ವಕೀಲರ ರಕ್ಷಣಾ ಕಾಯಿದೆ ಕಠಿಣಗೊಳಿಸಲು ಸರ್ಕಾರಕ್ಕೆ ಒತ್ತಾಯ
ತುಮಕೂರು: ಪಾವಗಡ ತಾಲ್ಲೂಕು ವಕೀಲ ಟಿ.ಹೆಚ್.ಸುಧಾಕರ್ ಮೇಲಿನ ಹಲ್ಲೆ ಖಂಡಿಸಿ, ಅವರ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‍ಐಆರ್ ರದ್ದುಪಡಿಸಲು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಸೋಮವಾರ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಕೀಲ ಧರ್ಮ ಪಾಲನೆ ಮಾಡುವ ವಕೀಲರಿಗೆ ರಕ್ಷಣೆ ದೊರೆಯುತ್ತಿಲ್ಲ, ವಕೀಲರ ರಕ್ಷಣಾ ಕಾಯಿದೆಯನ್ನು ಕಠಿಣವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರಿಗೆ ಮನವಿಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ, ಪಾವಗಡ ತಾಲ್ಲೂಕು ವಕೀಲರ ಸಂಘದ ಸದಸ್ಯರಾಗಿರುವ ಟಿ.ಹೆಚ್.ಸುಧಾಕರ್ ಮೇಲೆ ಪಾವಗಡ ತಾಲ್ಲೂಕು ದವಡಬೆಟ್ಟ ಗ್ರಾಮದ ನಿವಾಸಿಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿದ್ದಾರೆ. ಲೀಗಲ್ ನೋಟೀಸ್ ಜಾರಿ ಮಾಡಿ ವಕೀಲ ವೃತ್ತಿ ಮಾಡಿದ್ದಕ್ಕೆ ಸುಧಾಕರ್ ಅವರನ್ನು ಕೊಲೆ ಮಾಡುವ ದುರುದ್ದೇಶದಿಂದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುತ್ತಾರೆ ಎಂದು ಹೇಳಿದರು.
ಸಮಾಜದ ಪರವಾಗಿ ಕೆಲಸ ಮಾಡುವ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ. ಎಲ್ಲೂ ನ್ಯಾಯ ಸಿಗದಿದ್ದಾಗ ಜನರು ನ್ಯಾಯಕ್ಕಾಗಿ ವಕೀಲರ ಬಳಿಗೆ ಬರುತ್ತಾರೆ. ಆ ವೇಳೆ ಅವರ ಪರವಾಗಿ ನಿಂತು ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಾರೆ. ಇಂತಹ ವಕೀಲರು ವೃತ್ತಿ ಧರ್ಮದ ಅನುಸಾರ ಲೀಗಲ್ ನೋಟೀಸ್ ಜಾರಿ ಮಾಡಿದ್ದಕ್ಕೆ ಹಲ್ಲೆ ಮಾಡುವುದೆಂದರೆ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಅರ್ಥವಾಗುತ್ತದೆ. ಇದರಿಂದ ವಕೀಲರು ನಿರ್ಭೀತಿಯಿಂದ ವೃತ್ತಿ ಧರ್ಮ ನಿರ್ವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಸರ್ಕಾರ ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು. ವಕೀಲರ ರಕ್ಷಣಾ ಕಾಯಿದೆಯನ್ನು ಮತ್ತಷ್ಟು ಕಠಿಣಗೊಳಿಸಿ ಜಾರಿಗೊಳಿಸಬೇಕು ಎಂದು ಕೆಂಪರಾಜಯ್ಯ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಿಗೆ ಮನವಿ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್ ಮಾತನಾಡಿ, ಪಾವಗಡ ವಕೀಲ ಸುಧಾಕರ್ ಮೇಲಿನ ಹಲ್ಲೆಯನ್ನು ಖಂಡಿಸುತ್ತೇವೆ. ಸತ್ಯಾಸತ್ಯತೆ ಪರಿಶೀಲನೆ ಮಾಡದೆ ಪೊಲೀಸರು ಹಲ್ಲೆಗೊಳಗಾದ ವಕೀಲ ಸುಧಾಕರ್ ಅವರ ಮೇಲೆಯೇ ಎಫ್‍ಐಆರ್ ದಾಖಲಿಸಿದ್ದಾರೆ. ಇದು ಯಾವ ನ್ಯಾಯ, ಪೊಲೀಸರ ಕರ್ತವ್ಯ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಜೀವಬೆದರಿಕೆ ಇರುವ ವಕೀಲ ಸುಧಾಕರ್ ಅವರಿಗೆ ರಕ್ಷಣೆ ನೀಡಬೇಕು. ಅವರ ವಿರುದ್ಧ ದಾಖಲಿಸಿರುವ ಎಫ್‍ಐಆರ್ ವಾಪಸ್ ಪಡೆಯಬೇಕು. ಇನ್ನು ಹದಿನೈದು ದಿನಗಳಲ್ಲಿ ಎಫ್‍ಐಆರ್ ವಾಪಸ್ ಪಡೆಯದಿದ್ದರೆ ರಾಜ್ಯಾದ್ಯಂತ ವಕೀಲರು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಹಿರೇಹಳ್ಳಿ ಮಹೇಶ್ ಎಚ್ಚರಿಕೆ ನೀಡಿದರು.
ಸಂಘದ ಉಪಾಧ್ಯಕ್ಷ ಎಂ.ಎಲ್.ರವಿಗೌಡ, ಜಂಟಿ ಕಾರ್ಯದರ್ಶಿ ಟಿ.ಎಂ.ಧನಂಜಯ, ಖಜಾಂಚಿ ಬಿ.ಎಂ.ಸಿಂಧೂ, ನಿರ್ದೇಶಕರಾದ ಡಿ.ಎ.ಜಗದೀಶ್, ಕೆ.ವಿ.ಶ್ರೀನಿವಾಸಮೂರ್ತಿ, ಎಸ್.ಸುರೇಶ್, ಪಿ.ಗೋವಿಂದರಾಜು, ವಿ.ಕೆ.ಶ್ರೀನಿವಾಸಮೂರ್ತಿ, ಸಿ.ಆರ್.ಪದ್ಮಾಶ್ರೀ, ಜೆ.ಎಸ್.ಸೇವಾಪ್ರಿಯ ಹಾಗೂ ಹಲವು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.