ವೈಭವಯುತ ತುಮಕೂರು ದಸರಾಕ್ಕೆ ಚಾಲನೆ : ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು : ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ವೈಭವಯುತ ತುಮಕೂರು ದಸರಾ ಉತ್ಸವವು ಗುರುವಾರದಿಂದ ಪ್ರಾರಂಭಗೊಂಡಿದ್ದು, ಅಕ್ಟೋಬರ್ 12ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.

 

 

ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಸಂಸ್ಕøತಿ ಹಾಗೂ ಧಾರ್ಮಿಕ ಆಚರಣೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ತುಮಕೂರು ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ. ಇಂದು ಬೆಳಿಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳ ಧಾರ್ಮಿಕ ಮಂಟಪದಲ್ಲಿ ಶಕ್ತಿ ದೇವತೆಯನ್ನು ಪ್ರತಿಷ್ಟಾಪಿಸಿದ್ದು, 9 ದಿನಗಳ ಕಾಲ ಪ್ರತಿದಿನ ವಿಶೇಷ ಅಲಂಕಾರ ಮಾಡುವ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ ಎಂದರು.

 

 

ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 11ರಂದು ಮುಖ್ಯ ವೇದಿಕೆಯಲ್ಲಿ ಕರುನಾಡ ಚಕ್ರವರ್ತಿ ಡಾ: ಶಿವರಾಜ್ ಕುಮಾರ್ ಅವರು ಸಾಂಸ್ಕøತಿಕ ವೈಭವಕ್ಕೆ ಚಾಲನೆ ನೀಡಲಿದ್ದು, ಅಂದು ಜನಪದ ಗೀತೆ, ಸುಗಮ ಸಂಗೀತ, ಆಕರ್ಷಕ ಲೇಸರ್ ಶೋ ಮತ್ತು ಖ್ಯಾತ ಗಾಯಕರಾದ ಗುರುಕಿರಣ್ ಹಾಗೂ ಕಂಬದ ರಂಗಯ್ಯ ಅವರ ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ಜರುಗಲಿದೆ.

 

 

ಅಕ್ಟೋಬರ್ 12ರಂದು ಕವಿಗೋಷ್ಠಿ, ನವ ದುರ್ಗೆಯರ ನೃತ್ಯ ರೂಪಕ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ತಂಡದಿಂದ ಸಂಗೀತ ರಸ ಸಂಜೆ, ಡ್ರೋನ್ ಶೋ ಮತ್ತು ಸಮಾರೋಪ ಸಮಾರಂಭದ ನಂತರ ಬಾಣ-ಬಿರುಸು ಪ್ರದರ್ಶನ ನೆರವೇರಲಿವೆ. ಇಸ್ರೋ ಸಂಸ್ಥೆಯಿಂದ ಮಾಹಿತಿಯುಕ್ತವಾದ ಬಾಹ್ಯಾಕಾಶ ಕುರಿತ ವಸ್ತು ಪ್ರದರ್ಶನ, ವಿಂಟೇಜ್ ಕಾರ್ ಪ್ರದರ್ಶನ, ಹೆಲಿಕಾಪ್ಟರ್ ಪ್ರದರ್ಶನಗಳು ಎರಡೂ ದಿನವೂ ನಡೆಯಲಿದ್ದು, ಮಕ್ಕಳಿಗೆ ರಜೆ ಇರುವ ಕಾರಣ ಪೋಷಕರು ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವಂತೆ ಮನವಿ ಮಾಡಿದರು.
ಉತ್ಸವದಲ್ಲಿ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಮಾಡಲು ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

 

 

ಪೋಲೀಸ್ ಬಿಗಿ ಭದ್ರತೆ : ಕೆ.ವಿ.ಅಶೋಕ್
ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ದಸರಾ ಉತ್ಸವಕ್ಕೆ ಜನರು ಆಗಮಿಸುವುದರಿಂದ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ, ಅವಘಡ ಉಂಟಾಗದಂತೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದರು.

