ಸೂಕ್ತ ಚಿಕಿತ್ಸೆಯಿಂದ ಕುಷ್ಠರೋಗಿಗಳು ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ-ನೂರುನ್ನಿಸಾ

ತುಮಕೂರು : ಸೂಕ್ತ ಚಿಕಿತ್ಸೆಯಿಂದ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಮುಖಪಡಿಸಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ತಿಳಿಸಿದರು.

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು ವರ್ಷಗಳ ಹಿಂದೆ ಕುಷ್ಠರೋಗವು ಯಾವುದೇ ಔಷಧೋಪಚಾರವಿಲ್ಲದೆ ಗುಣಮುಖವಾಗದ ಖಾಯಿಲೆಯಾಗಿತ್ತು. ಕುಷ್ಠರೋಗಿಗಳನ್ನು ಅಸ್ಪಶ್ಯರಂತೆ ಕಾಣುವ ವ್ಯವಸ್ಥೆಯಿತ್ತು. ಪ್ರಸ್ತುತ ಕುಷ್ಠರೋಗಕ್ಕೆ ಉಚಿತ ಔಷಧಿ ಲಭ್ಯವಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆಯುವುದರಿಂದ ಕುಷ್ಠರೋಗದಿಂದ ಗುಣಮುಖ ಹೊಂದಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶೇ.0.06ರಷ್ಟು ಮಾತ್ರ ಕುಷ್ಠರೋಗದ ಪ್ರಕರಣಗಳಿವೆ. ರಾಜ್ಯದಲ್ಲಿ 1785 ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೇವಲ 40 ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಶೇಖರ್ ಮಾತನಾಡಿ ಹಿಂದಿನ ಕಾಲದಲ್ಲಿ ಕುಷ್ಠರೋಗವನ್ನು ಶಾಪಗ್ರಸ್ಥ ರೋಗವೆಂದು ಪರಿಗಣಿಸಲಾಗುತ್ತಿತ್ತು. ಜಿಲ್ಲೆಯ ಇತರೆ ತಾಲ್ಲೂಕುಗಳಿಗಿಂತ ಶಿರಾ, ಪಾವಗಡ, ಮಧುಗಿರಿ ತಾಲ್ಲೂಕಿನಲ್ಲಿ ಕುಷ್ಠರೋಗ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಆರೋಗ್ಯ ಇಲಾಖೆಯಿಂದ ಕುಷ್ಠ ರೋಗಿಗಳಿಗೆ ಉಚಿತವಾಗಿ ಪೌಷ್ಟಿಕಾಂಶ ಔಷಧಿ, ಎಂಸಿಆರ್ ಚಪ್ಪಲಿ, ಕೈಕಾಲುಗಳಿಗೆ ಗ್ರಿಪ್ ಏಯ್ಡ್ ಸ್ಪಿಂಟ್ಸ್‍ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ಚರ್ಮದ ಮೇಲೆ ಮಚ್ಚೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕೆಂದು ತಿಳಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ|| ರವೀಂದ್ರ ನಾಯ್ಕ ಮಾತನಾಡಿ, ಕುಷ್ಠರೋಗ ನಿರ್ಮೂಲನೆಯಲ್ಲಿ ಗಾಂಧೀಜಿಯವರ ಕೊಡುಗೆ ಇದ್ದು, ಗಾಂಧೀಜಿಯವರು ಹುತಾತ್ಮರಾದ ದಿನದ ನೆನಪಾಗಿ ಇಂದು ಕುಷ್ಠರೋಗ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ. ರೋಗದ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ. ಬೇರೆ ರೋಗಗಳಿಗೆ ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳಿರುತ್ತವೆ. ಆದರೆ ಕುಷ್ಠರೋಗಕ್ಕೆ ಯಾವುದೇ ರೋಗ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ಚರ್ಮದ ಮೇಲೆ ಮಚ್ಚೆ ಕಂಡು ಬಂದರೆ ರೋಗಿಗಳೇ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು ಎಂದರು.

ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾಸ್ಪತ್ರೆ ಆವರಣದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿವರೆಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಅಸ್ಗರ್ ಬೇಗ್, ಜಿಲ್ಲಾ ಚರ್ಮರೋಗ ತಜ್ಞ ಡಾ|| ಅಸ್ಮಾ ತಬಸುಮ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಲಕ್ಷ್ಮಿಕಾಂತ್, ನಾಗರಾಜ್, ಜಯಣ್ಣ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!