ಸಿದ್ದಾರ್ಥ ಶಿಕ್ಷಣ ಸಂಸ್ಥೆ ಆರೋಗ್ಯ ದಾಸೋಹ ಮಾಡುತ್ತಿದೆ: ಸಿದ್ದಗಂಗಾ ಮಠದ ಉತ್ತರಾಧಿಕಾರಿ ಕಿರಿಯ ಸ್ವಾಮೀಜಿ ಶಿವಸಿದ್ದೇಶ್ವರ ಸ್ವಾಮೀಜಿ
ತುಮಕೂರು: ಜಗತ್ತಿನ 84 ಲಕ್ಷ ಜೀವ ರಾಶಿಗಳಲ್ಲಿ ಮನುಷ್ಯನು ಒಬ್ಬನಾಗಿದ್ದು, ತನ್ನ ಭೋಗ ಜೀವನದಿಂದಾಗಿ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವಲ್ಲಿ ವಿಫಲನಾಗಿದ್ದು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಇಂತಹ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ಅಕ್ಷರಸಂತ ಡಾ. ಗಂಗಾಧರಯ್ಯನವರು ಕಟ್ಟಿ ಬೆಳಸಿರುವ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯಲ್ಲಿ ಆರೋಗ್ಯದ ದಾಸೋಹ ನಡೆಯುತ್ತಿದೆ ಎಂದು ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿರುವ ಕಿರಿಯ ಸ್ವಾಮೀಜಿ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿಗಳವರು ಅವರು ಅಭಿಪ್ರಾಯಪಟ್ಟರು.
ತುಮಕೂರು ನಗರ ಹೊರ ವಲಯದ ಅಗಳಕೋಟೆಯ ಇಂದು (ಶು.27)ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಕಾಲೇಜಿನಲ್ಲಿ ರೋಟರಿ ಸೆಂಟ್ರಲ್ ಸಹಯೋಗದೊಂದಿಗೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಉಚಿತವಾಗಿ ಕೊಡಮಾಡಿದ ‘ಡಯಾಲಿಸಿಸ್ ಯಂತ್ರ’ಗಳನ್ನು ಸಾರ್ವಜನಿಕ ಬಳಕೆಗೆ ಸಮರ್ಪಣೆ ಮಾಡಿ, ವಿವಿಧ ರೀತಿಯ ಲ್ಯಾಬ್‍ಗಳನ್ನು ಉದ್ಘಾಟನೆ ಮಾಡಿದ ನಂತರ ಅವರು ಮಾತನಾಡಿ, ಸಿದ್ದಗಂಗಾ ಕ್ಷೇತ್ರದಲ್ಲಿ ಅನ್ನ,ಅಕ್ಷರ, ಆಶ್ರಯದ ದಾಸೋಹ ನಡೆದರೆ ಸಿದ್ದಾರ್ಥ ಆಸ್ಪತ್ರೆಯಲ್ಲಿ ಅನೇಕ ಉಚಿತ ಆರೋಗ್ಯ ಯೋಜನೆಗಳನ್ನು ರೂಪಿಸಿದ್ದು, ಆರೋಗ್ಯ ದಾಸೋಹ ಮಾಡುತ್ತಿದೆ ಎಂದರು.
