ಜಿ.ಪಂ ಸಿಇಒಗೆ ಪಿಯು ಡಿಡಿ ಕಚೇರಿ ಆಡಳಿತ ನಿಯಂತ್ರಣ

ಜಿ.ಪಂ ಸಿಇಒಗೆ ಪಿಯು ಡಿಡಿ ಕಚೇರಿ ಆಡಳಿತ ನಿಯಂತ್ರಣ
ಪ್ರಸ್ತಾವನೆ ಹಿಂಪಡೆಯಲು ಸರ್ಕಾರಕ್ಕೆ ಉಪನ್ಯಾಸಕರ ಒತ್ತಾಯ

ತುಮಕೂರು: ಸರ್ಕಾರದ ಪ್ರಸ್ತಾಪಿಸರುವ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವರ್ಗಾಯಿಸುವ ಪ್ರಸ್ತಾವನೆ ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ನೇತೃತ್ವದಲ್ಲಿ ಉಪನ್ಯಾಸಕರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

 

ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಅವರ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, ಪ್ರಾಸ್ತಾವಿತ ಪ್ರಸ್ತಾವನೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸ್ವಾಯತ್ತತೆ, ಸಂಸ್ಥಾತ್ಮಕ ಅಸ್ತಿತ್ವ ಹಾಗೂ ಸ್ಥಾಪಿತ ಆಡಳಿತಾತ್ಮಕ ವ್ಯವಸ್ಥೆಗೆ ಗಂಭೀರ ಧಕ್ಕೆಯನ್ನು ಉಂಟು ಮಾಡುವ ಕ್ರಮವಾಗಿದೆ ಎಂದು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ನೇ.ರಂ. ನಾಗರಾಜ ಹೇಳಿದರು.

ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸರ್ಕಾರ ಈವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಪದವಿ ಪೂರ್ವ ಶಿಕ್ಷಣ ಸಮುದಾಯದಲ್ಲಿ ಗಂಭೀರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಹಾಗೆಯೇ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಹಿಂದಿನಂತೆ ಪದವಿ ಪೂರ್ವ ಶಿಕ್ಷಣ ಇಲಾಖಾ ನಿರ್ದೇಶನಾಲಯಕ್ಕೆ ಮರಳಿ ವರ್ಗಾಯಿಸುವುದು ಹಾಗೂ ಇತರೆ ನ್ಯಾಯಸಮ್ಮತ ಬೇಡಿಕೆಗಳನ್ನು ತಕ್ಷಣ ಕಡ್ಡಾಯವಾಗಿ ಈಡೇರಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

 

ಜಿಲ್ಲಾ ಪ್ರಾಂಶುಪಾಲ ಸಂಘದ ಅಧ್ಯಕ್ಷರಾದ ನೇರಂ ನಾಗರಾಜ ಅವರೊಂದಿಗೆ ರಾಜ್ಯ ಸಂಚಾಲಕರಾದ ಚಂದ್ರಯ್ಯ, ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷರು ಪರಮೇಶ್ವರಪ್ಪ, ರಾಜ್ಯ ಅನುದಾನಿತ ಕಾಲೇಜುಗಳ ಕೋಶಾಧ್ಯಕ್ಷರಾದ ವೆಂಕಟಾಚಲ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಎನ್ ಮಹಾಲಿಂಗೇಶ್, ಜಿಲ್ಲಾ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿಗಳಾದ ಸತೀಶ್ ಸಿ.ಜಿ ಜಿಲ್ಲಾ ಸರ್ಕಾರಿ ಸಂಘದ ನಿರ್ದೇಶಕರಾದ ವಸಂತ್ ಕುಮಾರ್, ಎನ್, ಪ್ರಾಂಶುಪಾಲರಾದ ಚಂದ್ರಶೇಖರ್, ತೇಜಸ್ವಿ, ಅಶ್ವತ್, ಉಪನ್ಯಾಸಕರಾದ ಯೋಗೀಶ್, ತಿಪ್ಪೇಸ್ವಾಮಿ, ಜ್ಯೋತಿ ಪ್ರಕಾಶ್, ರಮೇಶ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!