ನಗರ ಪ್ರದೇಶಗಳಿಗೆ ಸರಿಸಮಾನವಾಗಿ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕು : ಡಾ: ಜಿ. ಪರಮೇಶ್ವರ್

ತುಮಕೂರು: ಗ್ರಾಮೀಣ ಪ್ರದೇಶಗಳನ್ನು ನಗರ ಪ್ರದೇಶಗಳಿಗೆ ಸರಿಸಮಾನವಾಗಿ ಅಭಿವೃದ್ಧಿಪಡಿಸಿದಾಗ ಮಾತ್ರ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

 

ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಹೊರವಲಯದ ಹೆಗ್ಗೆರೆ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಗುರುವಾರ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಸ್ಥಳೀಯ ಆಡಳಿತವನ್ನು ಬಲಗೊಳಿಸಲು ಗ್ರಾಮ ಪಂಚಾಯತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೃಜನೆಯಾದ ಗ್ರಾಮ ಪಂಚಾಯತಿಗಳಿಂದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯನ್ನು ಕಾಣುತ್ತಿವೆ ಎಂದು ತಿಳಿಸಿದರು.

 

 

 

 

ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರು ಅವರು ರಾಜಾಸ್ಥಾನದ ನಾಗೌರ್ ಗ್ರಾಮದಲ್ಲಿ ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ 1959ರಲ್ಲಿ ಮೊದಲ ಗ್ರಾಮ ಪಂಚಾಯತಿಯನ್ನು ಪ್ರಾರಂಭಿಸಿದ್ದರು. ಭಾರತದಲ್ಲಿರುವ ಗ್ರಾಮ ಪಂಚಾಯತಿ ವ್ಯವಸ್ಥೆ ವಿಶ್ವದಲ್ಲಿ ಬೇರೆಲ್ಲೂ ಕಾಣ ಸಿಗುವುದಿಲ್ಲ ಎಂದರಲ್ಲದೆ, ಡಾ: ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಗ್ರಾಮೀಣ ಅಭಿವೃದ್ಧಿಗಾಗಿ ವಿಶೇಷವಾಗಿ ನಮೂದನೆ ಮಾಡಿದ್ದು, ದೇಶದ ಎಲ್ಲಾ ಸಮುದಾಯದ ಜನರನ್ನು ಆಡಳಿತದ ವ್ಯವಸ್ಥೆಯಲ್ಲಿ ಪಾಲುದಾರರನ್ನಾಗಿಸುವುದೇ ಸಂವಿಧಾನದ ಆಶಯವಾಗಿದೆ ಎಂದರು.

 

ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸುಮಾರು 28 ಇಲಾಖೆಗಳು ಒಳಪಡುವುದರಿಂದ ಗ್ರಾಮ ಪಂಚಾಯತಿಯ ಅಧಿಕಾರ ವ್ಯಾಪ್ತಿ ಕೂಡ ವಿಸ್ತರಣೆಯಾಗಿ ಗ್ರಾಮೀಣ ಭಾಗದ ಜನರಿಗೆ ವಿವಿಧ ಸೌಲಭ್ಯಗಳನ್ನು ತಲುಪಿಸಲು ಅನುಕೂಲವಾಗಿದೆ. ಗ್ರಾಮ ಪಂಚಾಯತಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಡಿ ಮಹಿಳೆಯರಿಗೂ ಮೀಸಲಾತಿ ಕಲ್ಪಿಸಿ ಸಮಾನ ಅವಕಾಶ ನೀಡಲಾಗಿದೆ. ಮೀಸಲಾತಿಯಿಂದ ಗ್ರಾಮೀಣ ಭಾಗದ ಅನೇಕ ಮಹಿಳೆಯರು ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಪಡೆದು, ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

 

 

ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದು, ನರೇಗಾ ಯೋಜನೆಯಡಿ ಗುರಿ ಮೀರಿ ಸಾಧನೆ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ 63 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ರಾಜ್ಯದಲ್ಲಿಯೇ ನರೇಗಾ ಪ್ರಗತಿಯಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದರು.

