ತುಮಕೂರು : ನಗರದಲ್ಲಿ ಡಾ|| ಬಾಬು ಜಗಜೀವನ್ ರಾಮ್‌ರವರ ಜನ್ಮದಿನೋತ್ಸವವನ್ನು ಅಖಿಲ ಕರ್ನಾಟಕ ಡಾ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಲಿತ ಕ್ರಿಯಾ ಸಮಿತಿಯ ವತಿಯಿಂದ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಅಖಿಲ ಭಾರತ ಡಾ|| ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಲಿತ ಕ್ರಿಯಾ ಸಮಿತಿಯ ಜಿಲ್ಲಾದ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಪುಷ್ಪನಮನ ಸಲ್ಲಿಸಿ ಬಾಬು ಜಗಜೀವನ್ ರಾಮ್‌ರವರನ್ನು ಸ್ಮರಿಸುತ್ತಾ ಸ್ವಾತಂತ್ರ ಹೋರಾಟದ ಕುಲುಮೆಯಲ್ಲಿ ಪುಟಗೊಂಡು ದೇಶದ ಸಾರ್ವಜನಿಕ ಜೀವನವನ್ನು ಸಂಪದಗೊಳಿಸಿದ ಮುತ್ಸದ್ಧಿಗಳ ಸಣ್ಣ ಸಾಲಿನಲ್ಲಿ ಈಗಲೂ ನಮ್ಮೊಂದಿಗಿರುವ ದೊಡ್ಡ ಮನುಷ್ಯರಲ್ಲಿ ಬಾಬು ಜಗಜೀವನ ರಾಮ್ ಸಹ ಒಬ್ಬರು. ಭಾರತದ ದ್ರಾವಿಡ ಇತಿಹಾಸದ ಸಂಕೇತ ರೂಪಿಯಾಗಿ ಕಾಣುವ ಬಹುಮುಖ ಪ್ರತಿಭೆಯ ಜಗಜೀವನ ರಾಮ್ ಒಬ್ಬ ಅಪೂರ್ವ ವ್ಯಕ್ತಿಯಾಗಿದ್ದವರು, ಇವರ ಜೀವನ-ಸಾಧನೆಗಳ ಸಂಪುಟ ಭಾರತೀಯ ಬದುಕಿನ ಎಲ್ಲಾ ವಿಕಾರ ರೂಪುಗಳ ವಿರಾಟಪರ್ವವಾಗಬಲ್ಲುದು, ಕಲುಷಿತ ಸಾಮಾಜಿಕ ವಾತಾವರಣದಲ್ಲೂ ಕಮರಿ ಹೋಗದೆ ಅರಳಲೂ ಆಗದೆ ಬಾಡಿ ಹೋದ ಜೀವ ಇವರದು ಎಂದರಲ್ಲದೇ, ಹರಿಜನ ಕುಟುಂಬವೊಂದರಲ್ಲಿ ಹುಟ್ಟಿದ ‘ಅಪರಾಧ’ ಇವರಿಂದ ಆಗದೆ ಇರುತ್ತಿದ್ದರೆ ಪ್ರಾಯಶಃ ಇವರಿಂದು ರಾಷ್ಟ ಪುರುಷನೋ, ಮಹಾ ನೇತಾರನೋ, ರಾಷ್ಟ ನಿರ್ಮಾಪಕರನೋ, ಹೊಸತನದ ಶಿಲ್ಪಿಯೋ ಆಗಿ ಚಿತ್ರಿತವಾಗುತ್ತಿದ್ದರು. ಅಸ್ಪೃಶ್ಯರ ಕುಲದಲ್ಲಿ ಜನಿಸಿದ ಅಪರಾಧಕ್ಕಾಗಿ ಮನುಷ್ಯರಾಗಿ ಬದುಕಲಾಗದೆ ಕಮರಿ ಹೋದ ಪ್ರತಿಭೆಗಳು ಈ ದೇಶದಲ್ಲಿ ಅದೆಷ್ಟೋ ಇವೆ. ಜಗಜೀವನರಾಮ್ ಅಂತಹ ದುರ್ದೈವಿಗಳ ಕುಲದಲ್ಲಿ ಹುಟ್ಟಿದರೂ ದೇಶದ ಗಣ್ಯರ ಸಾಲಿಗೆ ಸೇರಿ ಉಳಿದಿರುವರೆಂಬುದೊಂದು ಕೌತುಕ ಎಂದರು. ಆದರೂ ನಿಷ್ಠುರ ನುಡಿಯ-ನೇರನಡೆಯ ಈ ವ್ಯಕ್ತಿ ರಾಜಕೀಯವಾಗಿ ಈಗಲೂ ಎದ್ದು ಕಾಣುವ ವ್ಯಕ್ತಿಯಾಗಿದ್ದಾರೆ. ಎಪ್ಪತ್ತು ದಾಟಿದ ಈ ಮುತ್ಸದ್ಧಿ ದೇಶದ ಎಂಟನೆಯ ಲೋಕಸಭಾ ಚುನಾವಣೆಯಲ್ಲಿ ‘ರಾಜೀವ್ ಗಾಂಧಿಯವರ ರೋಡ್ರೋಲರ್’ ಎದುರಿಸಿ ಗೆದ್ದಿದ್ದರು. ಬಿಹಾರ ರಾಜ್ಯದ ಭೋಜಪುರ್ ಜಿಲ್ಲೆಯ ಸಂಸಾರಂ ಮತಕ್ಷೇತ್ರದಿಂದ ಸತತ ಎಂಟು ಬಾರಿ ಆಯ್ಕೆಯಾಗಿದ್ದು, ಇವರಷ್ಟು ದೀರ್ಘ ಕಾಲ ಸಂಸತ್ ಸದಸ್ಯರಾದವರು ಬೇರೆ ಯಾರೂ ಅಂದಿನ ಕಾಲದಲ್ಲಿ ಇರಲಿಲ್ಲ ಎಂದರು.
