ಕಾಂಗ್ರೇಸ್ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ ಹಾಲನೂರು ಲೇಪಾಕ್ಷ್ ರಘು ಕುಮಾರ್‌ ಆರೋಪ

ತುಮಕೂರು : ಕಾಂಗ್ರೆಸ್ ಪಕ್ಷವು ನಮ್ಮ ಭಾರತ ದೇಶದಲ್ಲಿ ಅತ್ಯಂತ ಪುರಾತನ ಪಕ್ಷವಾಗಿದ್ದು ಅದಕ್ಕೇ ತನ್ನದೇ ಆದಂತಹ ಸಿದ್ಧಾಂತ, ಶಿಸ್ತು, ಸಾಮಾಜಿಕ ಕಳಕಳಿ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸುವಂತಹ ಪಕ್ಷವಾಗಿದೆ ಅದನ್ನು ಇತ್ತೀಚೆಗೆ ಹಾಳು ಮಾಡುವಂತಹ ಕಾರ್ಯ ನಡೆಯುತ್ತಿರುವುದು ನಮಗೆ ಬೇಸರ ತಂದಿದೆ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ರಘು ಕುಮಾರ್‌ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವರ್ಷ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಜೆಡಿಎಸ್ ಪಕ್ಷದಿಂದ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್‌ರವರ ನೇತೃತ್ವದಲ್ಲಿ ನೂರಾರು ಜನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷಕ್ಕೆ ಅತೀವ ಬೆಂಬಲವನ್ನೂ ಸಹ ಸೂಚಿಸಿದರು, ಇದಕ್ಕೆ ನಮ್ಮ ಹರ್ಷವೂ ಆಯಿತು, ಆದರೆ ನೂತನ ತುಮಕೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹಾಲನೂರು ಲೇಪಾಕ್ಷ್ ಅವರು ಪಕ್ಷೇತರ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿರುವುದಲ್ಲದೇ ಸದ್ದಿಲ್ಲದೇ ಪಕ್ಷಕ್ಕೆ ದ್ರೋಹ ಬಗೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂದುವರೆದು ಮಾತನಾಡುತ್ತಾ ಇದೀಗ ವಿಧಾನಪರಿಷತ್ ಚುನಾವಣೆ ನಡೆಯುತ್ತಿದ್ದು, ಅದರಂತೆ ನಮ್ಮ ತುಮಕೂರು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ, ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್‌ರವರ ಪರವಾಗಿ ಕೆಲಸವನ್ನು ಹಾಗೂ ಚುನಾವಣಾ ಪ್ರಚಾರವನ್ನು ಮಾಡದೇ ಅವರು ಪಕ್ಷೇತರ ಅಭ್ಯರ್ಥಿಯಾಗಿರುವ ವಿನೋದ್ ಶಿವರಾಜ್‌ರವರೊಂದಿಗೆ ಓಡಾಡುತ್ತಾ, ಚುನಾವಣಾ ಪ್ರಚಾರವನ್ನು ಮಾಡುತ್ತಿರುವುದು ಎಲ್ಲಾ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಅವರ ಪರವಾಗಿ ಮತ ಕೇಳುತ್ತಿರುವುದು ಪಕ್ಷಕ್ಕೆ ಮಾಡುತ್ತಿರುವ ದ್ರೋಹ ಎಂದು ಆರೋಪಿಸಿದರು.

ಈ ವಿಚಾರವಾಗಿ ಗ್ರಾಮಾಂತರ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್‌ರವರ ಪರಮಾಪ್ತರಾಗಿ ಗುರುತಿಸಿಕೊಂಡಿರುವ ಹಾಲನೂರು ಲೇಪಾಕ್ಷ್ ಅವರ ವಿರುದ್ಧ ಗೌರಿಶಂಕರ್‌ರವರಿಗೆ ಇವರ ನಡೆಯನ್ನು ಮೌಖಿಕವಾಗಿ ಹೇಳಲಾಗಿ, ತಾವು ಸದ್ಯದಲ್ಲಿ ಹೊರಗಡೆ ಇರುವುದರಿಂದ ಬಂದ ಮೇಲೆ ಎಲ್ಲವನ್ನೂ ಸರಿ ಮಾಡುವುದಾಗಿ ಹೇಳಿದ್ದರು, ಆದರೆ ಇದುವರೆವಿಗೂ ಸಹ ಯಾವುದೇ ರೀತಿಯಾದ ಕ್ರಮವೂ ಆಗದೇ ಇರುವುದು ನಮಗೆ ಬೇಸರ ತಂದಿದೆ, ಜೊತೆಗೆ ನಾವು ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿಕೊಂಡು ಬಂದಿದ್ದು ಮೂಲ ಕಾಂಗ್ರೆಸ್ಸಿಗರ ಆಕ್ರೋಷಕ್ಕೆ ಹಾಲನೂರು ಲೇಪಾಕ್ಷ್ ರವರು ಕಾರಣರಾಗಿದ್ದಾರೆ.

ಹಾಲನೂರು ಲೇಪಾಕ್ಷ್‌ರವರು ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಆದರೆ ಅವರು ಮಾಡುತ್ತಿರುವ ಕೆಲಸ ಮಾತ್ರ ಅವರ ಸ್ನೇಹಿತರ ಪರವಾಗಿ ಇದು ಪಕ್ಷಕ್ಕೆ ಮಾಡುತ್ತಿರುವ ದ್ರೋಹ ಅಲ್ಲವೇ ಪಕ್ಷದ ಸಿದ್ಧಾಂತವನ್ನು ನಂಬಿರುವವರು ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡದೇ ಅವರು ತಮ್ಮ ಸ್ವ-ಇಚ್ಛೆಯಂತೆ ನಡೆದುಕೊಳ್ಳುವುದಾದರೇ ಅವರಿಗೆ ಕಾಂಗ್ರೆಸ್ ಪಕ್ಷದ ಹುದ್ದೆ ಯಾಕೆ ಎಂದು ಹೇಳಿದರಲ್ಲದೇ ಈ ಬಗ್ಗೆ ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರ ಗಮನಕ್ಕೆ ತಂದಿದ್ದು ಈ ಬಗ್ಗೆ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ವಲಸೆ ಬಂದಿರುವ ಕೆಲವು ಮುಖಂಡರು ಆ ಪಕ್ಷಗಳ ತತ್ವ, ಸಿದ್ಧಾಂತಗಳನ್ನು ತಮ್ಮೊಟ್ಟಿಗೆ ತಂದು ಮೂಲ ಕಾಂಗ್ರೇಸಿಗರ ಮೇಲೆ ಬಲವಂತವಾಗಿ ಏರಲು ಪ್ರಯತ್ನಿಸುತ್ತಿದ್ದು, ಇದರಿಂದಾಗಿ ಮೂಲ ಕಾಂಗ್ರೆಸಿಗರು ಮೂಲೆಗುಂಪಾಗುವ ಆತಂಕ ಎದುರಾಗಿದೆ ಎಂದರು. ಜಿಲ್ಲೆಯ ಸಚಿವರಾದ ಡಾ. ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಸೇರಿದಂತೆ ಎಲ್ಲರ ಗಮನಕ್ಕೂ ತಂದು ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ಹಾಲನೂರು ಲೇಪಾಕ್ಷಿಯವರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖಂಡ ರಘುಕುಮಾರ್ ಆಗ್ರಹಿಸಿದರು.

Leave a Reply

Your email address will not be published. Required fields are marked *