 

 

 

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಗ್ರಾಮ ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಸುಮಾರು 2600 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಮನೆ-ಮನೆಗೂ ಕುಡಿಯುವ ನೀರನ್ನು ಒದಗಿಸುವ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

 

ನಂತರ ಮಾತನಾಡಿದ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಗ್ರಾಮ ಆಡಳಿತದ ಅಧಿಕಾರ ವಿಕೇಂದ್ರೀಕರಣ ಪ್ರತ್ಯಾಯೋಜನೆ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕವೂ ಕೂಡ ಒಂದಾಗಿದ್ದು, ರಾಜ್ಯ ಸರ್ಕಾರ ಅನೇಕ ಯೋಜನೆಗಳ ಮೂಲಕ ಸ್ಥಳೀಯ ಆಡಳಿತವನ್ನು ಬಲಗೊಳಿಸುತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವನ್ನೊರತು ಪಡಿಸಿದರೆ ಗ್ರಾಮ ಪಂಚಾಯತಿಗಳಿಗೆ ಮಾತ್ರ ತೆರಿಗೆ ವಿಧಿಸುವ ವಿಶೇಷ ಅಧಿಕಾರವಿದೆ ಎಂದು ತಿಳಿಸಿದರು.

 

 

ಗ್ರಾಮ ಪಂಚಾಯತಿಗಳು ಕೇವಲ ಗ್ರಾಮ ನೈರ್ಮಲ್ಯ, ಬೀದಿ ದೀಪ, ನೀರು ಪೂರೈಕೆಗಷ್ಟೇ ಸೀಮಿತವಾಗದೆ ತನ್ನ ವ್ಯಾಪ್ತಿಯ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಷ್ಟು ಸಾಮಥ್ರ್ಯವನ್ನು ಹೊಂದಿವೆ ಎಂದರಲ್ಲದೆ, ಶಾಲೆಗಳಲ್ಲಿ ಆಟದ ಮೈದಾನ, ಅಡುಗೆ ಕೋಣೆ, ಶೌಚಾಲಯ ನಿರ್ಮಾಣ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗ್ರಾಮ ಪಂಚಾಯತಿಗಳ ವತಿಯಿಂದ ಮಾಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು ತಮಗಿರುವ ಅಧಿಕಾರವನ್ನು ಅಭಿವೃದ್ಧಿಗೆ ಬಳಸಬೇಕೇ ಹೊರತು ಚಲಾಯಿಸಲು ಅಲ್ಲ. ದೂರದೃಷ್ಠಿ ಇಟ್ಟುಕೊಂಡು ಗ್ರಾಮ ಪಂಚಾಯತಿಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಪಂಚಾಯತಿಯ ಆದಾಯದ ಮೂಲಗಳನ್ನು ಗುರುತಿಸಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕು ಎಂದರು.

 

 

ನಂತರ ಮಾತನಾಡಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಕಾರ್ಯದರ್ಶಿ ಉಮಾ ಮಹಾದೇವನ್ ಪಂಚಾಯತಿಗಳಲ್ಲಿ ವಿಶೇಷವಾಗಿ ಮಹಿಳಾ ಸಬಲೀರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಘನತ್ಯಾಜ್ಯ ವಿಲೇವಾರಿ ಘಟಕ, ಸ್ವಚ್ಛ ವಾಹಿನಿ, ಕೂಸಿನ ಮನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಮಹಿಳೆಯರಿಗಾಗಿ ಉದ್ಯೋಗ ಸೃಷ್ಠಿ ಮಾಡಲಾಗುತ್ತಿದೆ. ಸ್ವಚ್ಛ ವಾಹಿನಿಗಳನ್ನು ಚಾಲನೆ ಮಾಡಲು ಮಹಿಳೆಯರನ್ನು ಆಯ್ಕೆ ಮಾಡಬೇಕೆಂದು ಸರ್ಕಾರ ನಿರ್ಧಾರ ಕೈಗೊಂಡ ಸಂದರ್ಭದಲ್ಲಿ ಅನೇಕ ಮಹಿಳೆಯರು ವಾಹನ ಚಾಲನೆ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಚಾಲನಾ ತರಬೇತಿ ನೀಡಿದ ನಂತರ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಘನತ್ಯಾಜ್ಯ ವಿಲೇವಾರಿ ಸ್ವಚ್ಛ ವಾಹಿನಿಗಳನ್ನು ಚಾಲನೆ ಮಾಡುವ ಧೈರ್ಯ ತೋರಿಸಿ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

