ಎಐ-ಚಾಲಿತ ಜಗತ್ತಿನಲ್ಲಿ ಎಂಬಿಎ: ವಿಮ್‍ಟೆಕ್‍ನಿಂದ ಚಿಂತನಾತ್ಮಕ ಚರ್ಚೆ
ತುಮಕೂರು: ಎಐ ಬೆಳೆಯುತ್ತಿರುವಂತೆ ವಿಶ್ವವು ಚಿಕ್ಕದಾಗುತ್ತಿದೆ, ಎಂಬಿಎ ಕೇವಲ ಪದವಿಯಲ್ಲ; ಇದು ಜಾಗತಿಕ ಅವಕಾಶಗಳಿಗೆ ಹೆಬ್ಬಾಗಿಲಾಗಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಪ್ರದೀಪ್‍ಕುಮಾರ್ ಎನ್ ಬಿ ಅವರು ಹೇಳಿದರು.
ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಭಾಗವಾದ ವೈಸಿರಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆಂಡ್ ಟೆಕ್ನಾಲಜಿ(ವಿಮ್‍ಟೆಕ್) ವತಿಯಿಂದ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ “ಎಐ-ಚಾಲಿತ ಜಗತ್ತಿನಲ್ಲಿ ಎಂಬಿಎ” ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯ ಜಾಗತಿಕ ದೃಷ್ಟಿಕೋನವನ್ನು ಒತ್ತಿಹೇಳಿದರು. ವಿಮ್‍ಟೆಕ್‍ನ ಎಂಬಿಎ ವಿದ್ಯಾರ್ಥಿಗಳಿಗೆ ಜಪಾನ್‍ನ ಕಂಪನಿಗಳಲ್ಲಿ ಉದ್ಯೋಗಾವಕಾಶ ಒದಗಿಸಲಾಗುವುದೆಂದು ಘೋಷಿಸಿದರು.
ವೈಸಿರಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆಂಡ್ ಟೆಕ್ನಾಲಜಿಯಲ್ಲಿ ಸರ್ಕಾರ, ತುಮಕೂರು ವಿಶ್ವವಿದ್ಯಾಲಯ ಮತ್ತು ಎಐಸಿಟಿಇ ಅನುಮೋದಿತ ಹೊಸ ಎಂಬಿಎ ಕೋರ್ಸ್‍ನ್ನು ಪರಿಚಯಿಸಿದ ಅವರು, ಈ ಕೋರ್ಸ್ ಕೃತಕ ಬುದ್ಧಿಮತ್ತೆ (ಎಐ) ಮತ್ತು ಜಪಾನೀ ಭಾಷ ಕೌಶಲ್ಯಗಳನ್ನು ಒಳಗೊಂಡಿದ್ದು, ಉದ್ಯೋಗಾವಕಾಶಗಳ ಸೃಷ್ಟಿ, ಭಾಷ ಪರಿಣತಿ ಮತ್ತು ಸಮಗ್ರ ಪ್ರಮಾಣೀಕರಣಕ್ಕಾಗಿ ಕೌಶಲ್ಯ-ಆಧಾರಿತ ಪ್ರಮಾಣಪತ್ರ ಕೋರ್ಸ್‍ನ್ನು ನೀಡುತ್ತದೆ ಎಂದರು.
ಬೆಂಗಳೂರಿನ ಬ್ರಿಸಾ ಟೆಕ್ನಾಲಜೀಸ್‍ನ ಸಂಸ್ಥಾಪಕ ಸುಭೋದ್ ಪಾಟೀಲ್ ಮಾತನಾಡಿ, ಚಾಟ್‍ಜಿಪಿಟಿಯಂತಹ ಎಐ-ಚಾಲಿತ ತಂತ್ರಜ್ಞಾನಗಳು ಕಂಪನಿಗಳಿಗೆ ಸಂಕೀರ್ಣ ಸಮಸ್ಯೆಗಳನ್ನು ಕೋಡಿಂಗ್ ಇಲ್ಲದೆ ಪರಿಹರಿಸಲು ಸಹಾಯ ಮಾಡುತ್ತವೆ. ಎಐ ತಂತ್ರಜ್ಞಾನ-ಚಾಲಿತ ಕೆಲಸದ ವಾತಾವರಣವನ್ನು ಮರುರೂಪಿಸುತ್ತಿದೆ ಎಂದು ತಿಳಿಸಿದರು.