ಡಾ.ಎಚ್ ಎಮ್ ಗಂಗಾಧರಯ್ಯನವರು ಕಟ್ಟಿ ಬೆಳೆಸಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ರಾಜ್ಯದಾದ್ಯಂತ ವಿಸ್ತಾರಗೊಂಡಿದ್ದು ಅನೇಕ ಮೈಲುಗಲ್ಲುಗಳನ್ನ ಸ್ಥಾಪಿಸಿದೆ ಶ್ರೀಮಠಕ್ಕೆ ಸದ್ಭಕ್ತರಾಗಿರುವ ಗಂಗಾಧರಯ್ಯನವರು ಅಂದಿನಿಂದಲೂ ಶಿಕ್ಷಣಕ್ಕೆ ಒತ್ತು ನೀಡಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಅದೇ ರೀತಿಯಲ್ಲಿ ಅವರ ಮಕ್ಕಳು ಸಾಗರದಾಚೆಗೂ ಶಿಕ್ಷಣ ಸಂಸ್ಥೆಗಳ ವೈಶಿಷ್ಟ್ಯವನ್ನ ತೋರಿಸಿಕೊಟ್ಟಿದ್ದಾರೆ. ರಾಜಕೀಯ ಜೀವನದಲ್ಲಿದ್ದು ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮವಾದ ಸೇವೆ ನೀಡುತ್ತಿದ್ದಾರೆ ಎಂದು ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿಗಳವರು ನುಡಿದರು.
ಮನುಷ್ಯನ ದುರಾಸೆಗಳಿಂದ ಆಧುನಿಕ ಜಗತ್ತಿನಲ್ಲಿ ಭೂಮಿಯ ಮೇಲಿರುವ ಪಂಚಭೂತಗಳು ಸೇರಿದಂತೆ ಆಹಾರ,ನೀರು, ವಿಷಯುಕ್ತವಾಗಿದೆ ಈ ನಡುವೆ ಮನುಷ್ಯ ತನ್ನ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳದೆ ಭೋಗ ಜೀವನದ ಅನೇಕ ಸಮಸ್ಯೆಗಳಿಗೆ ಸಿಲುಕಿ ತಾನು ಭೂಮಿಗೆ ಬಂದಾಗಿನಿಂದಲೂ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಜೊತೆಗೆ ಅದಕ್ಕೆ ಪರಿಹಾರವನ್ನು ಕಂಡುಕೊಂಡಿದ್ದಾನೆ .ಈ ನಿಟ್ಟಿನಲ್ಲಿ ಮರಣಾಂತಿಕವಾಗಿ ಕಂಡುಬರುತ್ತಿರುವ ಕಿಡ್ನಿ ಸಮಸ್ಯೆ ಸೇರಿದಂತೆ ಇತರೆ ಕಾಯಿಲೆಗಳಿಗೆ ಡಯಾಲಿಸಿಸ್ ಅತಿ ಮುಖ್ಯವಾಗಿದ್ದು ಇದು ಬಡ ರೋಗಿಗಳಿಗೆ ಲಭ್ಯವಾಗಲೆಂದು ಆರೋಗ್ಯದ ದಾಸೋಹ ಮಾಡುತ್ತಿರುವ ಸಿದ್ಧಾರ್ಥ ಸಂಸ್ಥೆಯ ಈ ಮೆಚ್ಚುಗೆ ಕಾರ್ಯಕ್ಕೆ ರೋಟರಿ ಸಂಸ್ಥೆಯು ಸಹಕಾರ ನೀಡಿ ನೂತನ ತಾಂತ್ರಿಕಆವಿಷ್ಕಾರ ಡಯಾಲಿಸಿಸ್ ಯಂತ್ರಗಳನ್ನು ನೀಡಿರುವುದು ಶ್ಲಾಘನೀಯವೆಂದು ಸ್ವಾಮೀಜಿ ತಿಳಿಸಿದರು.
