಕ ಜೀವನದ ವೈಯಕ್ತಿಕ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು. ಸುಶಿಕ್ಷಿತ ಜನರು, ಹಿರಿಯರು ಮತ್ತು ಹೆಣ್ಣುಮಕ್ಕಳು ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳಿಗೆ ಒಳಗಾಗುತ್ತಿದ್ದಾರೆ. ಅನಗತ್ಯವಾಗಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದರು.
ಪ್ರಾಂಶುಪಾಲರಾದ ಅಮೂಲ್ಯ ಜಿ ಅವರು ಪ್ರಾಸ್ತಾವಿಕ ಮಾತನಾಡಿ, ಹೊಸ ಜೀವನ ಪದ್ಧತಿಯಲ್ಲಿ ಸೈಬರ್ ಭದ್ರತೆ ಅನಿವಾರ್ಯ. ಆಧುನಿಕ ಸೈಬರ್ ದಾಳಿಗಳನ್ನು ನಿಯಂತ್ರಿಸಲು ಪ್ರತಿಭೆ ಅಗತ್ಯ. ಬಳಕೆದಾರರಲ್ಲಿ ಭದ್ರತಾ ಬೆದರಿಕೆಗಳು, ಅಪಾಯಗಳು ಮತ್ತು ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತಂತ್ರಜ್ಞಾನದ ಉಪಯುಕ್ತತೆಯ ಜತೆಗೆ ಅದರ ಕೆಡುಕುಗಳನ್ನು ಅರಿತುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನವಿದೆ. ವಿದ್ಯಾರ್ಥಿಗಳು ಸೈಬರ್ ಅಪರಾಧಗಳ ಬಗ್ಗೆ ತಿಳಿದುಕೊಂಡು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.