 

 

ನವದೆಹಲಿ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ. ಜಯಚಂದ್ರ ಮಾತನಾಡಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಸರ್ಕಾರಿ ಆದೇಶಗಳ ಬಗ್ಗೆ ಸರಿಯಾದ ಮಾಹಿತಿ ನೀಡುವುದರ ಜೊತೆಗೆ ಅವರೊಂದಿಗೆ ಸಮನ್ವಯ ಸಾಧಿಸಿ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.

 

 

ಶಾಸಕ ಸುರೇಶ್ ಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಯೋಜನೆಗಳ ಅನುಷ್ಟಾನ ಪಾರದರ್ಶಕವಾಗಿ ಹಾಗೂ ತ್ವರಿತಗತಿಯಲ್ಲಿ ಮಾಡಬೇಕು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ನಡುವಿನ ಕೊಂಡಿಯಾಗಿ ಸೃಜನಶೀಲತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

 

 

 

ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು, ಗ್ರಾಮ ಪಂಚಾಯಿತಿಯ ಆಡಳಿತ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಒಂದು ದಿನ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಕಾರ್ಯಾಗಾರದಲ್ಲಿ ನರೇಗಾ ಯೋಜನೆ, ಎನ್‍ಆರ್‍ಎಲ್‍ಎಂ(ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್), ಜಲಜೀವನ್ ಮಿಷನ್, ಸ್ವಚ್ಛಭಾರತ್ ಮಿಷನ್, ನೀರು ಪರೀಕ್ಷೆ, ಸೇರಿದಂತೆ ವಿವಿಧ ಯೋಜನೆಗಳ ಅನುಷ್ಟಾನ ಮತ್ತು ಪ್ರಗತಿ, ಗ್ರಾಮಪಂಚಾಯತಿಯಲ್ಲಿ ತೆರಿಗೆ ವಸೂಲಾತಿ, ಕ್ರಿಯಾ ಯೋಜನೆ ತಯಾರಿಕೆ ವಾರ್ಷಿಕ ಲೆಕ್ಕ ತಪಾಸಣೆ, ಇ-ಸ್ವತ್ತು, ಲೆಕ್ಕಪತ್ರ ನಿರ್ವಹಣೆ ಸೇರಿದಂತೆ 12ಕ್ಕು ಹೆಚ್ಚು ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.

 

 

ಜಿಲ್ಲೆಯಲ್ಲಿ ಕಳೆದ ವರ್ಷ ನರೇಗಾ ಯೋಜನೆಯಡಿ ಶಾಲೆ, ಶೌಚಾಲಯ, ಗ್ರಾಮ ಪಂಚಾಯತಿ/ ಅಂಗನವಾಡಿ ಕಟ್ಟಡ, ಚರಂಡಿ, ಸಂಜೀವಿನಿ ಭವನ ನಿರ್ಮಾಣ ಕಾಮಗಾರಿಗಳಿಗೆ 630 ಕೋಟಿ ರೂ. ಅನುದಾನ ಬಳಕೆ ಮಾಡಿ ನಿಗಧಿತ ಗುರಿ ಮೀರಿ ಸಾಧನೆ ಮಾಡಲಾಗಿದೆ. ಅದರಲ್ಲಿ ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೆ 320 ಕೋಟಿ ರೂ. ಹಣವನ್ನು ವಿನಿಯೋಗಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷಕ್ಕಾಗಿ ನರೇಗಾ ಯೋಜನೆಯಡಿ 706 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಈಗಾಗಲೇ 440 ಕೋಟಿ ರೂ.ಗಳ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು.

