ತುಮಕೂರು: ಮನುಷ್ಯನ ಜೀವನ ಮತ್ತು ವ್ಯಕ್ತಿತ್ವವನ್ನು ಹಾಳು ಮಾಡುವ ಮಾದಕ ವಸ್ತುಗಳಿಂದ ದೂರವಿರಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಡಾ: ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಹಾಗೂ ಅಚರ್ಡ್ ಮದ್ಯವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ಮ.ನಿ.ಪ್ರ. ಡಾ: ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ “ವ್ಯಸನ ಮುಕ್ತ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ಅಪ್ರಾಪ್ತರು ವಿವಿಧ ರೀತಿಯ ಮಾದಕ ವಸ್ತು ಸೇವನೆಯನ್ನು ಹವ್ಯಾಸ ಮಾಡಿಕೊಂಡು ಕಳ್ಳತನ, ದರೋಡೆ ಸೇರಿದಂತೆ ಮತ್ತಿತರ ಅಪರಾಧಗಳಲ್ಲಿ ತೊಡಗಿಕೊಂಡು ವಿದ್ಯಾಭ್ಯಾಸದ ಕಡೆಗೆ ಗಮನ ವಹಿಸದೆ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಅವುಗಳಿಂದ ದೂರ ಉಳಿಯುವಂತೆ ಮಾಡಬೇಕು ಎಂದು ತಿಳಿಸಿದರು.
ಅಪ್ರಾಪ್ತ ವಯಸ್ಕರಿಗೆ ಮಾದಕ ವಸ್ತುಗಳನ್ನು ಮಾರುವುದು ಕಾನೂನು ಬಾಹಿರವಾಗಿದ್ದು, ಅಪ್ರಾಪ್ತರಿಗೆ ಮಾದಕ ವಸ್ತುಗಳನ್ನು ಮಾರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರಲ್ಲದೇ ಆಕರ್ಷಣೆ, ಕುತೂಹಲ ಮತ್ತಿತರ ಕಾರಣಗಳಿಂದ ಮಾದಕ ವ್ಯಸನಿಗಳಾಗಿದ್ದರೆ ಸಮಾಲೋಚನಾ ಕೇಂದ್ರಗಳಿಗೆ ತೆರಳಿ ವ್ಯಸನ ಮುಕ್ತರಾಗಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಮದ್ಯ/ಮಾದಕ ವಸ್ತುಗಳಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದ ಅವರು, ಜೀವ ಸಂಕುಲದಲ್ಲಿಯೇ ಅತ್ಯಂತ ವಿಶೇಷವಾದ ಜ್ಞಾನವುಳ್ಳ ಮನುಷ್ಯ ಸಹಬಾಳ್ವೆ ಜೀವನ ನಡೆಸುತ್ತಾ ಅಭಿವೃದ್ಧಿ ಹೊಂದುತ್ತಾ ಹೋಗುತ್ತಿದ್ದಾನೆ. ವಿದ್ಯಾರ್ಥಿಗಳು ಕೂಡ ಒಬ್ಬರಿಗೊಬ್ಬರು ಸಹಕಾರ ಮನೋಭಾವದಿಂದ ಸಕರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಸಾಧಕ ವ್ಯಕ್ತಿಗಳಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳು ಶ್ರದ್ದೆಯಿಂದ ವಿದ್ಯೆಯನ್ನು ಕಲಿಯಬೇಕು. ಪಠ್ಯ ಪುಸ್ತಕದ ಜ್ಞಾನದ ಜೊತೆಗೆ ಸಮಾಜದ ಪ್ರಚಲಿತ ಘಟನೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಯಶಸ್ಸಿನ ಗುರಿಯನ್ನು ಮುಟ್ಟಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ. ಹಿಮಂತರಾಜು ಅವರು, ದುಶ್ಚಟಗಳಿಗೆ ಒಳಗಾಗಿರುವವರನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಜೋಳಿಗೆ ಹಿಡಿದು ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಜೋಳಿಗೆಗೆ ಹಾಕಿಸಿಕೊಂಡು, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿಸುವ ಮೂಲಕ ಜನರ ಮನಃಪರಿವರ್ತನೆ ಮಾಡಿದ ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಜನ್ಮ ದಿನದ ಅಂಗವಾಗಿ ಆಗಸ್ಟ್ 1ರಂದು ರಾಜ್ಯದಾದ್ಯಂತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಆಚರ್ಡ್ ಮದ್ಯ ವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಹಾಗೂ ವೈದ್ಯರಾದ ಡಾ: ಮೇಘ ಸದಾಶಿವ ಅವರು, ಮಾದಕ ವಸ್ತುಗಳು ಮತ್ತು ಔಷಧಿಗಳಿಗಿರುವ ವ್ಯತ್ಯಾಸ ಹಾಗೂ ದುಶ್ಚಟಗಳಿಂದಾಗುವ ಪರಿಣಾಮಗಳ ಬಗ್ಗೆ ಚರ್ಚಿಸಿ, ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ದೈಹಿಕ, ಮಾನಸಿಕ, ಆರ್ಥಿಕ, ಕೌಟುಂಬಿಕ, ಸಾಮಾಜಿಕ ಸ್ಥಿತಿ ಹಾಳಾಗಲಿದೆ ಎಂದು ತಿಳಿಸಿದರು.
ಜೋಳಿಗೆ ಹಿಡಿದು ವ್ಯಸನಿಗಳಿಂದ ತಂಬಾಕು ಉತ್ಪನ್ನಗಳನ್ನು ಸಂಗ್ರಹಿಸಿದ ವಿದ್ಯಾರ್ಥಿಗಳು :-
ವ್ಯಸನಮುಕ್ತ ಸಮಾಜಕ್ಕಾಗಿ ವ್ಯಸನಿಗಳಿಂದ ಗುಟ್ಕಾ, ಸಿಗರೇಟ್, ಬೀಡಿ, ಸೇರಿದಂತೆ ಮತ್ತಿತರ ತಂಬಾಕು ಉತ್ಪನ್ನಗಳನ್ನು ಜೋಳಿಗೆ ಹಿಡಿದು ಸಂಗ್ರಹಿಸುವ ಮೂಲಕ ಆರ್ಯನ್ ಪ್ರೌಢಶಾಲೆ ವಿದ್ಯಾರ್ಥಿಗಳು ಮಾದಕ ದ್ರವ್ಯಗಳನ್ನು ತ್ಯಜಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆಯಿಂದ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಮಂಜುನಾಥ್ ಅವರು ಮಾದಕ ವಸ್ತುಗಳನ್ನು ತ್ಯಜಿಸುವ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಸರ್ಕಾರಿ ಪದವಿ ಪೂರ್ವ ಹಾಗೂ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.