ಮುಂದುವರೆದು ಮಾತನಾಡುತ್ತಾ ಜಗಜೀವನ ರಾಂ ಬಹುಮುಖ ಪ್ರತಿಭೆಯುಳ್ಳವರಾಗಿದ್ದವರು, ಇವರೊಬ್ಬ ಆದರ್ಶವಾದಿ, ಉತ್ತಮ ವಾಗ್ಮಿ, ಸಮರ್ಥ ಆಡಳಿತಗಾರ. ಹಳೆಯದನ್ನು ನೆನೆದು ಇಂದಿನ ಕಸವನ್ನು ಎಡಗಾಲಲ್ಲಿ ಝೂಡಿಸಿ ನಾಳೆಯ ಸಮಾಜದ ಸುಂದರ ಚಿತ್ರ ಬಿಡಿಸಬಲ್ಲ ರಾಜಕೀಯ ದಾರ್ಶನಿಕ. ಇಷ್ಟೆಲ್ಲ ಇದ್ದರೂ ಪ್ರತಿಭೆಗೆ ಒಟ್ಟು ಸಮಾಜದ ಪುರಸ್ಕಾರ ಸಿಗದ ನೋವನ್ನು ಉಣ್ಣುತ್ತಲೇ ಇರುವ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ ಅವರು ಮಾತನಾಡಿ ಶೋಭಿರಾಮ್ ಮತ್ತು ಇಂದ್ರಾಣಿದೇವಿಯ ಸುಪುತ್ರರಾಗಿ ವ್ಯವಸಾಯ ಕೂಲಿಗಾರರ ಕುಟುಂಬದಲ್ಲಿ ಜನಿಸಿದ ಜಗಜೀವನ್ ರಾಂರವರು ಚಿಕ್ಕ ವಯಸ್ಸಿನಲ್ಲಿಯೇ ಅವರ ಹುಟ್ಟೂರಿನ ಹಳ್ಳಿಯ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿ ಎಲ್ಲರ ಗಮನ ಸೆಳೆದಿದ್ದರು, ಸ್ವಾತಂತ್ರ್ಯ ಹೋರಾಟದ ಆದರ್ಶಗಳ ಹಿತಗಾಳಿಯಲ್ಲಿ ಇವರು ಉಸಿರಾಡಿ ಚೇತರಿಸಿಕೊಂಡರು. ಹುಟ್ಟಿನಿಂದ ಬಂದ ಅಸ್ಪೃಶ್ಯತೆ ಇವರ ವ್ಯಕ್ತಿತ್ವದ ವಧೆ ಮಾಡದಂತೆ ನೋಡಿಕೊಳ್ಳುವ ಬುದ್ಧಿಬಲ ಆತ್ಮಶುದ್ಧಿ ಇವರಲ್ಲಿತ್ತು. ಇವರು ಬಿಹಾರದ ವ್ಯವಸಾಯ ಕೂಲಿಗಾರರ ಸಂಘಟನೆಯ ಕಾರ್ಯವನ್ನು ಕೈಗೆತ್ತಿಕೊಂಡರು. ಈ ಮೂಲಕ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ ಬಾಬೂ ಜಗಜೀವನರಾಮ್ ಅನತಿಕಾಲದಲ್ಲೇ ಕಾರ್ಮಿಕ ನಾಯಕರಾದರು. ತಾನೊಬ್ಬ ‘ಹರಿಜನ’ ಎಂಬ ಕೀಳರಿಮೆ ತಮ್ಮ ಸನಿಹಕ್ಕೆ ಬರಗೊಡದ ಇವರು ಸವರ್ಣೀಯರ ಅಸಹನೆ ತಮ್ಮನ್ನು ತುಳಿಯದಂತೆ ನೋಡಿಕೊಳ್ಳುವ ವರ್ಚಸ್ಸನ್ನು ಬೆಳೆಸಿಕೊಂಡಿದ್ದರು ಎಂದು ತಿಳಿಸಿದರು.