ಮನುಷ್ಯನ ದುಶ್ಚಟಗಳಿಂದ ಇಂದು ಕಿಡ್ನಿ ವೈಫಲ್ಯದ ಸಮಸ್ಯೆಗಳು ಕಂಡು ಬರುತ್ತಿರುವುದು ನರಕ ಸದೃಶವಾಗಿದೆ ಯುವಜನರಲ್ಲಿ ಹೆಚ್ಚಾಗಿ ಕಾಣುವ ಬರುವ ಈ ರೋಗಕ್ಕೆ ಅನೇಕ ಮಾರ್ಗೋಪಾಯಗಳನ್ನ ಕಂಡುಕೊಂಡಿರುವ ವೈದ್ಯರ ತಂಡ ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ ರೋಗಿಗಳನ್ನ ತಮ್ಮ ಸಂಬಂಧಿಕರೆಂದು ಭಾವಿಸಿ ಉತ್ತಮವಾದ ಚಿಕಿತ್ಸೆಯನ್ನು ನೀಡಬೇಕು. ಇದರ ಜೊತೆಗೆ ಎಲ್ಲಾ ಕಡೆಯೂ ಕಂಡುಬರುತ್ತಿರುವ ಕಿಡ್ನಿ ವೈಫಲ್ಯದ ಸಮಸ್ಯೆಗೆ ಡಯಾಲಿಸಿಸ್ ಕೇಂದ್ರಗಳನ್ನು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸಂಘ ಸಂಸ್ಥೆಗಳು ಪರಸ್ಪರ ಹೊಂದಾಣಿಕೆಯಿಂದ ಬಡವರ ಆರೋಗ್ಯ ಕಾಳಜಿ ಹೊಂದಿ ಸ್ಥಾಪನೆ ಮಾಡಬೇಕು ಎಂದು ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿಗಳವರು ಕಿವಿ ಮಾತು ಹೇಳಿದರು.
ತುಮಕೂರು ರೋಟರಿ ಸಂಸ್ಥೆಯ ಡೈರೆಕ್ಟರ್ ಗೌರ್ನರ್ ಎನ್. ಎಸ್. ಮಹದೇವ ಪ್ರಸಾದ್ ಅವರು ಮಾತನಾಡಿ, ರೋಟರಿ ಸಂಸ್ಥೆ ಈವರೆಗೂ ಆರೋಗ್ಯ ಕ್ಷೇತ್ರದ ಸೇವೆಯ ಪಾಲುದಾರಿಕೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಮಾರಣಾಂತಿಕವಾಗಿ ಅನೇಕ ರೋಗಗಳಿಗೆ ತುತ್ತಾಗಿದ್ದವರನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ. ಅದೇ ರೀತಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಯ ಜೊತೆಗೂಡಿ ಇನ್ನಷ್ಟು ಆರೋಗ್ಯ ಸೇವೆಗಳನ್ನು ಮಾಡಲು ಮುಮದಾಗಿದ್ದೇವೆ ಎಂದು ತಿಳಿಸಿದರು.
ಸಾಹೇ ವಿವಿ ಉಪಕುಲಪತಿಗಳಾದ ಡಾ. ಕೆ ಬಿ ಲಿಂಗೇಗೌಡ ಅವರು ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯ ಅನೇಕ ಮೈಲುಗಳನ್ನು ನಿರ್ಮಾಣ ಮಾಡಿದ್ದು ವಿವಿಧ ಕಾಯಿಲೆಗಳಿಗೆ ಬಡವರಿಗೆ ಉಚಿತವಾಗಿ ಆರೋಗ್ಯ ಸೇವೆಗಳನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆರೋಗ್ಯ ಸೇವೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ ಬಿ ಸಾನಿಕೊಪ್ಪ, ಉಪ ಪ್ರಾಂಶುಪಾಲರಾದ ಡಾ.ಜಿ.ಎನ್. ಪ್ರಭಾಕರ್, ತುಮಕೂರಿನ ರೋಟರಿ ಸಂಸ್ಥೆ ಅಧ್ಯಕ್ಷರಾದ ಸರೋಜಮ್ಮ, ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ಬಿಕೆ ಹೇಮಲತಾ, ಸುಪ್ರಿಯಾ ಕಾಂದ್ರಿ, ಬೆಳ್ಳಿ ಬ್ಲಡ್ ಬ್ಯಾಂಕ್‍ನ ಬೆಳ್ಳಿ ಲೋಕೇಶ್, ನರಸಿಂಹ ಸೇರಿದಂತೆ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ವೈದ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.