ತುಮಕೂರು: ಕರ್ತವ್ಯ ನಿರ್ಲಕ್ಷ, ಸರ್ಕಾರಿ ಯೋಜನೆಗಳ ಪ್ರಗತಿ ಕುಂಠಿತ, ಯೋಜನಾನುಷ್ಠಾನದಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದರು.
ಜಿಲ್ಲಾ ಪಂಚಾಯತಿಯ ತಮ್ಮ ಕೊಠಡಿಯಲ್ಲಿಂದು ವಿವಿಧ ಯೋಜನೆಗಳ ಪ್ರಗತಿ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಆದ್ಯತೆ ಮೇರೆಗೆ ಕಾಯ್ದುಕೊಳ್ಳಲಾಗುತ್ತಿದೆ. ಕಳಪೆ ಕಾಮಗಾರಿಗಳು ಕಂಡು ಬಂದಲ್ಲಿ ತಾಲ್ಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಗಮನಕ್ಕೆ ತಂದಲ್ಲಿ ಕೂಡಲೇ ಕಳಪೆ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಕ್ರಮವಹಿಸಲಾಗುವುದೆಂದು ತಿಳಿಸಿದರು.
ಕಾಮಗಾರಿಗಳ ಬಿಲ್ ಪಾವತಿ ವಿಳಂಬ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಆರ್ಥಿಕ ವರ್ಷಾರಂಭದ ಮೊದಲ 3 ತಿಂಗಳು ಅನುದಾನದ ಬಳಕೆಯಾಗುವುದಿಲ್ಲ. ಮೊದಲ 3 ತಿಂಗಳ ಅವಧಿಯಲ್ಲಿ ಪ್ರಸಕ್ತ ವರ್ಷ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಕೆ, ಟೆಂಡರ್ ಪ್ರಕ್ರಿಯೆ, ವಿಸ್ತøತ ಯೋಜನಾ ವರದಿ(ಡಿಪಿಆರ್) ತಯಾರಿಕೆ, ಕಾಮಗಾರಿಗಳ ಅನುಮೋದನೆಗೆ ಕ್ರಮಕೈಗೊಳ್ಳಲಾಗುವುದು. ನರೇಗಾ ಹೊರತುಪಡಿಸಿ ಉಳಿದ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಆಗಸ್ಟ್ ಮಾಹೆಯಿಂದ ಕೈಗೆತ್ತಿಕೊಳ್ಳಲಾಗುವುದು. ಆದರೆ ಸಾರ್ವಜನಿಕರಿಗೆ ಒದಗಿಸುವ ಆರೋಗ್ಯ, ಶಿಕ್ಷಣ, ಮತ್ತಿತರ ಸೇವೆಗಳು ನಿರಂತರವಾಗಿ ಸಾಗುತ್ತಿರುತ್ತವೆ ಎಂದು ತಿಳಿಸಿದರು.
ಜಿಲ್ಲೆಯ ಪ್ರಗತಿ ಸುಧಾರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಲು ಎಲ್ಲಾ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಯಾವುದೇ ಬಿಲ್ಲುಗಳು ಬಾಕಿ ಉಳಿಸಿಕೊಳ್ಳದೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಂತೆ ಕಾಮಗಾರಿಗಳ ಬಿಲ್ಲಿನ ಮೊತ್ತವನ್ನು ಗುತ್ತಿಗೆದಾರರಿಗೆ ವಿಳಂಬ ಮಾಡದೆ ಸಕಾಲದಲ್ಲಿ ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಳಪೆ ಕಾಮಗಾರಿಗಳನ್ನು ಕೈಗೊಂಡಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಜಲ್ ಜೀವನ್ ಮಿಷನ್ ಯೋಜನೆ ಸಂಬಂಧ ಇತ್ತೀಚೆಗೆ ಗುತ್ತಿಗೆದಾರರ ಸಂಘವು ಅಧಿಕಾರಿಗಳ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದು. ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲವೆಂದು ಬಿಲ್ ಪಾವತಿಯನ್ನು ತಿರಸ್ಕರಿಸಿದಾಗ ಇಂತಹ ಆರೋಪಗಳು ಸಾಮಾನ್ಯವೆಂದು ತಿಳಿಸಿದರಲ್ಲದೆ ನೈಜತೆ ಇಲ್ಲದ ಗಾಳಿ ಸುದ್ದಿಗಳಿಗೆ ನಾನು ತಲೆ ಕೆಡಿಸುವುದಿಲ್ಲ. ನಾನು ಅಧಿಕಾರ ವಹಿಸಿಕೊಂಡ ನಂತರ ಅಶಿಸ್ತು, ಕರ್ತವ್ಯ ನಿರ್ಲಕ್ಷ್ಯತೆ ತೋರಿದ ಸುಮಾರು 20 ಪಿಡಿಓಗಳನ್ನು ಯಾವುದೇ ಮುಲಾಜಿಲ್ಲದೆ ಅಮಾನತ್ತು ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಕಳೆದ 1 ವರ್ಷದಿಂದ ಜಿಲ್ಲಾ ಪಂಚಾಯತಿಯಲ್ಲಿ ಶಾಸಕರು, ಸಚಿವರ ಮಾರ್ಗದರ್ಶನದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಎಲ್ಲಾ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಕೆಲವು ಕಾಮಗಾರಿ ಹಾಗೂ ಸೇವೆಗಳಲ್ಲಿ ಸಣ್ಣ-ಪುಟ್ಟ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಪಾರದರ್ಶಕವಾಗಿ ಅನುಷ್ಟಾನಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಜನತೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಶಕ್ತಿಮೀರಿ ಯೋಜನೆಗಳ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಪ್ರತೀ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಟಾನಿಸುವಾಗ ಗುಣಮಟ್ಟದ ಪರೀಕ್ಷೆಯನ್ನು 3ನೇ ವ್ಯಕ್ತಿಯಿಂದ ತಪಾಸಣೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದರಲ್ಲದೆ ಜಲ್ ಜೀವನ್ ಮಿಷನ್ ಕಾಮಗಾರಿಗಳ ಬಿಲ್ ಪಾವತಿ ವಿಳಂಬಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ, ಆರ್ಥಿಕ ವರ್ಷ ಮುಕ್ತಾಯ ಅವಧಿಯಲ್ಲಿ ಬಿಲ್ ಪಾವತಿ ಮಾಡಲು ವಿಳಂಬವಾಗಿದೆ. ಕಾಮಗಾರಿ ಪೂರ್ಣಗೊಂಡ ಒಂದು ತಿಂಗಳ ಅವಧಿಯೊಳಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.
