ಹೂವಿನ ಮಂಡಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ರೈತ ಸಂಘದಿಂದ ಶಾಸಕರಿಗೆ ಮನವಿ

ತುಮಕೂರು : ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹೂವಿನ ಮಂಡಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತುಮಕೂರು ಜಿಲ್ಲಾಧ್ಯಕ್ಷ ಪೂಜಾರಪ್ಪ ಅವರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.ಈ ಮನವಿಯು ಪಾವಗಡದ ಹೂವಿನ ಬೆಳೆಗಾರರು ಮತ್ತು ವ್ಯಾಪಾರಿಗಳ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮಾಡಲಾಗಿದೆ ಎಂದು ತಿಳಿಸಿದರು.

 

ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ ಪಾವಗಡ ಪುರಸಭೆಯ ಮುಖ್ಯ ಅಧಿಕಾರಿಗಳು ಹೂವಿನ ಮಂಡಿಗಾರರನ್ನು ಕೊಳಚೆ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಈ ಪ್ರದೇಶವು ದುರ್ವಾಸನೆಯಿಂದ ಕೂಡಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ರೋಗಗಳು ಬರುವ ಸಾಧ್ಯತೆಯಿರುವುದರಿಂದ ಸೂಕ್ತವಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದರು.

ಐತಿಹಾಸಿಕ ಸ್ಥಳ: ಕಳೆದ ಸುಮಾರು 20-30 ವರ್ಷಗಳಿಂದ, ಅಂದರೆ 2000 ಇಸವಿಯಿಂದಲೂ ಹೂವಿನ ಮಾರಾಟಗಾರರು ಹೊಸ ಬಸ್ ನಿಲ್ದಾಣದ ಪಕ್ಕದಲ್ಲೇ ಹೂ ಮಾರಾಟ ಮಾಡುತ್ತಿದ್ದಾರೆ. ಈ ಸ್ಥಳವು ಅವರಿಗೆ ಹೆಚ್ಚು ಅನುಕೂಲಕರವಾಗಿದೆ.

ಆರೋಗ್ಯದ ಆತಂಕ: ಪ್ರಸ್ತುತ ನಿಗದಿಪಡಿಸಿರುವ ಸ್ಥಳವು ಚರಂಡಿ ಕೊಳಚೆ ನೀರು ಮತ್ತು ಕೆಸರಿನಿಂದ ಕೂಡಿದ್ದು, ಇದು ಹೂ ಮಾರಾಟಗಾರರ ಆರೋಗ್ಯಕ್ಕೆ ಹಾನಿಕರವಾಗಿದೆ. ಇದರಿಂದ ರೈತರಿಗೆ ವಿವಿಧ ರೀತಿಯ ಕಾಯಿಲೆಗಳು ಬರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ರೈತರಿಗೆ ಅನುಕೂಲ: ಬೆಳಿಗ್ಗೆ 7:00 ರಿಂದ 10:00 ಗಂಟೆಯವರೆಗೆ ಹೂ ಮಾರಾಟ ಮಾಡಿಕೊಳ್ಳಲು ಮೊದಲಿನ ಸ್ಥಳದಲ್ಲಿಯೇ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾರಪ್ಪ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಿವು ಹಾಗೂ ಪ್ರಗತಿಪರ ಸಂಘಟನೆಗಳು ಶಾಸಕರಿಗೆ ಮನವಿ ಮಾಡಿಕೊಂಡಿವೆ.

ರೈತರ ಬೇಡಿಕೆಗಳಿಗೆ ಸ್ಪಂದಿಸುವಂತೆ
ಶಾಸಕರ ಭರವಸೆ:
ಪಾವಗಡ ಪಟ್ಟಣದ ನೂತನ ಬಸ್ ನಿಲ್ದಾಣಕ್ಕೆ ಹೂವಿನ ಮಾರುಕಟ್ಟೆ (ಮಂಡಿ) ಸ್ಥಳಾಂತರ ಮಾಡುವ ವಿಚಾರವಾಗಿ ತಾಲ್ಲೂಕು ರೈತ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಾನ್ಯ ಶಾಸಕರು ಹಾಗೂ ತುಮುಲ್ ಅಧ್ಯಕ್ಷರಾದ ಹೆಚ್.ವಿ. ವೆಂಕಟೇಶ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

 

ಸದರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಹೂವಿನ ಮಾರುಕಟ್ಟೆ ಸ್ಥಳಾಂತರ ಮಾಡುವುದು ಬೇಡ, ಎಂದಿನಂತೆ ನಡೆಯುತ್ತಿದ್ದ ಸ್ಥಳದಲ್ಲೇ ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಭರವಸೆ ನೀಡಿ ರೈತರ ಬೆಂಬಲಕ್ಕೆ ನಿಂತರು. ಈ ಸಂದರ್ಭದಲ್ಲಿ , ಕಿಲ್ಲರ್ಹಳ್ಳಿ ಈರಣ್ಣ, ಬಿ ಎಸ್ ದುರ್ಗಪ್ಪ , ನಡಪನ್ನ , ಹನುಮಂತರಾಯಪ್ಪ , ಸಿ ಕೆ ಪುರ ಈರಣ್ಣ, ದುರ್ಗಪ್ಪ, ನಾಗಪ್ಪ, ರಂಗಪ್ಪ , ಹೂವು ಮಾರಾಟಗಾರ ರೈತರು ಹಾಗೂ ರೈತ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!