ತುಮಕೂರು: ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ತಿಪಟೂರು ಉಪವಿಭಾಗಾಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಅವರು ಮೇ 18ರಂದು ಜಂಟಿಯಾಗಿ ಕ್ಯಾಂಪ್ ನಡೆಸಿ ಖಾತೆದಾರರಿಗೆ ಭೂ ಪರಿಹಾರವನ್ನು ಪಾವತಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಗುರುವಾರ ಭೂಸ್ವಾಧೀನ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಭದ್ರಾ ಮೇಲ್ದಂಡೆ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬೆಳ್ಳಾರ, ತಿಮ್ಲಾಪುರ, ಹುಲ್ಲೇನಹಳ್ಳಿ, ಕಲ್ಲಹಳ್ಳಿ, ಡಿಂಕನಹಳ್ಳಿ, ಮೋಟಿಹಳ್ಳಿ ಹಾಗೂ ತಿಮ್ಮನಹಳ್ಳಿ ಗ್ರಾಮಗಳ 226 ಭೂ ಮಾಲೀಕರಿಗೆ ಮೇ 18ರಂದು ಭೂ ಪರಿಹಾರ ಪಾವತಿಸಬೇಕು. ಅಂದಾಜು 20 ಕೋಟಿ ರೂ.ಗಳಷ್ಟು ಭೂ ಪರಿಹಾರ ಪಾವತಿಸಲು ಬಾಕಿಯಿದ್ದು, ಭೂ ಮಾಲೀಕರಿಂದ ಅಗತ್ಯ ದಾಖಲೆಗಳನ್ನು ಪಡೆದು ಪರಿಹಾರ ಹಣವನ್ನು ಪಾವತಿಸಲು ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಭೈರಲಿಂಗನಹಳ್ಳಿ ಹಾಗೂ ಕೇಶವಾಪುರದಲ್ಲಿ ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಯಿಂದ ಈವರೆಗೂ ಮರ ಮತ್ತು ಮಾಲ್ಕಿ ಮೌಲ್ಯ ನಿರ್ಧರಣೆ ಮಾಡದೇ ಇರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದುಕೊಂಡಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಸದರಿ ಗ್ರಾಮಗಳ ಮರ ಮತ್ತು ಮಾಲ್ಕಿ ಮೌಲ್ಯ ನಿರ್ಧರಣೆ ಮಾಡಿ ವರದಿ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಹೇಮಾವತಿ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ರೈಲ್ವೆ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗಳು ಈವರೆಗೂ ಅನುಮೋದನೆಯಾಗದಿದ್ದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.
ಎತ್ತಿನ ಹೊಳೆ ಯೋಜನೆಗಾಗಿ ತಿಪಟೂರು ತಾಲ್ಲೂಕು ಚೌಡ್ಲಾಪುರ ಗ್ರಾಮದಲ್ಲಿ 60 ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚನೆ ನೀಡಿದರು.
ತುಮಕೂರು ನಗರದ ಬೈಪಾಸ್ ರಸ್ತೆಯಲ್ಲಿರುವ ಗೌರಿಪುರ ಹಾಗೂ ಭೈರಸಂದ್ರ ಗ್ರಾಮದ ಬಳಿ ಬೌಂಡರಿ ಕಲ್ಲು ಸಮಸ್ಯೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯಾಗಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ವಿವಿಧ ಯೋಜನೆಗಳ ವಿಶೇಷ ಭೂಸ್ವಾಧೀನಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.