ಎನ್‍ಸಿಂಥೆಸಿಸ್ ಕಂಪನಿಯ ಸಹ-ಸಂಸ್ಥಾಪಕ ಸುಬ್ರಮಣ್ಯ ದೇಸಾಯಿ ಮಾತನಾಡಿ, ಎಐಯು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ, ವಿಶೇಷವಾಗಿ ಕೋ-ಪೈಲಟ್ ಸಿಸ್ಟಮ್‍ಗಳ ಮೂಲಕ ಕಾರ್ಯಪ್ರವಾಹವನ್ನು ರೂಪಾಂತರಗೊಳಿಸುತ್ತಿದೆ ಎಂದ ಅವರು, ನಿರಂತರ ಕಲಿಕೆ ಮತ್ತು ಹೊಂದಿಕೊಳ್ಳುವಿಕೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಟಮಾಲ ಸಂಸ್ಥಾಪಕ ವಿನಯ್ ಪ್ರಶಾಂತ್ ಮಾತನಾಡಿ, ಎಐಯನ್ನು ಬೆಂಬಲಕಾರಕ ಸಹಾಯಕವಾಗಿ ಗ್ರಹಿಸಬೇಕು. ಮಾರ್ಕೆಟಿಂಗ್, ರಿಟೇಲ್ ಮತ್ತು ಕೃಷಿಯಲ್ಲಿ ಎಐಯನ್ನು ಅನ್ವಯಿಸಿಕೊಳ್ಳಬೇಕು ಎಂದರು.
ಕಾಮನ್‍ವೆಲ್ತ್ ಬ್ಯಾಂಕ್ ಆಫ್ ಆಸ್ಟೇಲಿಯಾದ ಕ್ಯೂಆರ್ ನಿರ್ದೇಶಕ ಅಮನ್ ಸಕ್ಸೇನಾ ಮಾತನಾಡಿ, ಕುತೂಹಲವು ಎಐ-ಚಾಲಿತ ವಿಶ್ವದಲ್ಲಿ ನಾವೀನ್ಯತೆಯ ಮೂಲಾಧಾರ ಎಂದು ಹೇಳಿದ ಅವರು, ಎಐಯನ್ನು ಅವಕಾಶ ಮತ್ತು ಸವಾಲಾಗಿ ಪರಿಗಣಿಸಬೇಕು. ಹಣಕಾಸು, ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನದಾದ್ಯಂತ ಎಐಯ ಅನ್ವಯಗಳ ಬಗ್ಗೆ ಚರ್ಚಿಸಿದರು.
ಕಾಮನ್‍ವೆಲ್ತ್ ಬ್ಯಾಂಕ್ ಆಫ್ ಆಸ್ಟೇಲಿಯಾದ ಕ್ಯೂಆರ್ ಸಹಾಯಕ ನಿರ್ದೇಶಕ ಸುನಿಲ್ ಆರ್ ಮಾತನಾಡಿ, ಎಐಯೊಂದಿಗೆ ಸಂಯೋಜಿತ ಮೊಬೈಲ್ ತಂತ್ರಜ್ಞಾನವು ಜೀವನವನ್ನು ದಕ್ಷಗೊಳಿಸಿದೆ ಎಂದರು.
ಪೀಪಲ್ ಆಂಡ್ ಕಲ್ಚರ್‍ನ ಹಿರಿಯ ನಿರ್ದೇಶಕಿ ರೂಪಸಿ ಎಸ್. ಮೂರ್ತಿ ಮಾತನಾಡಿ, ಎಐಯು ಸಹಾಯಕವಾಗಿರಬೇಕೇ ಹೊರತು ಸ್ಪರ್ಧಿಯಾಗಿ ಅಲ್ಲ. ಇಂದಿನ ಸ್ಪರ್ಧಾತ್ಮಕ ಹಾಗೂ ತಾಂತ್ರಿಕ ಯುಗದಲ್ಲಿ ಎಐಯೊಂದಿಗೆ ಕೆಲಸ ಮಾಡಬೇಕಾಗಿದ್ದು, ಅದಕ್ಕೆ ವಿರುದ್ಧವಾಗಿ ಅಲ್ಲ. ಹಾಗಾಗಿ ತಂತ್ರಜ್ಞಾನದ ಸಹಕಾರದಿಂದ ಭವಿಷ್ಯವನ್ನು ನಿರ್ಮಾಣ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವೈಸಿರಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಅಮೂಲ್ಯ ಜಿ, ಎಂಬಿಎ ನಿರ್ದೇಶಕ ಡಾ. ಪ್ರಸನ್ನಕುಮಾರ್ ಟಿ ಎಂ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.