ತುಮಕೂರು:ತುಮಕೂರು ತಾಲೂಕು ಕೋರಾ ಹೋಬಳಿ,ಕೆಸ್ತೂರು ಗ್ರಾಮದ ದಲಿತ ಕಾಲೋನಿಯಲ್ಲಿ ಭಾರತ ರತ್ನ,ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ಅನಧಿಕೃತವಾಗಿ ದೇವಸ್ಥಾನ ಕಟ್ಟಡ ಕಟ್ಟದಂತೆ ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸಿ ಇಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ನೇತೃತ್ವದಲ್ಲಿ ತುಮಕೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್,ತುಮಕೂರು ತಾಲೂಕು ಕೋರಾ ಹೋಬಳಿ,ಕೆಸ್ತೂರು ಗ್ರಾಮದ ದಲಿತ ಕಾಲೋನಿಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ||ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ತಾತ್ಕಾಲಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ಕಲ್ಪಿಸಲಾಗಿತ್ತು.ಆದರೆ ಇದನ್ನೇ ನೆಪ ಮಾಡಿಕೊಂಡ ಕೆಲವರು ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ದೇವಾಲಯ ನಿರ್ಮಿಸಬೇಕೆಂಬ ಹುನ್ನಾರ ನಡೆಸುತ್ತಿದ್ದು,ಇವರಿಗೆ ಪೂರಕವೆಂಬಂತೆ ಕೆಸ್ತೂರು ಗ್ರಾ.ಪಂ.ಪಿಡಿಓ ವರ್ತಿಸುತ್ತಿದ್ದಾರೆ,ಇದು ಖಂಡನೀಯ.ಸದರಿ ಜಾಗದಲ್ಲಿ ಅಂಬೇಡ್ಕರ್ ಭವನವಲ್ಲದೆ ಬೇರೆ ಯಾವುದೇ ನಿರ್ಮಾಣ ಕಾರ್ಯ ನಡೆದರೂ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಈಗಾಗಲೇ ದೇವರು,ಧರ್ಮದ ಹೆಸರಿನಲ್ಲಿ ದಲಿತರನ್ನು ಮೂಢನಂಬಿಕೆಗೆ ತಳ್ಳಿ,ಹಂತ ಹಂತವಾಗಿ ಅವರಿಗೆ ನೀಡುತ್ತಿದ್ದ ಎಲ್ಲಾ ಸವಲತ್ತುಗಳನ್ನು ಕಸಿಯಲಾಗುತ್ತಿದೆ.ಗ್ರಾಮದಲ್ಲಿ ಹಲವು ದೇವಾಲಯಗಳಿದ್ದರೂ ಸದರಿ ಜಾಗದಲ್ಲಿ ಗಣೇಶನ ದೇವಾಲಯ ನಿರ್ಮಿಸಿ, ಅಂಬೇಡ್ಕರ್ ಭವನ ನಿರ್ಮಿಸದಂತೆ ತಡೆಯುವ ಹುನ್ನಾರ ಇದಾಗಿದೆ.ಇದಕ್ಕೆ ಎಂದಿಗೂ ತಾ.ಪಂ. ಇಓ ಮತ್ತಿತರರ ಅಧಿಕಾರಿಗಳು ಅವಕಾಶ ನೀಡಬಾರದು.ಸದರಿ ಜಾಗದಲ್ಲಿ ಈ ಸ್ವತ್ತು ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟು ಭೂಮಿ ಎಂದು ಬೋರ್ಡ್ ಹಾಕುವುದರ ಜೊತೆಗೆ, ಸರಕಾರದ ಅನುದಾನಗಳನ್ನು ಬಳಸಿ ಶೀಘ್ರವಾಗಿ ಭವನ ನಿರ್ಮಾಣಕ್ಕೆ ಮುಂದಾಗುವಂತೆ ತಾ.ಪಂ. ಇಓ ಹರ್ಷಕುಮಾರ್ ಅವರಲ್ಲಿ ಮನವಿ ಮನವಿ ಮಾಡಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಇಂದ್ರಕುಮಾರ್ ಮಾತನಾಡಿ,ದಲಿತ ಕಾಲೂನಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣದಿಂದ ದಲಿತರ ಶುಭ ಸಮಾರಂಭಗಳಿಗೆ ಕಟ್ಟಡವನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ ಅಂಬೇಡ್ಕರ್ ಜಯಂತಿಗಣರಾಜೋತ್ಸವ, ಸ್ವಾತಂತ್ರ ದಿನಾಚರಣೆಯಂತಹ ರಾಷ್ಟೀಯ ಹಬ್ಬಗಳಿಗೆ ಬಳಕೆ ಮಾಡಲು ಸಹಕಾರಿಯಾಗುತ್ತದೆ.ಹಾಗಾಗಿ ಸದರಿ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಾತ್ರ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಇಓ ಅವರು ಕೂಡಲೇ ಕೆಸ್ತೂರು ದಲಿತ ಕಾಲೋನಿಯಲ್ಲಿ ಅಂಬೇಡ್ಕರ್ ಭವನಕ್ಕೆಂದು ಮೀಸಲಿಟ್ಟ ಜಾಗವನ್ನು ಪರಿಶೀಲನೆ ನಡೆಸಿ,ಹದ್ದುಬಸ್ತು ಮಾಡಿ,ಅಂಬೇಡ್ಕರ್ ಭವನ ನಿರ್ಮಾಣ ಮಾಡಿಕೊಟ್ಟು ದಲಿತರುಗಳಿಗೆ ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮನವಿ ಮಾಡಿದೆ.ಅಲ್ಲದೆ ದಲಿತ ವಿರೋಧಿ ಚಟುವಟಿಕೆ ನಡೆಸಿರುವ ಪಿಡಿಒ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು.ತಪ್ಪಿದ್ದಲ್ಲಿ ತಾಲೂಕು ಪಂಚಾಯಿತಿ ವಿರುದ್ದ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ನಾರಾಯಣ್.ಎಸ್, ಸಂಘಟನಾ ಕಾರ್ಯದರ್ಶಿ ದರ್ಶನ್.ಬಿ.ಆರ್, ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷ ಟೈಲರ್ ಜಗದೀಶ್, ಜಿಲ್ಲಾ ಕಾರ್ಯಾಧ್ಯಕ್ಷ ನರಸಿಂಹಮೂರ್ತಿ,ಪದಾಧಿಕಾರಿಗಳಾದ ವಿನಯ್, ರಾಮಚಂದ್ರಯ್ಯ.ಎನ್.ಇ, ವಸಂತಕುಮಾರ್, ಹನುಮನರಸಯ್ಯ, ಶ್ರೀನಿವಾಸ್.ಡಿ.ಆರ್, ರಂಗಸ್ವಾಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.