ತುಮಕೂರು ನಗರಾಧ್ಯಕ್ಷರಾದ ಮನು ಮಾತನಾಡುತ್ತಾ ಬಾಬು ಜಗಜೀವನ್ ರಾಂರವರು ಮೂವತ್ತೆರಡನೆ ವಯಸ್ಸಿನಲ್ಲೇ ಬಿಹಾರ್ ರಾಜ್ಯದ ಗಣ್ಯ ನಾಯಕರಲ್ಲಿ ಒಬ್ಬರೆನಿಸಿದರು. ಬಿಹಾರ್ ಪ್ರಾಂತ್ಯ ಕಾಂಗ್ರೆಸ್ ಸಮಿತಿಯ ಸದಸ್ಯರಾದರು. ಇಂದಿಗೂ ಹರಿಜನರನ್ನು ಜಾನುವಾರುಗಳಂತೆ ನಡೆಸಿಕೊಳ್ಳುತ್ತಿರುವ ಬಿಹಾರದ ಭೂಮಿಹಾರರು ಮತ್ತು ಹಾರುವರ ನಡುವೆ ತಲೆ ಎತ್ತಿ ಬದುಕುವ ಬಲ ಗಳಿಸಿದ ಜಗಜೀವನ್ ರಾಮ್ ಒಬ್ಬ ಅಸಾಧಾರಣ ಶಕ್ತಿಯಾಗಿದ್ದರು. ೧೯೪೬ರಲ್ಲಿ ನೆಹರೂ ಸಂಪುಟಕ್ಕೆ ಇವರನ್ನು ಸೇರಿಸಿಕೊಂಡಾಗ ಪ್ರಚಾರ ಮಾಧ್ಯಮದಲ್ಲಿ ಹಲವಾರು ಕಥೆಗಳನ್ನು ಹೆಣೆಯಲಾಯಿತು. ಅದಾಗಲೇ ದೇಶದ ಹರಿಜನ ಸಮೂಹದ ಅಪ್ರತಿಮ ನಾಯಕರಾಗಿದ್ದ ‘ಡಾ. ಬಿ.ಆರ್. ಅಂಬೇಡ್ಕರರಿಗೆ ಎದುರಾಳಿಯಾಗಿ ಜಗಜೀವನರಾಮ್ ಅವರನ್ನು ಬೆಳೆಸಲಾಗುತ್ತಿದೆ’, ಎಂಬುದೊಂದು ಕೂಗೂ ಸಹ ಅಂದು ಕೇಳಿ ಬಂದಿತ್ತು. ಆದರೆ ಸ್ವಂತ ವಿಚಾರ ಹಾಗೂ ಸ್ವತಂತ್ರ ವ್ಯಕ್ತಿತ್ವವಿರುವ ಜಗಜೀವನರಾಮ್ ಯಾರದೇ ತಾಳಕ್ಕೆ ಕುಣಿವ ಗೊಂಬೆಯಾಗಿರಲಿಲ್ಲ ತಮ್ಮ ಅನಿಸಿಕೆಗೆ ಅನ್ಯರನ್ನೊಲಿಸಿಕೊಳ್ಳದ ಮೇಧಾವಿಯೆಂಬುದನ್ನು ತೋರಿಸಿದರು. ನೆಹರೂ ಸಂಪುಟದ ಸಚಿವರಾಗಿದ್ದು ವಹಿಸಿಕೊಂಡ ಹೊಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ರಾಜಕೀಯವಾಗಿ ಬೆಳೆದವರು ಎಂದರು.
ಬಾಬು ಜಗಜೀವನ್ ರಾಂರವರ ಬಗ್ಗೆ ಹೇಳುತ್ತಾ ಹೋದರೆ ದಿನಗಳೇ ಸಾಕಾಗುವುದಿಲ್ಲ ಅವರ ಕುರಿತು ಮಾತನಾಡಲು ಪ್ರಾರಂಭಿಸದರೇ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ ಎಂದರಲ್ಲದೇ ಅವರನ್ನು ಸ್ಮರಿಸುವ ಪುಣ್ಯದಿನವಾದ ಇಂದು ನಾವು ಅವರಂತೆಯೇ ಸರಳ ರೀತಿಯಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಲಕ್ಷ್ಮೀನಾರಾಯಣ ಸ್ಮರಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಡಾ|| ಬಿ.ಆರ್.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ಜಿಲ್ಲಾ ಕಾರ್ಯಧ್ಯಕ್ಷರಾದ ಕೆಸ್ತೂರು ನರಸಿಂಹಮೂರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ಎಸ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲ್ಲಾಸ್ ಅಹಮ್ಮದ್, ತುಮಕೂರು ನಗರಾಧ್ಯಕ್ಷರಾದ ಮನು ಟಿ.ಎಲ್, ತುಮಕೂರು ನಗರ ಉಪಾಧ್ಯಕ್ಷರಾದ ರಾಮಮೂರ್ತಿ ನಾಯ್ಡು ಸಿ (ಮಾಜಿ ಸೈನಿಕರು), ಹಿಂದುಳಿದ ವರ್ಗಗಳ ಯುವ ಘಟಕದ ಜಿಲ್ಲಾದ್ಯಕ್ಷರಾದ ಮೊಹೆಮ್ಮಿನ್ ಅಹಮ್ಮದ್, ರಜಾಕ್ ಖಾನ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.