ಜಿಲ್ಲಾಧಿಕಾರಿಗಳಿಂದ ಕುಡಿಯುವ ನೀರಿನ ಕಾಮಗಾರಿ ಪರಿಶೀಲನೆ

ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶುಕ್ರವಾರ ಮಧುಗಿರಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪರಿಶೀಲಿಸಿದರು.

ಪುರಸಭೆ ವ್ಯಾಪ್ತಿ ವಾರ್ಡ್ ನಂಬರ್ 11 ಹಾಗೂ 15ನೇ ವಾರ್ಡಿನಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ವೀಕ್ಷಿಸಿದ ಅವರು, 11ನೇ ವಾರ್ಡಿನಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕುಡಿಯುವ ನೀರು ಪೋಲಾಗುತ್ತಿದ್ದು, ಯಾವೊಬ್ಬ ಗುತ್ತಿಗೆದಾರರು, ಅಧಿಕಾರಿಗಳೂ ಗಮನಿಸದೇ ಇರುವುದು ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯತೆ ಎದ್ದು ಕಾಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

ಅಭಿವೃದ್ಧಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದು, ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸಬೇಕು. ಕಾಮಗಾರಿ ಸ್ಥಳಕ್ಕೆ ಕೂಡಲೇ ಇಂಜಿನಿಯರ್‍ಗಳನ್ನು ನಿಯೋಜಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರಿಗೆ ನಿರ್ದೇಶನ ನೀಡಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳು ನಡೆಯುತ್ತಿದ್ದು, ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳುವಾಗ ನೀರಿನ ಪೈಪ್‍ಲೈನ್‍ಗೆ ಚರಂಡಿ ನೀರು ಮಿಶ್ರಣವಾಗದಂತೆ ಎಚ್ಚರಿಕೆ ವಹಿಸಬೇಕು. ಮಳೆಗಾಲವಾಗಿರುವುದರಿಂದ ಮಳೆ ನೀರು ತೆರೆದ ಚರಂಡಿಗೆ ಸೇರಿ ನೀರಿನ ಅರಿವು ಹೆಚ್ಚಾಗಿ ಕಲುಷಿತ ನೀರು ಕುಡಿಯುವ ನೀರಿನ ಪೈಪ್‍ಲೈನ್‍ಗೆ ಸೇರುವ ಸಾಧ್ಯತೆಯಿರುತ್ತದೆ. ಕಲುಷಿತ ನೀರಿನಿಂದ ನಾಗರಿಕರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಲಿರುವ ಕಾರಣ ತಕ್ಷಣವೇ ತೆರೆದ ಚರಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಪೈಪ್ ಲೈನ್ ಕಾಮಗಾರಿ ಪ್ರಗತಿಗೆ ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ಮಧುಗಿರಿ ಪುರಸಭೆಯಿಂದ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಕೆಟ್ಟ ವಾಸನೆಯಿಂದ ಕೂಡಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಕುಡಿಯುವ ನೀರಿನ ಯಾವುದೇ ಮೂಲಗಳನ್ನು ಕಡ್ಡಾಯವಾಗಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಬೇಕು. ಕುಡಿಯಲು ಯೋಗ್ಯವಾದ ನೀರನ್ನು ಮಾತ್ರ ಜನರಿಗೆ ಒದಗಿಸಬೇಕು ಎಂದರಲ್ಲದೆ, ಕಳೆದ ವರ್ಷವಷ್ಟೇ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಸಾವಿನ ಪ್ರಕರಣ ವರದಿಯಾಗಿತ್ತು. ಮತ್ತೊಮ್ಮೆ ಇಂತಹ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ಜಾಗ್ರತೆವಹಿಸಬೇಕು ಎಂದು ಸೂಚಿಸಿದರು.

ನಂತರ ಪಟ್ಟಣದ ರಾಜೀವ್‍ಗಾಂಧಿ ಕ್ರೀಡಾಂಗಣದ ಬಳಿಯಿರುವ ಜೆ.ಎಸ್.ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಸ್ವಚ್ಛತೆ, ಸಿಬ್ಬಂದಿ ಸಂಖ್ಯಾಬಲವನ್ನು ಪರಿಶೀಲಿಸಿದರು.
ಬಳಿಕ ಕೊರಟಗೆರೆ ಪಟ್ಟಣದ ಹೊರವಲಯದಲ್ಲಿರುವ ಕಾಮೇನಹಳ್ಳಿಗೆ ಭೇಟಿ ನೀಡಿ ಅಮೃತ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಬೇಕು. ಕಲುಷಿತ ನೀರಿನಿಂದ ಜನರ ಆರೋಗ್ಯದಲ್ಲಿ ಏರು-ಪೇರು, ವಾಂತಿ-ಬೇಧಿ, ಸಾವಿನ ಪ್ರಕರಣಗಳು ವರದಿಯಾದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆ ಎಂದು ತಾಕೀತು ಮಾಡಿದರು.

 

ನಂತರ ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಸೌಲಭ್ಯ ಪಡೆದಿರುವ ಕೊರಟಗೆರೆ ತಾಲ್ಲೂಕು ಪಾತಗಾನಹಳ್ಳಿಯ ರೈತ ಶ್ರೀನಿವಾಸ್ ಅವರ ಜಮೀನಿಗೆ ಭೇಟಿ ನೀಡಿ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಬಗ್ಗೆ ಪರಿಶೀಲಿಸಿದರು. ಇದೇ ವೇಳೆ ಮಾತನಾಡಿದ ಅವರು ಗಂಗಾ ಕಲ್ಯಾಣ ಯೋಜನೆಯಡಿ ಬಾಕಿಯಿರುವ ಕೊಳವೆಬಾವಿ ಕೊರೆಯುವ, ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶಿರಿನ್‍ತಾಜ್, ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ಹಾಗೂ ಮತ್ತಿತರ ಅಧಿಕಾರಿ/ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!