ತುಮಕೂರು: ಛತ್ರಪತಿ ಶಿವಾಜಿ ಮಹಾರಾಜರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಮಹಾ ಪರಾಕ್ರಮಿಯಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್ ಹಾಗೂ ಕರ್ನಾಟಕ ಮರಾಠ ಕ್ಷತ್ರಿಯ ಪರಿಷತ್ತಿನ ಸಹಯೋಗದಲ್ಲಿ ಬುಧವಾರ ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ‘ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಾಜಿಯವರಲ್ಲಿದ್ದ ದೇಶಭಕ್ತಿ, ಆತ್ಮಗೌರವವನ್ನು ಈಗಿನ ಯುವಕರು ಅಳವಡಿಸಿಕೊಳ್ಳಬೇಕು. ಮರಾಠ ಸಮುದಾಯದ ಯುವಕರು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾವಂತರಾಗಿ, ಭವಿಷ್ಯವನ್ನು ಉತ್ತಮವಾಗಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್ತಿನ ಗೌರವಾಧ್ಯಕ್ಷ ನಾಗೇಶ್‍ರಾವ್ ಗಾಯಕ್ವಾಡ್ ಮಾತನಾಡಿ, ಭಾರತೀಯ ಇತಿಹಾಸದಲ್ಲಿ ಅನನ್ಯ ವ್ಯಕ್ತಿತ್ವವನ್ನು ಹೊಂದಿದ್ದ ಮಹಾನ್ ಶಕ್ತಿಶಾಲಿ ಆಡಳಿತಗಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ನಾವಿಂದು ಗೌರವಯುತವಾಗಿ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಅವರ ಜೀವನ ಮತ್ತು ಆದರ್ಶಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ತಾಯಿ ಜೀಜಾಬಾಯಿಯವರ ಪ್ರಭಾವದಿಂದ ಶಿವಾಜಿ ಅವರು ಧರ್ಮನಿಷ್ಠ, ಧೈರ್ಯಶಾಲಿ ಮತ್ತು ಪ್ರಜಾಪಾಲಕನಾಗಿ ಬೆಳೆಯಲು ಕಾರಣವಾಯಿತು. ಅವರು ಕೇವಲ ತಮ್ಮ 17ನೇ ವಯಸ್ಸಿನಲ್ಲಿಯೇ ತೋರಣದುರ್ಗ ಕೋಟೆಯನ್ನು ಜಯಿಸುವ ಮೂಲಕ ಸ್ವರಾಜ್ಯದ ಬೀಜವನ್ನು ಬಿತ್ತಿದರು. ಹೋರಾಟದಿಂದ ಹತ್ತಾರು ಕೋಟೆಗಳನ್ನು ಗೆದ್ದು, ಮರಾಠ ಸಾಮ್ರಾಜ್ಯ ಸ್ಥಾಪನೆ ಮಾಡಿದರು ಎಂದು ತಿಳಿಸಿದರು.
- ತಹಶೀಲ್ದಾರ್ ರಾಜೇಶ್ವರಿ ಮಾತನಾಡಿ, ಶಿವಾಜಿ ಮಹಾರಾಜರು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಒಬ್ಬ ವ್ಯಕ್ತಿ ಎಷ್ಟು ಜೀವಿಸಬೇಕು ಎನ್ನುವುದಕ್ಕಿಂತ ಹೇಗೆ ಜೀವಿಸಬೇಕು? ನಮ್ಮ ಸಂಸ್ಕøತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದು ಶಿವಾಜಿಯವರ ಆದರ್ಶಗಳಿಂದ ಕಲಿಯಬೇಕು. ಶಿವಾಜಿ ಮಹಾರಾಜರು ಎಲ್ಲಾ ಧರ್ಮಗಳ ಜನರನ್ನೂ ಗೌರವಿಸಿ ಸಮಾನತೆಯನ್ನು ಉತ್ತೇಜಿಸುತ್ತಿದ್ದರು. ಶಿಸ್ತುಬದ್ಧ ಸೇನೆ ಮತ್ತು ನೌಕಾಪಡೆಯನ್ನು ನಿರ್ಮಿಸಿ, ತಂತ್ರಜ್ಞಾನವನ್ನು ಬಳಸಿಕೊಂಡು ಶತ್ರುಗಳನ್ನು ಸದೆ ಬಡಿಯುವಲ್ಲಿ ಯಶಸ್ವಿಯಾದರು. ಮಹಿಳೆಯರ ಗೌರವವನ್ನು ಕಾಪಾಡಲು ಕಠಿಣ ನಿಯಮಗಳನ್ನು ಜಾರಿಗೆ ತಂದರು ಮತ್ತು ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸುರೇಶ್ ಕುಮಾರ್, ಜಿಲ್ಲಾ ಮರಾಠ ಕ್ಷತ್ರಿಯ ಪರಿಷತ್ತಿನ ಅಧ್ಯಕ್ಷ ಜನಾರ್ದನ್‍ರಾವ್ ಸೋನಾಲೆ, ಕಾರ್ಯದರ್ಶಿಗಳಾದ ಶ್ರೀನಿವಾಸ್‍ರಾವ್ ಸಾಳಂಕೆ ಹಾಗೂ ಗಂಗೋಜಿರಾವ್, ಸಹಕಾರ್ಯದರ್ಶಿ ರಮೇಶ್ ಶಿಂಧೆ, ನಿರ್ದೇಶಕರಾದ ರಾಮಕೃಷ್ಣರಾವ್ ಕರಾಂಡೆ, ಹರ್ಷ ಕದಂ, ಮುರಳೀಧರ, ಲೋಕೇಶ್ ಸಾವಂತ್, ಪಾಂಡುರಾವ್, ಗಣೇಶ್‍ರಾವ್ ಬೋಂಸ್ಲೆ, ಮೋಹನ್‍ರಾವ್, ರವಿನಾಥ್, ಶ್ರೀನಿವಾಸ್‍ರಾವ್ ಜಾಧವ್ ಸೇರಿದಂತೆ ಇನ್ನಿತರರು ಹಾಜರಿದ್ದರು.