ಭದ್ರತಾ ಕೊಠಡಿಗೆ ಮುಖ್ಯ ಚುನಾವಣಾಧಿಕಾರಿಗಳ ಭೇಟಿ ಪರಿಶೀಲನೆ

ತುಮಕೂರು: ಜಿಲ್ಲೆಯ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ವಿದ್ಯುನ್ಮಾನ ಮತಯಂತ್ರಗಳನ್ನು 24 x 7 ಸಿಎಪಿಎಫ್ ಹಾಗೂ ಪೊಲೀಸ್ ಬಿಗಿ ಭದ್ರತೆಯಲ್ಲಿ ನಗರದ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇರಿಸಿರುವ ಭದ್ರತಾ ಕೊಠಡಿಗಳಿಗೆ ಇಂದು ಬೆಳಿಗ್ಗೆ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಅವರು ಭೇಟಿ ನೀಡಿ ಪರಿಶೀಲಿಸಿದರು.

ಲೋಕಸಭಾ ಚುನಾವಣೆಯ ಮತ ಎಣಿಕೆಯು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೂನ್ 4ರಂದು ನಡೆಯಲಿದ್ದು, ಮತ ಎಣಿಕೆಗೆ ಕೈಗೊಂಡಿರುವ ಪೂರ್ವ ಸಿದ್ಧತೆ, ಎಣಿಕಾ ಕೊಠಡಿಗಳ ಯೋಜನಾ ನಕ್ಷೆಯನ್ನು ಪರಿಶೀಲಿಸಿದರು.

ಭದ್ರತಾ ಕೊಠಡಿಗೆ ನಿರಂತರ ವಿದ್ಯುತ್ ಪೂರೈಕೆ, ತಡೆರಹಿತ ವಿದ್ಯುತ್ ಪೂರೈಕೆಗಾಗಿ ಪರ್ಯಾಯ ವ್ಯವಸ್ಥೆ, ಸ್ಟ್ರಾಂಗ್ ರೂಮ್‍ಗಳಿಗೆ ಡಬಲ್ ಲಾಕ್ ವ್ಯವಸ್ಥೆ ಹೊಂದಿರುವ, 2 ಸುತ್ತಿನ ಭದ್ರತಾ ವ್ಯವಸ್ಥೆ ಹಾಗು 1 ಪ್ಲಟೂನ್ ವ್ಯವಸ್ಥೆ ಕಲ್ಪಿಸಿರುವ, ಸಿಸಿ ಟಿವಿ ಅಳವಡಿಕೆ, 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸ್ಟ್ರಾಂಗ್ ರೂಂ ನಿಯಂತ್ರಣಾ ಕೊಠಡಿ, ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ವಾಹನ ನಿಯೋಜನೆ, ಪೊಲೀಸ್ ಸಿಬ್ಬಂದಿ, ಸಿಎಪಿಎಫ್ ಹಾಗೂ ಸ್ಟ್ರಾಂಗ್ ರೂಮಿಗೆ ಭೇಟಿ ನೀಡುವವರ ಲಾಗ್ ಪುಸ್ತಕ, ಸಿಸಿ ಟಿವಿಯನ್ನು ಪರಿಶೀಲಿಸಿ ಮಾತನಾಡಿದ ಅವರು ಎಣಿಕಾ ಕಾರ್ಯವನ್ನು ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಎಣಿಕಾ ಕಾರ್ಯಕ್ಕಾಗಿ ನಿಯೋಜಿಸಿರುವ ಅಧಿಕಾರಿ/ಸಿಬ್ಬಂದಿಗಳ ವಿವರ, ಎಣಿಕಾ ಕೊಠಡಿಗಳು ಹಾಗೂ ಎಣಿಕಾ ಟೇಬಲ್ ವ್ಯವಸ್ಥೆ, ವ್ಯವಸ್ಥಿತ ಎಣಿಕಾ ಕಾರ್ಯಕ್ಕೆ ಕೈಗೊಂಡಿರುವ ಸಕಲ ಸಿದ್ಧತೆಗಳ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಭದ್ರತಾ ಕೊಠಡಿಗೆ ಒದಗಿಸಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿ, ಎಣಿಕಾ ದಿನದಂದು ಕೈಗೊಳ್ಳಲಾಗುವ ಪೊಲೀಸ್ ಬಂದೋಬಸ್ತ್ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜಾ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಚುನಾವಣಾ ತಹಶೀಲ್ದಾರ್ ರೇಷ್ಮ, ನಿರ್ಮಿತಿ ಕೇಂದ್ರದ ರಾಜಶೇಖರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಬಸಂತಿ, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಸೇರಿದಂತೆ ಮತ್ತಿತರರು ಹಾಜರಿದ್ದರು

Leave a Reply

Your email address will not be published. Required fields are marked *