ತುಮಕೂರು: ಇಂದಿನ ಪರಸ್ಪರ ಸಂಪರ್ಕಿತ ಡಿಜಿಟಲ್ ಪರಿಸರದಲ್ಲಿ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ರಕ್ಷಿಸಲು ಸೈಬರ್ ಸುರಕ್ಷತೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಾಹೇ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ ವೀರಯ್ಯ ಅವರು ಅಭಿಪ್ರಾಯಪಟ್ಟರು.
ನಗರದ ಕ್ಯಾತಸಂದ್ರದ ಬಳಿಯಿರುವ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ನಲ್ಲಿ ಏರ್ಪಡಿಸಲಾಗಿದ್ದ ಒಂದು ವಾರದ ಪ್ರಾಧ್ಯಾಪಕರ ಪ್ರಗತಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ‘ಇ-ಆಡಳಿತದ ಸುರಕ್ಷತೆ, ಸೈಬರ್ ಭದ್ರತೆ ಸಮ್ಮೀಲನದ ವಸ್ತುಸ್ಥಿತಿ ಹಾಗೂ ಆಧುನಿಕ ಕಾಲಘಟ್ಟದ ತಂತ್ರಜ್ಞಾನದಲ್ಲಿ ಕೃತಕ ಬುದ್ದಿಮತ್ತೆ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ,
ಇಂಟರ್ನೆಟ್ ಜೀವನದ ಪ್ರತಿಯೊಂದು ಹಂತದಲ್ಲೂ ಅಗತ್ಯವಾಗಿದ್ದು, ಸೈಬರ್ ಭೀತಿಯ ಜೊತೆಗೆ ಸಂಬಂಧಿಸಿದ ತೊಂದರೆಗಳು ವೇಗವಾಗಿ ಹೆಚ್ಚುತ್ತಿವೆ. ಪ್ರತಿಷ್ಠಿತ ವ್ಯಕ್ತಿಗಳು, ದೊಡ್ಡ ಸಂಸ್ಥೆಗಳು, ಹಾಗು ಸರ್ಕಾರಗಳೂ ಸಹ ಎಲ್ಲರೂ ಭದ್ರತೆಗೆ ಸಂಬಂಧಿಸಿದ ಅಪಾಯಗಳನ್ನು ಎದುರಿಸುತ್ತಿವೆ ಎಂದ ಡಾ.ವಿವೇಕ ವೀರಯ್ಯ ಅವರು ಸೂಕ್ಷ್ಮ ಮಾಹಿತಿಯನ್ನು ಸುರಕ್ಷಿತವಾಗಿಡಲು ಮತ್ತು ಆನ್ಲೈನ್ ಚಟುವಟಿಕೆಗಳನ್ನು ರಕ್ಷಿಸಲು ಎಷ್ಟು ಅಗತ್ಯವಿದೆ ಎಂಬುದು ನಿರ್ಧರಿಸಬೇಕಾಗಿದೆ. ಸೈಬರ್ ದಾಳಿ ಭೀತಿ ಮತ್ತು ಈ ಅಪಾಯಗಳನ್ನು ತಡೆಯಲು ಸಾಧ್ಯವಿರುವ ಪರಿಹಾರಗಳನ್ನು ಹುಡುಕಿಕೊಳ್ಳುವ ತುರ್ತು ಅಗತ್ಯವಿದೆ ಎಂದರು.
ತುಮಕೂರು ಜಿಲ್ಲಾ ಪೋಲೀಸ್‍ನ ಸೈಬರ್ ಕ್ರೈಮ್‍ನ ಹರೀಶ್ ಕೆ.ಯು ಮಾತನಾಡಿ ತಂತ್ರಜ್ಞಾನದ ವೇಗದ ಬೆಳವಣಿಗೆಯ ಯುಗದಲ್ಲಿ, ನಮ್ಮ ಡಿಜಿಟಲ್ ವ್ಯವಹಾರಗಳು ಮತ್ತು ಸಂವಹನಗಳು ಎಷ್ಟು ಸುರಕ್ಷಿತವಾಗಿವೆ ಎಂಬ ಪ್ರಶ್ನೆ ಮುಖ್ಯವಾಗಿದೆ. 61% ಕ್ಕಿಂತ ಹೆಚ್ಚು ವ್ಯವಹಾರಗಳು ಈಗ ಆನ್‍ಲೈನ್‍ನಲ್ಲಿ ನಡೆಯುತ್ತಿರುವುದರಿಂದ, ಬಲವಾದ ಸೈಬರ್‍ಸುರಕ್ಷತಾ ಕ್ರಮಗಳ ಅವಶ್ಯಕತೆ ಈಗ ಹೆಚ್ಚಾಗಿದೆ. ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಸಂಸ್ಥೆಗಳು ಮತ್ತು ಸರ್ಕಾರಗಳನ್ನು ತಮ್ಮ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಲು ಸೈಬರ್‍ಸುರಕ್ಷತೆ ಕ್ರಮಗಳನ್ನು ಪೋಲೀಸ್ ಇಲಾಖೆ ತೆಗೆದುಕೊಳ್ಳುತ್ತಿದೆ ಎಂದರು.
ಅಸ್ತಾಕ್ಷ ಲ್ಯಾಬ್ ಪ್ರೈ. ಲಿ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಿಶೋರ್ ಎಚ್.ಎನ್. ಮಾತನಾಡಿ, ಸೈಬರ್‍ಸುರಕ್ಷಿತೆಯ ಮಹತ್ವವು ಐಟಿ ಕ್ಷೇತ್ರದಲ್ಲಿಯೇ ಸೀಮಿತವಾಗಿಲ್ಲ. ವ್ಯಾಪಕವಾಗಿ ಎಲ್ಲ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತದೆ. ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಅವಲಂಬನೆ ಹೆಚ್ಚುತ್ತಿರುವಂತೆ, ಸೈಬರ್‍ಸುರಕ್ಷತೆ ದೇಶದ ಆರ್ಥಿಕ ಸ್ಥಿರತೆ ಮತ್ತು ರಾಷ್ಟ್ರೀಯ ಸುರಕ್ಷತೆಗೆ ಪ್ರಮುಖವಾಗಿದೆ ಎಂದರು.
ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್‍ನ ಪ್ರಾಂಶುಪಾಲರಾದ ಡಾ.ಎಲ್.ಸಂಜೀವ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸ್ತಾಕ್ಷ ಲ್ಯಾಬ್ ಪ್ರೈ. ಲಿ. ಸಮನ್ವಯ ಅಧಿಕಾರಿ ಡಾ.ಗೀರೀಶ್, ಕಾರ್ಯಾಗಾರದ ಸಂಯೋಜಕರಾದ ಸಹಾಯಕ ಪ್ರಾಧ್ಯಾಪಕರಾದ ವಸೀಮ್ ಉದ್ದೀನ್, ಗೋಹಾಟಿಯ ಐಐಟಿಯ ಪ್ರಾಧ್ಯಾಪಕರಾದ ಮಾನಸ್ ಬಾಯ್ಯ್ಸ್ ಹಾಜರಿದ್ದರು.