ಶಾಲಾ-ಕಾಲೇಜುಗಳ ಆವರಣ ಸ್ವಚ್ಛವಾಗಿಡಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ

ತುಮಕೂರು : ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಹಗಲು ಹೊತ್ತಿನಲ್ಲಿ ರೋಗಗಳನ್ನು ಹರಡುವಂತಹ ಸೊಳ್ಳೆಗಳ ಕಡಿತದಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವ ಕಾರಣ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳ ಕೊಠಡಿಗಳನ್ನು ಪರಿಶೀಲಿಸಿ ಸ್ವಚ್ಛತೆ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

 

 

ಇಂದು ಜಿಲ್ಲಾಧಿಕಾರಿಗಳ ಕಚೇರಿಯ ವೀಡಿಯೋ ಕಾನ್ಪೆರೆನ್ಸ್ ಸಭಾಂಗಣದಲ್ಲಿ ನಡೆದ ‘ಮುಂಗಾರು ಹಾಗೂ ಬರ ನಿರ್ವಹಣೆಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

 

ಆಸ್ಪತ್ರೆಗಳ ಶಸ್ತ್ರಚಿಕಿತ್ಸೆ ಕೊಠಡಿಗಳು ಸೇರಿದಂತೆ ಆಸ್ಪತ್ರೆ ಆವರಣ ಸ್ವಚ್ಛತೆ ಕುರಿತಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು, ಪಾವಗಡದಲ್ಲಿ ನಡೆದಂತಹ ಪ್ರಕರಣ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ಜಿಲ್ಲೆಯ ಕುಡಿಯುವ ನೀರಿನ ಮೂಲಗಳ ಪರೀಕ್ಷೆ ನಡೆಸಲಾಗಿದ್ದು, ಕುಡಿಯುವ ನೀರಿನ ಪರೀಕ್ಷೆಯಲ್ಲಿ ನೀರಿನ ಅಶುದ್ಧತೆ ಬಗ್ಗೆ ವರದಿ ಬಂದ ತಕ್ಷಣ ಸಾರ್ವಜನಿಕರಿಗೆ ಅಶುದ್ಧ ಕುಡಿಯುವ ನೀರು ಪೂರೈಕೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸೂಚಿಸಿದರಲ್ಲದೆ, ಪರ್ಯಾಯವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಿಪಟೂರು ತಾಲೂಕಿನ ಈಚನೂರು ಕೆರೆಗೆ ಮಲೀನಯುಕ್ತ ನೀರು ಸೇರುತ್ತಿರುವ ಬಗ್ಗೆ ಇಂದೇ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿ ಸಪ್ತಶ್ರೀ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

 

 

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ರವೀಶ್ ಮಾತನಾಡಿ, ಜಿಲ್ಲೆಯಾದ್ಯಂತ ೧೦೩ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ಹಾಗೂ ೫ ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

 

 

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಮಳೆಯಿಂದ ಕೊಳವೆಬಾವಿಗಳಿಗೆ ಜಲ ಮರುಪೂರಣವಾಗಿ ಅಂತರ್ಜಲಮಟ್ಟ ಹೆಚ್ಚುತ್ತಿದ್ದು, ಈ ಬಗ್ಗೆ ಮರುಪರಿಶೀಲಿಸುವಂತೆ ಸೂಚಿಸಿದರು.
ಮಳೆ ಹಾನಿ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು :-
ಕುಣಿಗಲ್ ತಹಶೀಲ್ದಾರ್ ಮಾತನಾಡಿ, ಮಳೆಯಿಂದ ತಾಲ್ಲೂಕು ವ್ಯಾಪ್ತಿಯಲ್ಲಿ ೩ ಮನೆ ಹಾನಿಗೀಡಾಗಿದ್ದು ಪರಿಶೀಲಿಸಲಾಗಿದೆ ಎಂದರು.

 

 

ಗುಬ್ಬಿ ತಹಶೀಲ್ದಾರ್ ಆರತಿ ಮಾತನಾಡಿ, ೧೫ ಮನೆಗಳು ಹಾನಿಯಾಗಿದ್ದು, ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ, ಒಬ್ಬ ವ್ಯಕ್ತಿ ಮೇಲೆ ಮರದ ಕೊಂಬೆ ಬಿದ್ದು ಕಾಲು ಮುರಿದಿದ್ದು, ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

 

