ತುರುವೇಕೆರೆ: ತಾಲೂಕಿನ ಕಣತೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಪೂರ್ವಭಾವಿಯಾಗಿ ಗ್ರಾಮಸ್ಥರೊಡನೆ ಸಮಾಲೋಚನಾ ಸಭೆ ನಡೆಸಲಾಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಬಗ್ಗೆ ಧರ್ಮಸ್ಥಳ ಯೋಜನೆಯ ಚಿಂತನೆ, ಕನಸೇನು ಎಂಬುದರ ಮಾಹಿತಿ ನೀಡಿದರು.
ಕೆರೆಯ ಹೂಳೆತ್ತಿ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ಈ ಯೋಜನೆಯಿಂದ ರೈತರ ಕೃಷಿ ಚಟುವಟಿಕೆಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಕಾರ್ಯಕ್ಕೆ ರೈತರು, ಗ್ರಾಮಸ್ಥರು ಸಹಕಾರ ನೀಡಬೇಕೆಂದ ಅವರು, ಕೆರೆ ಕಾಮಗಾರಿಯ ರೂಪುರೇಷೆ, ಸಮಿತಿ ರಚನೆ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿಕೊಟ್ಟರು.
ತಾಲೂಕು ಯೋಜನಾಧಿಕಾರಿ ಯಶೋಧರ ಅವರು ಕೆರೆ ಕಾಮಗಾರಿಯ ವಿವಿಧ ಹಂತಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕೆರೆ ಅಭಿವೃದ್ದಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲಾಯಿತು. ಗ್ರಾಮದ ಪಂಚಾಯತ್ ಅಧ್ಯಕ್ಷರು, ಗುಡಿಗೌಡರು,ಒಕ್ಕೂಟದ ಅಧ್ಯಕ್ಷರು, ಗ್ರಾಮಸ್ಥರು, ರೈತರು ಭಾಗವಹಿಸಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ*