ತುಮಕೂರು:
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಪ್ರಜಾ ಪ್ರಭುತ್ವ ಮತ್ತು ಸಂವಿಧಾನದ ಪ್ರಾಮುಖ್ಯತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಇಂದು ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ಉಜ್ಜನಕುಂಟೆ ಗ್ರಾಮದಿಂದ ತುಮಕೂರು ತಾಲೂಕು ಹಿರೇಹಳ್ಳಿ ಗ್ರಾಮ ಪಂಚಾಯಿತಿ ನಂದಿಹಳ್ಳಿ ಗ್ರಾಮದವರೆಗೆ ನಿರ್ಮಿಸಲಾಗಿದ್ದ 90 ಕಿ.ಮೀ. ಉದ್ದದ ಮಾನವ ಸರಪಳಿಯು ಅಭೂತಪೂರ್ವ ಯಶಸ್ಸನ್ನು ಕಂಡಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ತಿಳಿಸಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನವು ನಮಗೆಲ್ಲರಿಗೂ ಜೀವನವನ್ನು ಕೊಟ್ಟಿದೆಯಲ್ಲದೆ ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಸಮಾನವಾದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವನ್ನು ಕಲ್ಪಿಸಿದೆ. ಪ್ರಪಂಚದ ಯಾವುದೇ ರಾಷ್ಟ್ರವು ಎಲ್ಲ ಜನರನ್ನು ತಲುಪುವಂತಹ ಸಂವಿಧಾನವನ್ನು ನೀಡಿಲ್ಲ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿಂದು ನಿರ್ಮಿಸಲಾದ ಮಾನವ ಸರಪಳಿಯಲ್ಲಿ ಯಾವುದೇ ಜಾತಿ-ಧರ್ಮ, ಬೇಧ-ಭಾವಗಳಿಲ್ಲದೆ 1.20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಮಾನವ ಸರಪಳಿಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಜನರು ಭಾಗವಹಿಸಿರುವುದು ನಮ್ಮ ಪ್ರಜಾಪ್ರಭುತ್ವದ ವೈಶಿಷ್ಟ್ಯ. ಇಂತಹ ಕಾರ್ಯಕ್ರಮಗಳು ಜನರನ್ನು ಪ್ರಜ್ಞಾವಂತರನ್ನಾಗಿ ಮಾಡುತ್ತದೆ ಎಂದು ಹೇಳಿದರು.
ಮಾನವ ಸರಪಳಿಯಲ್ಲಿ ಮೂರು ವರ್ಷದ ಮಗು ಸಹ ಭಾಗವಹಿಸಿರುವುದು ಕಂಡು ಬಂತು. ಮಗುವಿನಿಂದ ವೃದ್ಧರವರೆಗೂ, ವಿದ್ಯಾರ್ಥಿಗಳಿಂದ ಕೂಲಿ ಕಾರ್ಮಿಕರವರೆಗೂ ಎಲ್ಲರೂ ಪ್ರಜಾಪ್ರಭುತ್ವದ ವ್ಯವಸ್ಥೆಗೊಳಪಡುತ್ತಾರೆ. ಯಾವುದೇ ಜಾತಿ, ಪಕ್ಷ, ಧರ್ಮಕ್ಕೆ ಸೀಮಿತವಾಗಿ ಈ ಕಾರ್ಯಕ್ರಮವನ್ನು ರೂಪಿಸಿಲ್ಲ. ಪ್ರತಿಯೊಬ್ಬರಿಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವ ತಿಳಿಯಬೇಕೆಂಬ ನಿಟ್ಟಿನಲ್ಲಿ ರೂಪಿಸಿದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರದ ಬಗ್ಗೆ ಟೀಕೆ-ಟಿಪ್ಪಣಿಗಳು ಬಂದಾಗಿಯೂ ಸಹ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲ ಭರವಸೆಗಳನ್ನು ಐದು ವರ್ಷ ಮುಗಿಯುವುದರೊಳಗೆ ಅನುಷ್ಟಾನಗೊಳಿಸುತ್ತೇವೆ ಎಂದು ಭರವಸೆ ನೀಡಿದರಲ್ಲದೆ ವಿಪಕ್ಷದವರು ಸರ್ಕಾರದ ಅಭಿವೃದ್ಧಿ ವಿಚಾರಗಳನ್ನು ಬಿಟ್ಟು ಕೇವಲ ಟೀಕೆ ಮಾಡುವುದರಲ್ಲೇ ಸಮಯ ಕಳೆಯುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ತಪ್ಪು ಮಾಡಿದರೂ ಕಾನೂನು ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ತಪ್ಪುಗಳು ನಡೆದಿದ್ದರೆ ತನಿಖೆ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಆ ದೃಷ್ಟಿಯಲ್ಲಿ ಯಾರು ಎಷ್ಟೇ ಪ್ರಭಾವಿಗಳಾಗಿರಲಿ, ಜನಪ್ರತಿನಿಧಿಗಳಾಗಿರಲಿ ಅಥವಾ ಅಧಿಕಾರಿಗಳಾಗಿದ್ದರು ಸಹ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು,
ವಾಲ್ಮೀಕಿ ನಿಗಮದ ಹಗರಣವು ಬೆಳಕಿಗೆ ಬಂದ ಕೂಡಲೇ ಮುಖ್ಯಮಂತ್ರಿಯವರು ಸಂಬಂಧಪಟ್ಟ ಸಚಿವರಿಂದ ರಾಜೀನಾಮೆ ಪಡೆದುಕೊಂಡರಲ್ಲದೆ ಆಯೋಗ ರಚಿಸಿ ತನಿಖೆಯನ್ನು ಸಂಪೂರ್ಣಗೊಳಿಸಲು ಆದೇಶಿಸಿದ್ದಾರಲ್ಲದೆ ಪೋಲೀಸ್ ಇಲಾಖೆಯಲ್ಲಿ ಎಸ್‍ಐಟಿ ರಚಿಸಿ ಸೂಕ್ತ ತನಿಖೆಗೆ ಸೂಚಿಸಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಇಡಿ, ಸಿಬಿಐ ತನಿಖೆಗೆ ಸೂಚಿಸಿದೆ. ತಪ್ಪುಗಳನ್ನು ಮುಚ್ಚಿಡದೇ ಕ್ರಮ ವಹಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದು ಪುನರುಚ್ಚರಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಅಲ್ಲಲ್ಲಿ ಆದ ಅಹಿತಕರ ಘಟನೆಗಳನ್ನು ನಿಯಂತ್ರಿಸಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಂತೆ ಕೋಮು ಗಲಭೆ, ರಾಜಕೀಯ ಗಲಾಟೆಗಳು ನಡೆದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತೇನೆ. ರಾಜ್ಯದ ಶಾಂತಿಗೆ ಭಂಗ ತರಲು ಪ್ರಯತ್ನಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಶಾಸಕ ಮುನಿರತ್ನ ಆಡಿಯೋ ರೆಕಾರ್ಡ್ ಒಂದರಲ್ಲಿ ಒಂದು ಸಮುದಾಯದ ಬಗ್ಗೆ ಅವಹೇಳನ ಮಾಡಿ, ಅವಮಾನಿಸಿದರು ಎಂಬುದರ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಿ ಬಂಧಿಸಿ ತನಿಖೆ ಪ್ರಾರಂಭಿಸಲಾಗಿದೆ. ಎರಡು ದಿನದ ಅವಧಿಗೆ ಪೋಲೀಸರು ಶಾಸಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ‘ನಾನು ಆ ರೀತಿ ಹೇಳಿಲ್ಲ’ ನನಗೆ ಸಂಬಂಧಿಸಿದ ಆಡಿಯೋ ಅಲ್ಲವೆಂದು ಮುನಿರತ್ನ ಅಲ್ಲಗಳೆದಿದ್ದಾರೆ. ಫೋರೆನ್ಸಿಕ್‍ನವರು ಧ್ವನಿಯನ್ನು ಪಡೆದು ಪರಿಶೀಲಿಸಲಿದ್ದಾರೆ. ಧ್ವನಿ ಮುನಿರತ್ನ ಅವರದ್ದೇ ಎಂದು ಖಚಿತವಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಹಿಂದಿನ ಸರ್ಕಾರ ಸಾವಿರಾರು ಕೋಟಿ ರೂ.ಗಳ ಬಿಲ್ ಬಾಕಿ ಉಳಿಸಿದ್ದರಿಂದ ಕೆಲವು ಯೋಜನೆಗಳಿಗೆ ಅನುದಾನ ಒದಗಿಸಲು ವಿಳಂಬವಾಗಿದೆ ಎಂದ ಸಚಿವರು ಬಾಕಿ ಉಳಿದ ಬಿಲ್ಲುಗಳನ್ನು ಪಾವತಿ ಮಾಡಲು ಮುಖ್ಯಮಂತ್ರಿಯವರು ಕ್ರಮ ತೆಗೆದುಕೊಂಡಿದ್ದಾರೆ ಎಂದರಲ್ಲದೆ ನಾಗಮಂಗಲ ಗಲಾಟೆಗೆ ಸಂಬಂಧಿಸಿದಂತೆ ತನಿಖಾ ವರದಿ ಬರುವರೆಗೂ ಯಾವುದೇ ಹೇಳಿಕೆ ನೀಡುವುದಿಲ್ಲ. ಗಲಭೆಯು ಪೂರ್ವನಿಯೋಜಿತವೇ ಅಥವಾ ಆಕಸ್ಮಿಕವೇ? ಗಣೇಶನ ಮೆರವಣಿಗೆಯ ಮಾರ್ಗ ಏಕೆ ಬದಲಿಸಿದರು ಎಂಬ ಸತ್ಯಾಂಶವು ತನಿಖೆಯಿಂದ ಬಯಲಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಇನ್‍ಸ್ಪೆಕ್ಟರ್ ಹಾಗೂ ಡಿವೈಎಸ್‍ಪಿಯನ್ನು ಅಮಾನತ್ತುಗೊಳಿಸಲಾಗಿದೆ. ರಾಜ್ಯದಲ್ಲಿ ಯಾವುದೇ ಗಲಭೆ, ಸಂಘರ್ಷ, ಅಹಿತಕರ ಘಟನೆಗಳು ನಡೆದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಸೂಚಿಸಲಾಗಿದೆ ಎಂದ ಸಚಿವ ಪರಮೇಶ್ವರ ಅವರು, ಈದ್ ಮಿಲಾದ್ ಸಂದರ್ಭದಲ್ಲಿಯೂ ಸಹ ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖಾಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಂವಿಧಾನ ಪೀಠಿಕೆ ಪ್ರತಿಜ್ಞೆ ಬೋಧನೆಃ
ಇದಕ್ಕೂ ಮುನ್ನ ಸಚಿವರು ಮಹಾನಗರ ಪಾಲಿಕೆ ಮುಂಭಾಗ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೊಧಿಸಿದರು. ನಂತರ ನಗರದ ಗ್ರಂಥಾಲಯ ಆವರಣದಲ್ಲಿ ಪ್ರಜಾ ಪ್ರಭುತ್ವ ದಿನಾಚರಣೆ ಅಂಗವಾಗಿ ಸಚಿವರು ಗಿಡ ನೆಟ್ಟು ನೀರೆರೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕೆ.ವಿ ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಮಹಾ ನಗರ ಪಾಲಿಕೆ ಆಯುಕ್ತ ಬಿ.ವಿ ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿಗಳಾದ ಗೌರವ್ ಕುಮಾರ್ ಶೆಟ್ಟಿ, ಸಪ್ತಶ್ರೀ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಸೇರಿದಂತೆ ವಿವಿಧ ಸಂಘಟನೆಯ ಪ್ರತಿನಿಧಿಗಳು, ಮತ್ತಿತರರು ಉಪಸ್ಥಿತರಿದ್ದರು.