 

 

ಜಿಲ್ಲೆಯಲ್ಲಿ ವಸತಿ ಯೋಜನೆಯಡಿ 40 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅರ್ಹ ವಸತಿ ರಹಿತ ಫಲಾನುಭವಿಗಳಿಗೆ ನೀಡಲು 2123 ಎಕರೆ ಪ್ರದೇಶ(ಜಿಪಿಎಸ್ ಆಧಾರಿತ)ವನ್ನು ಜಿಲ್ಲಾಡಳಿತದಿಂದ ಗುರುತಿಸಿ ಹಸ್ತಾಂತರಿಸಲಾಗಿದೆ ಎಂದರು.

 

 

 

ಜಿಲ್ಲೆಯಾದ್ಯಂತ ಕೈಗೊಂಡಿರುವ ತುಮಕೂರು ಆರೋಗ್ಯ ಅಭಿಯಾನ ಕಾರ್ಯಕ್ರಮದಲ್ಲಿ 30 ವರ್ಷ ಮೇಲ್ಪಟ್ಟವರ 4.70 ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಿ ರಕ್ತದೊತ್ತಡ, ಮಧುಮೇಹ, ರಕ್ತ ಹೀನತೆ, ಕ್ಯಾನ್ಸರ್ ಸೇರಿದಂತೆ 10ಕ್ಕೂ ಹೆಚ್ಚು ಸ್ವರೂಪದ ಖಾಯಿಲೆಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದರು.

 

 

 

ಜಿಲ್ಲೆಯಲ್ಲಿ 16 ಸಾವಿರಕ್ಕೂ ಹೆಚ್ಚು ಸಂಜೀವಿನಿ ಮಹಿಳಾ ಸ್ವಾ- ಸಹಾಯ ಸಂಘಗಳು ವಿವಿಧ ಯೋಜನೆಯಡಿ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಧೃಡರಾಗಿದ್ದಾರೆ ಎಂದರಲ್ಲದೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 9,50,000 ಆಸ್ತಿಗಳಿದ್ದು, 2,50,000 ಆಸ್ತಿಗೆ ಮಾತ್ರ ಇ-ಸ್ವತ್ತು ಮಾಡಲಾಗಿದೆ. ಉಳಿದ ಆಸ್ತಿಗಳಿಗೆ ಇ-ಸ್ವತ್ತು ಮಾಡಲು ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

 

 

 

ಕಾರ್ಯಕ್ರಮದಲ್ಲಿ ಪಾವಗಡ ಶಾಸಕ ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕೆ.ವಿ. ಅಶೋಕ್, ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

 

 

 

ಕಾರ್ಯಕ್ರಮಕ್ಕೂ ಮುನ್ನ ಸಚಿವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಅನುಷ್ಟಾನ ಮಾಡುವ ವಿವಿಧ ಸರ್ಕಾರಿ ಯೋಜನೆಗಳು ಸೇರಿದಂತೆ ಜಿಲ್ಲಾ ಪಂಚಾಯತಿಯ ನರೇಗಾ ಯೋಜನೆಯಡಿ ಕೈಗೊಂಡಿರುವ ಶಾಲಾಭಿವೃದ್ಧಿ/ ವೈಯಕ್ತಿಕ ಕಾಮಗಾರಿಗಳು, ಹಸಿರು ಗ್ರಾಮ ಅಭಿಯಾನ, ಜಲ ಜೀವನ್ ಮಿಷನ್ ಕಾಮಗಾರಿ ಪಕ್ಷಿನೋಟ, ಸ್ವಚ್ಛ ತುಮಕೂರು ಅಭಿಯಾನ, ಮಾದರಿ ಸ್ವಚ್ಛಗ್ರಾಮ, ಘನತ್ಯಾಜ್ಯ ನಿರ್ವಹಣೆ, ಸಂಜೀವಿನಿ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ವೀಕ್ಷಿಸಿದರು.
************

Leave a Reply

Your email address will not be published. Required fields are marked *