ತುರುವೇಕೆರೆ: ಮುಂದಿನ ಆರು ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದ್ದು, ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಭವಿಷ್ಯ ನುಡಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳು ನಡೆಸಿದ ರಸ್ತೆ ತಡೆ, ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳನ್ನು ಈಡೇರಿಸಲಾಗದೆ ಒದ್ದಾಡುತ್ತಿದೆ. ಅಭಿವೃದ್ದಿ ಹಣ ನೀಡದೆ ಕೇವಲ ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿರಿಸಿಕೊಂಡು ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದೆ. ವಿಪಕ್ಷ ಶಾಸಕರುಗಳು ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಶಾಸಕರುಗಳ ಕ್ಷೇತ್ರದ ಅಭಿವೃದ್ದಿಗೂ ಹಣ ನೀಡದ ಕಾರಣ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಸರ್ಕಾರದ ಆಡಳಿತ ವೈಪಲ್ಯವನ್ನು ಜಗಜ್ಜಾಹೀರುಗೊಳಿಸಿದೆ ಎಂದರು.
ಗ್ಯಾರಂಟಿ ಕೆಲಸಗಳಿಗೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕಪಾಠ ಕಲಿಸಿದ್ದಾರೆ. ಆದರೂ ಬುದ್ದಿ ಕಲಿಯದ ಸರ್ಕಾರ ಅಭಿವೃದ್ದಿ ಅನುದಾನ ನೀಡದೆ ರಾಜ್ಯವನ್ನು ಅಭಿವೃದ್ದಿಯಿಂದ ವಂಚಿತವನ್ನಾಗಿ ಮಾಡುತ್ತಿದೆ. ಕ್ಷೇತ್ರದ ಅಭಿವೃದ್ದಿಗೆ ಅನುದಾನ ಒದಗಿಸದ ಸರ್ಕಾರದ ವಿರುದ್ದ ಬೇಸತ್ತಿರುವ ಕಾಂಗ್ರೆಸ್ ಶಾಸಕರುಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತುಗಳನ್ನಾಡುತ್ತಿದ್ದಾರೆ. ಮುಂದಿನ ೬ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರುಗಳು ಸರ್ಕಾರದ ವಿರುದ್ದ ತಿರುಗಿಬೀಳಲಿದ್ದು ಸರ್ಕಾರ ಪತನಗೊಳ್ಳಲಿದೆ.
ಆ ನಂತರ ರಾಜ್ಯದಲ್ಲಿ ರೈತಪರ, ಜನಪರವಾದ ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದ ಅವರು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿರುವ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮದ್ಯದ ಏರಿಕೆ ಮಾಡಿತ್ತು. ಈಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. ಮುಂದಿನ ದಿನಗಳಲ್ಲಿ ನೀರಿನ ದರ, ವಿದ್ಯುತ್ ದರ, ಬಸ್ ಪ್ರಯಾಣ ದರ ಏರಿಕೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಕಿಡಿಕಾರಿದರು.
ಬಿಜೆಪಿ ಅಧ್ಯಕ್ಷ ಮೃತ್ಯುಂಜಯ ನೇತೃತ್ವದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ದಬ್ಬೇಘಟ್ಟ ರಸ್ತೆಯಿಂದ ಮೆರವಣಿಗೆ ನಡೆಸಿ ಬಾಣಸಂದ್ರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ಹಾಲೇಗೌಡ, ಕೆಂಪೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಯಾದವ್, ಮಹಿಳಾ ಮೋರ್ಚಾ ಅಧ್ಯಕ್ಷೆ ಚೂಡಾರತ್ನ, ಮುಖಂಡರಾದ ಎಂ.ಡಿ.ಮೂರ್ತಿ, ವಿ.ಬಿ.ಸುರೇಶ್, ಚಿದಾನಂದ್, ತಂಡಗ ಧನಪಾಲ್, ಅನಿತಾನಂಜುಂಡಯ್ಯ, ಆಶಾರಾಜಶೇಖರ್, ಬಾಣಸಂದ್ರ ಸೋಮಶೇಖರ್, ಸೋಮೇನಹಳ್ಳಿ ಜಗದೀಶ್, ರೇಣುಕಯ್ಯ, ಪ್ರಭಾಕರ್, ಪುಟ್ಟರಂಗೇಗೌಡ, ಗೌರೀಶ್, ಮುನಿಯೂರು ರಾಮಚಂದ್ರಯ್ಯ, ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ಎನ್.ಆರ್.ಸುರೇಶ್, ಹೆಚ್.ಆರ್.ರಾಮೇಗೌಡ, ಎ.ಬಿ.ಜಗದೀಶ್, ಆರ್.ಮಧು, ಪುನೀತ್, ಬಸವರಾಜು, ದೇವರಾಜು ಸೇರಿದಂತೆ ನೂರಾರು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