ಶಿರಾ ತಾಲ್ಲೂಕಿನಲ್ಲಿ ಮಳೆಯಿಂದಾಗಿ ಒಂದು ಮರ ಉರುಳಿ ಬಿದ್ದಿದ್ದು ಅದನ್ನು ತೆರವುಗೊಳಿಸಲಾಗಿದೆ ಉಳಿದಂತೆ ಮಳೆಯಿಂದ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯಲ್ಲಿ ೧೭೦ ಮಿ.ಮೀ ದಾಖಲೆಯ ಉತ್ತಮ ಮಳೆಯಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಪಾವಗಡ ತಹಶೀಲ್ದಾರ್ ಮಾಹಿತಿ ನೀಡುತ್ತಾ, ತಾಲ್ಲೂಕಿನಾದ್ಯಂತ ಮಳೆಯಿಂದಾಗಿ ೪ ಮನೆಗಳು ಹಾನಿಗೀಡಾಗಿದ್ದು, ಈಗಾಗಲೇ ಪರಿಹಾರ ಪಾವತಿಸಲಾಗಿದೆ ಹಾಗೂ ಭಾನುವಾರ ಸುರಿದಂತಹ ಮಳೆಗೆ ೩ ಮನೆಗಳು ಭಾಗಶಃ ಹಾನಿಯಾಗಿದ್ದು, ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ತಾಲ್ಲೂಕಿನಲ್ಲಿ ೩೮ ಹೆಕ್ಟೇರ್ ಪ್ರದೇಶದ ಅಡಿಕೆ ಹಾಗೂ ಬಾಳೆ ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ ಎಂದರು.

 

 

 

ಎಲ್ಲಾ ತಹಶೀಲ್ದಾರರುಗಳಿಂದ ಮಾಹಿತಿ ಪಡೆದು ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಎಲ್ಲಾ ತಾಲ್ಲೂಕು ತೋಟಗಾರಿಕೆ ಹಾಗೂ ಸಹಾಯಕ ಕೃಷಿ ನಿರ್ದೇಶಕರು ಮಳೆಯಿಂದ ಹಾನಿಯಾಗಿರುವ ರ‍್ಯೆತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಮಹಜರ್ ನಡೆಸಿ ಅರ್ಹತೆ ಹೊಂದಿದ್ದರೆ ಅಂತಹ ಫಲಾನುಭವಿಗೆ ಶೀಘ್ರ ಪರಿಹಾರ ಮೊತ್ತ ಪಾವತಿಸುವಂತೆ ಸೂಚಿಸಿದರು. ಜಿಲ್ಲೆಯ ಎಲ್ಲಾ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಮರ್ಪಕ ಕುಡಿಯುವ ನೀರು ಪೂರೈಕೆ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಚರಂಡಿ ನೀರು, ಮಳೆ ನೀರು ಕುಡಿಯುವ ನೀರು ಪೂರೈಸುವ ಸಂಪರ್ಕಗಳಿಗೆ ಮಿಶ್ರಿತವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೂಚಿಸಿದರಲ್ಲದೆ, ಆರೋಗ್ಯಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಒಟ್ಟಾಗಿ ನೀರಿನ ಸಂಗ್ರಹಾಗಾರಗಳನ್ನು ಪರಿಶೀಲಿಸುವಂತೆ ಸೂಚಿಸಿದರು.

 

 

 

 

ಸಮಗ್ರ ಯೋಜನೆ ವರದಿ ಸಲ್ಲಿಸಿ :- ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸುರಿದ ಮಳೆಯ ಪ್ರಮಾಣ, ಹಾನಿ, ಮೊದಲಾದ ಅಂಶಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಮಳೆಯಿಂದ ಆಗುವ ಹಾನಿ, ಪ್ರವಾಹದಂತಹ ಪ್ರಕರಣಗಳು ಜರುಗಿದಾಗ ಆಗುವ ಹಾನಿಗಳ ಬಗ್ಗೆ ಹಾಗೂ ಅದನ್ನು ತಡೆಯುವ ನಿಟ್ಟಿನಲ್ಲಿ ಸಮಗ್ರ ಯೋಜನಾ ವರದಿಯನ್ನು ಸಲ್ಲಿಸುವಂತೆ ಈಗಾಗಲೇ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದ್ದು, ಈ ವಾರದೊಳಗೆ ಸಲ್ಲಿಸುವಂತೆ ಸೂಚಿಸಿದರು.

 

 

ಬೀದಿ ನಾಯಿ ಹಾವಳಿ ನಿಯಂತ್ರಿಸಿ :-
ಜಿಲ್ಲೆಯ ಕೆಲವೆಡೆ ನಾಯಿ ಕಡಿತದಿಂದ ಸಾರ್ವಜನಿಕರು ಗಾಯಗೊಂಡಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ವರದಿ(ಎಬಿಸಿ)ಯನ್ನು ತ್ವರಿತವಾಗಿ ಪಡೆದು ಬೀದಿ ನಾಯಿಗಳ ಹಾವಳಿಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರ ಯೋಜನಾ ನಿರ್ದೇಶಕರಾದ ಅಂಜಿನಪ್ಪನವರಿಗೆ ಸೂಚಿಸಿದರು.
ಮೇವಿನ ಬ್ಯಾಂಕ್ ಅಗತ್ಯತೆ ಪರಿಶೀಲಿಸಿ :- ಜಿಲ್ಲೆಯಾದ್ಯಂತ ಬರ ನಿರ್ವಹಣೆ ನಿಟ್ಟಿನಲ್ಲಿ ೨೧ ಮೇವಿನ ಬ್ಯಾಂಕುಗಳನ್ನು ಸ್ಥಾಪಿಸಲಾಗಿದ್ದು, ಪ್ರಸ್ತುತ ರೈತರಿಂದ ಬೇಡಿಕೆಯಿಲ್ಲದ ೬ ಮೇವಿನ ಬ್ಯಾಂಕುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ: ಗಿರೀಶ್ ಬಾಬು ರೆಡ್ಡಿ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಮೇವಿನ ಬ್ಯಾಂಕ್ ಅಗತ್ಯತೆ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಅವಶ್ಯಕತೆ ಇಲ್ಲದಿದ್ದಲ್ಲಿ ಅವುಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.

 

 

 

ಬೆಳೆವಿಮೆಗೆ ನೋಂದಾಯಿಸಲು ಸೂಚನೆ :- ರೈತರು ಕೃಷಿ ಬೆಳೆಗಳಿಗೆ ಶೇ.೨ರಷ್ಟು, ತೋಟಗಾರಿಕೆ ಬೆಳೆಗಳಿಗೆ ಶೇ.೫ರಷ್ಟು ವಿಮೆ ಮೊತ್ತ ಪಾವತಿಸಿದಲ್ಲಿ ಉಳಿದ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾವತಿಸಿ ಬೆಳೆವಿಮೆ ಒದಗಿಸುತ್ತವೆ. ರೈತರಿಗೆ ಸಂಭವಿಸಬಹುದಾದ ಬೆಳೆ ನಷ್ಟದಿಂದ ಬೆಳೆ ವಿಮೆ ರಕ್ಷಣೆ ನೀಡುತ್ತಿದೆ. ಆದರಿಂದ ಎಲ್ಲಾ ರೈತರಿಗೂ ಬೆಳೆ ವಿಮೆಯ ಅಗತ್ಯತೆ ಬಗ್ಗೆ ಅರಿವು ಮೂಡಿಸಿ ಎಲ್ಲಾ ರೈತರು ಬೆಳೆವಿಮೆ ನೋಂದಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ತಾಲ್ಲೂಕು ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಹಾಗೂ ತಹಸಿಲ್ದಾರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರಲ್ಲದೆ, ವಿಮೆ ನೋಂದಾವಣಿ ಪ್ರಕ್ರಿಯೆ ನಡೆಯುವಂತಹ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಹೆಚ್ಚಿನ ರೈತರು ಭಾಗವಹಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.

 

 

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರಮೇಶ್ ಮಾತನಾಡಿ, ಈಗಾಗಲೇ ಜಿಲ್ಲೆಯಾದ್ಯಂತ ರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಣ ಕೇಂದ್ರಗಳಿಗೆ ಅಗತ್ಯ ಮಾಹಿತಿ ನೀಡಿ ಪ್ರತಿದಿನ ವಿತರಣೆ ಮಾಡಲಾದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡುವಂತೆ ಹಾಗೂ ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆಯನ್ನು ತ್ವರಿತವಾಗಿ ಸಲ್ಲಿಸುವಂತೆ ತಿಳಿಸಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ಬಂದಂತಹ ಸಂದರ್ಭದಲ್ಲಿ ಆ ದಿನವೇ ಎಲ್ಲಾ ರೈತರಿಗೂ ಬಿತ್ತನೆ ಬೀಜ ವಿತರಿಸಬೇಕೆಂದು ಸೂಚಿಸಲಾಗಿದೆ ಎಂದರು.

 

 

ಹಾಗೂ ಜಿಲ್ಲೆಯಾದ್ಯಂತ ರೈತರಿಗೆ ಬೆಳೆ ವಿಮೆ ಸೇರಿದಂತೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕೃಷಿ ಸಂಜೀವಿನಿ ವಾಹನಗಳು, ಕರಪತ್ರ, ಬಿತ್ತಿಪತ್ರಗಳ ಮೂಲಕ ಪ್ರಚಾರ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

 

 

ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *