ಫಸಲ್ ಭೀಮಾ ಯೋಜನೆ ಮತ್ತು ಬೆಳೆ ಸಮೀಕ್ಷೆ ಕುರಿತ ಪ್ರಚಾರ ಅಭಿಯಾನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ:

ತುರುವೇಕೆರೆ: ಪ್ರಧಾನ ಮಂತ್ರಿ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆ ಮತ್ತು ಬೆಳೆ ಸಮೀಕ್ಷೆ ಕುರಿತ ಪ್ರಚಾರ ಅಭಿಯಾನಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಚಾಲನೆ ನೀಡಿದರು.

 

 

ನಂತರ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ರೈತರ ಹಿತ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿದೆ.

 

 

ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ(ವಿಮಾ) ಯೋಜನೆಯನ್ನು ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.

 

 

ರೈತರು ಮೊದಲೇ ಸಂಕಷ್ಟದಲ್ಲಿದ್ದು, ಪ್ರಕೃತಿ ವಿಕೋಪ ಸಂಭವಿಸಿದರೆ ಬೆಳೆದ ಬೆಳೆಯೂ ಹಾಳಾಗುತ್ತದೆ. ಆದ್ದರಿಂದ ವಿಮೆ ಮಾಡಿಸಿ ಸರ್ಕಾರದ ಈ ಯೋಜನೆಯ ಅನುಕೂಲ ಪಡೆದುಕೊಳ್ಳಬೇಕೆಂದರು.

 

 

ಕೃಷಿ ಸಹಾಯಕ ನಿರ್ದೇಶಕಿ ಪೂಜಾ ಮಾತನಾಡಿ, 2023-24 ನೇ ಸಾಲಿನ ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆಗಳಿಗೆ ವಿಮೆಯನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಹೆಸರು ಬೆಳೆಗೆ ಜುಲೈ 01, ಅಲಸಂದೆ ಬೆಳೆಗೆ ಜುಲೈ 15, ರಾಗಿ ಬೆಳೆಗೆ ಆಗಸ್ಟ್ 16 ಅಂತಿಮ ದಿನಾಂಕವಾಗಿರುತ್ತದೆ. ರೈತರು ತಮ್ಮ ಬೆಳೆಗಳನ್ನು ಬೆಳೆ ವಿಮೆಗೆ ನೋಂದಾಯಿಸಿಕೊಂಡು ಅನುಕೂಲ ಪಡೆದುಕೊಳ್ಳಬೇಕೆಂದರು.

 

 

ಇದಲ್ಲದೆ 2024-25ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯು ಪ್ರಾರಂಭವಾಗುತ್ತಿದ್ದು, ರೈತರು ತಮ್ಮ ಮೊಬೈಲ್ ನ ಪ್ಲೇಸ್ಟೋರ್ ನಲ್ಲಿ 2024-25ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಆಪ್ ಡೌನ್ ಲೋಡ್ ಮಾಡಿಕೊಂಡು ತಮ್ಮ ಜಮೀನಿನಲ್ಲಿ ಬೆಳೆದಂತಹ ಬೆಳೆಯ ದಾಖಲೆಗಳನ್ನು ತಾವೇ ಖುದ್ದು ದಾಖಲಿಸಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ತರಬೇತಿಗಳನ್ನು ಆಯೋಜನೆ ಮಾಡಲಾಗಿದೆ.

 

 

ತರಬೇತಿಯಲ್ಲಿ ರೈತರು ಪಾಲ್ಗೊಂಡು ಬೆಳೆ ಸಮೀಕ್ಷೆ ಆಪ್ ನಲ್ಲಿ ಬೆಳೆಯ ದಾಖಲೆಗಳನ್ನು ದಾಖಲಿಸುವ ಪ್ರಕ್ರಿಯೆಯ ಬಗ್ಗೆ ತಿಳಿದುಕೊಂಡು ಸರಿಯಾಗಿ ದಾಖಲು ಮಾಡಬೇಕೆಂದರು.

 

 

ಈ ಸಂದರ್ಭದಲ್ಲಿ ತಹಸೀಲ್ದಾರ್ ರೇಣುಕುಮಾರ್, ಇಒ ಶಿವರಾಜ್, ಪಪಂ ಸದಸ್ಯ ಎನ್.ಆರ್.ಸುರೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ.ರಾಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Leave a Reply

Your email address will not be published. Required fields are marked *