 

ವೇದಿಕೆ ಕಾರ್ಯಕ್ರಮ ನಡೆಯುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ಹಾಗೂ ಜಂಬೂಸವಾರಿ ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಅಕ್ಟೋಬರ್ 12ರಂದು ಮಧ್ಯಾಹ್ನ 12 ಗಂಟೆಗೆ ಮೆರವಣಿಗೆ ಪ್ರಾರಂಭಗೊಳ್ಳುವುದರಿಂದ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುವುದು. ನಗರವನ್ನು ಪ್ರವೇಶಿಸುವ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

 

 

ಜಿಲ್ಲೆಯ ಸಾಂಸ್ಕøತಿಕ ಮೆರಗನ್ನು ಹೆಚ್ಚಿಸುವ ದಸರಾ ಉತ್ಸವ: ಜಿ.ಪ್ರಭು
ಜಿಲ್ಲೆಯ ಸಂಸ್ಕøತಿ, ಕಲೆ, ಪರಂಪರೆಯನ್ನು ತಿಳಿಸುವಂತಹ 30ಕ್ಕೂ ಹೆಚ್ಚು ಸ್ಥಳೀಯ ಕಲಾ ತಂಡಗಳು ಉತ್ಸವದಲ್ಲಿ ಭಾಗವಹಿಸುವ ಮೂಲಕ ಜಿಲ್ಲೆಯ ಸಾಂಸ್ಕøತಿಕ ಮೆರಗು ಹೆಚ್ಚಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.

 

 

 

 

ಮುಖ್ಯ ವೇದಿಕೆ ಕಾರ್ಯಕ್ರಮಗಳು ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಜರುಗಲಿದ್ದು, ಧಾರ್ಮಿಕ ಆಚರಣೆಗಳಿಗಾಗಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಧಾರ್ಮಿಕ ಮಂಟಪ, ಯುವ ದಸರಾಕ್ಕಾಗಿ ಗುಬ್ಬಿ ವೀರಣ್ಣ ಕಲಾಕ್ಷೇತ್ರವನ್ನು ಹಾಸ್ಯ ಚಕ್ರವರ್ತಿ ನರಸಿಂಹರಾಜು ಸಾಂಸ್ಕøತಿಕ ವೇದಿಕೆ ಹಾಗೂ ಮುಖ್ಯ ದ್ವಾರಕ್ಕೆ ಶಿಕ್ಷಣ ಭೀಷ್ಮ ಹೆಚ್.ಎಂ. ಗಂಗಾಧರಯ್ಯ ಮಹಾದ್ವಾರ ಹೆಸರು ಇಡಲಾಗಿದೆ. ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲೆಯ ಖ್ಯಾತ ವಿಜ್ಞಾನಿ ರಾಜರಾಮಣ್ಣ ಅವರ ಹೆಸರಿನಲ್ಲಿ ಜ್ಞಾನ ವೈಭವ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅಕ್ಟೋಬರ್ 6ರಂದು ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮವನ್ನು ಸಾಲುಮರದ ತಿಮ್ಮಕ್ಕ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮಹಾನಗರಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮಾತನಾಡಿ, ಅಕ್ಟೋಬರ್ 6 ರಂದು ಮಹಿಳಾ ದಸರಾ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ, ದಸರಾ ಗೊಂಬೆ ಪ್ರದರ್ಶನ, ತಾಯಿ ಮತ್ತು ಮಕ್ಕಳ ಸಾಂಸ್ಕøತಿಕ ಉಡುಗೆ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ ಮತ್ತು ನಗರದ ಪ್ರಮುಖ ರಸ್ತೆ, ವೃತ್ತ ಸೇರಿದಂತೆ ಸುಮಾರು 20 ಕಿ.ಮೀ.ವರೆಗೂ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು ಎಂದು ತಿಳಿಸಿದರು.
**************

Leave a Reply

Your email address will not be published. Required fields are marked *