ಜಲ್‍ಜೀವನ್ ಮಿಷನ್ ಕಾಮಗಾರಿಗಾಗಿ 2021 ರಿಂದ 100 ಕೋಟಿ ರೂ.ಗಳ ಜಿಎಸ್‍ಟಿ ಮೊತ್ತ ಸೇರಿ ಈವರೆಗೆ ಒಟ್ಟು 446 ಕೋಟಿ ರೂ.ಗಳನ್ನು ಪಾವತಿ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳ ಜನರಿಗಾಗಿ ಶಾಶ್ವತ ಕಾಮಗಾರಿಗಳನ್ನು ಸೃಜಿಸಲು ಹಾಗೂ ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಲು ಎಲ್ಲಾ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಶೇ.55 ಹಾಗೂ ಕೇಂದ್ರ ಸರ್ಕಾರದ ಶೇ.45ರಷ್ಟು ಅನುದಾನದಲ್ಲಿ ಜಲ್ ಜೀವನ್ ಮೀಷನ್ ಯೋಜನೆ(ಜೆಜೆಎಂ)ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಈವರೆಗೆ ಒಟ್ಟು 3700 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, 2500 ಕಾಮಗಾರಿಗಳು ಪ್ರಗತಿಯಲ್ಲಿವೆ. ಪೂರ್ಣಗೊಂಡ 805 ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶೇ.80ರಷ್ಟು ಹಣ ಪಾವತಿಮಾಡಲಾಗಿದೆ. ಕಳಪೆ ಗುಣಮಟ್ಟ ಮತ್ತು ಕಾಮಗಾರಿ ವಿಳಂಬಗೊಳಿಸಿರುವ 116 ಕಾಮಗಾರಿಗಳ ಟೆಂಡರ್ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದರು.
ಜಲ್ ಜೀವನ್ ಮಿಷನ್ ಯೋಜನೆಯಡಿ ಕಳಪೆ ಗುಣಮಟ್ಟದ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗಿದೆ. ಜೆಜೆಎಂ ಕಾಮಗಾರಿಗಳು ಪೂರ್ಣಗೊಂಡ ನಂತರ ಆಯಾ ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ಗುಣಮಟ್ಟದ ಬಗ್ಗೆ ಗ್ರಾಮ ಸಭೆ ನಡೆಸಿ ಸಭೆಯಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಗುತ್ತಿಗೆ ದಾರರಿಗೆ ಬಿಲ್ ಪಾವತಿ ಮಾಡಲು ಕ್ರಮವಹಿಸಲಾಗುವುದೆಂದು ತಿಳಿಸಿದರು.
ಕಳೆದ ವರ್ಷ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 3 ಪಟ್ಟು ಹೆಚ್ಚುವರಿ ಆಸ್ತಿಗಳನ್ನು ಸೃಜನೆ ಮಾಡಲಾಗಿದೆ. ಅಧಿಕಾರಿಗಳ ಶ್ರಮದಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದರಲ್ಲದೆ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ನರೇಗಾ ಯೋಜನೆಯಡಿ ಯಂತ್ರಗಳನ್ನು ಬಳಸದೆ ಸಮಗ್ರ ಶಾಲಾಭಿವೃದ್ಧಿ, ಆಸ್ಪತ್ರೆ, ರಸ್ತೆ, ಚರಂಡಿ ಕಾಮಗಾರಿ, ಅಂಗನವಾಡಿ ಕೊಠಡಿ ನಿರ್ಮಾಣಕ್ಕಾಗಿ 750 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ 24,58,682 ಮಾನವ ದಿನಗಳನ್ನು ಸೃಜಿಸುವ ಮೂಲಕ ಕೂಲಿ ಕಾರ್ಮಿಕರ ಖಾತೆಗೆ ಒಟ್ಟು 127 ಕೋಟಿ ರೂ.ಗಳನ್ನು ನೇರವಾಗಿ ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.