ತುರುವೇಕೆರೆ: ಸರ್ಕಾರಿ ನೌಕರರ ಬೇಡಿಕೆಗಳಾದ ಹಳೇ ಪಿಂಚಣಿ ಜಾರಿ, 7ನೇ ವೇತನ ಆಯೋಗದ ವರದಿಯ ಅನುಷ್ಠಾನ, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡುವ ಬಗ್ಗೆ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ಕೂಡಲೇ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಭೇಟಿಯಾಗಿ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ತುರುವೇಕೆರೆ ತಾಲೂಕು ಘಟಕದ ಪದಾಧಿಕಾರಿಗಳನ್ನು ಕುರಿತು ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೊಂದು, ರಾಜ್ಯ ಸರ್ಕಾರಿ ನೌಕರರಿಗೊಂದು ದರವಿಲ್ಲ. ನಾನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿದ್ದ ವೇಳೆ ಕೇಂದ್ರದಲ್ಲಿ ಸರ್ಕಾರಿ ನೌಕರರಿಗೆ ಡಿಎ ನೀಡಿದಾಗ ರಾಜ್ಯದ ನೌಕರರಿಗೂ ಡಿಎ ನೀಡಬೇಕೆಂದು ಒತ್ತಾಯಿಸಿ ಆದೇಶ ಮಾಡಿಸಿಕೊಟ್ಟಿದ್ದೆ. ಸರ್ಕಾರಿ ನೌಕರರಿಗೆ ಬಹುಮುಖ್ಯವಾಗಿ ದೊರೆಯುವುದು ಸಂಬಳ ಮಾತ್ರ. ಅದರಿಂದ ಜೀವನ ಸಾಗಿಸಬೇಕು. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವೇತನ ನೀಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ 7ನೇ ವೇತನ ಜಾರಿ ಮಾಡಬೇಕು. ಕೇಂದ್ರ ಸರ್ಕಾರಿ ನೌಕರರಿಗೆ ದೊರೆಯುವಂತೆ ರಾಜ್ಯದಲ್ಲೂ ನೌಕರರಿಗೆ ವೇತನ ದೊರೆಯುವಂತಾಗಬೇಕು. ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಯ ಬಗ್ಗೆ ಈ ಹಿಂದಿನ ವಿಧಾನಸಭಾ ಅಧಿವೇಶನದಲ್ಲೂ ಚರ್ಚಿಸಿದ್ದೆ, ಈ ಬಾರಿಯೂ ಚರ್ಚಿಸುತ್ತೇನೆ ಎಂದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ನೌಕರರ ವೇತನದ ಬಗ್ಗೆಯಾಗಲೀ, ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡುವುದರಲ್ಲಾಗಲೀ ಉದಾರ ಮನೋಭಾವ ಹೊಂದಿದ್ದರು. ಆದರೆ ಈಗಿನ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಲ್ಲಿ ಕಾಲಕಳೆಯುತ್ತಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಅದಕ್ಕೆ ಅನುದಾನ ಒದಗಿಸುವುದರಲ್ಲೇ ಸರ್ಕಾರ ಸುಸ್ತಾಗಿ ಹೋಗಿದೆ. ಇನ್ನು ಕ್ಷೇತ್ರದ ಅಭಿವೃದ್ದಿಗೆ ಬಿಡಿಗಾಸನ್ನೂ ನೀಡಿಲ್ಲ. ಗ್ಯಾರಂಟಿ ಯೋಜನೆಗಳಿಟ್ಟುಕೊಂಡು ದಿನದೂಡುತ್ತಿದೆ, ಹೀಗಿರುವಾಗ ಹೊಸ ಯೋಜನೆ ರೂಪಿಸಲು, ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆ ಎಲ್ಲಿ ಮಾಡುತ್ತದೆ ಎಂದ ಅವರು, ಸರ್ಕಾರಿ ನೌಕರರ ಬೇಡಿಕೆ ನ್ಯಾಯಯುತವಾಗಿದ್ದು, ಸರ್ಕಾರ ಈಡೇರಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ನಡುವಿನ ತಾರತಮ್ಯ ತೊಲಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುತ್ತೇನೆ ಎಂದರು.
ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಗಳಾದ ಹಳೇ ಪಿಂಚಣಿ ಜಾರಿ, 7ನೇ ವೇತನ ಆಯೋಗದ ವರದಿಯ ಅನುಷ್ಠಾನ, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಮಾಡುವ ಬಗ್ಗೆ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿ ನೌಕರರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪನವರಿಗೆ ಸರ್ಕಾರಿ ನೌಕರರ ಸಂಘ ಮನವಿ ಸಲ್ಲಿಸಿತು.