ಗುಬ್ಬಿ:ತಾಲ್ಲೂಕಿನ ಕಸಬಾ ಹೋಬಳಿ ತೊರೆಹಳ್ಳಿಯಲ್ಲಿ ಭಾನುವಾರ ರಾಮಪ್ಪದೇವರ ಜಾತ್ರೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿ ಯಾಗಿ ನೆರವೇರಿತು.
ಸಂಪ್ರದಾಯದಂತೆ ದೇವಾಲಯದ ಅರ್ಚಕರು ರಾಮಪ್ಪಸ್ವಾಮಿಯ ಮುಖವಾಡವನ್ನು ಹೊತ್ತು,ಅರೇವಾದ್ಯ,ಚಿಟ್ಟೆಮೇಳ, ಕೊಂಬು,ಕಹಳೆಗಳೊಂದಿಗೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಅಪಾರ ಭಕ್ತಾದಿಗಳೊಂದಿಗೆ ಊರ ಮುಂದೆ ಜಾಲಿ ಮುಳ್ಳನ್ನು ಸುರಿದು ಸಿದ್ಧಪಡಿಸಿದ್ದ ಮುಳ್ಳಿನ ಹಾಸಿಗೆಯ ಬಳಿ ಬಂದು ಕುಣಿಸಲಾಯಿತು.ಮುಳ್ಳಿನ ಹಾಸಿಗೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ರಾಮಪ್ಪಸ್ವಾಮಿಯ ಮುಖವಾಡ ವನ್ನು ಹೊತ್ತಿದ್ದ ಅರ್ಚಕರು ಕುಣಿದು ಕೊಪ್ಪಳಿಸುತ್ತಾ ಮುಳ್ಳಿನ ಹಾಸಿಗೆಯ ಮೇಲೆ ಚಾಟಿ ಬೀಸುತ್ತಾ ಬೀಳುವ ಮೂಲಕ ಸಂಪ್ರದಾಯವನ್ನು ನೆರವೇರಿಸಲಾಯಿತು.
ನಂತರ ರಾಮಪ್ಪ ಸ್ವಾಮಿಯನ್ನು ಮಂಗಳವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂಜೆ ಪಕ್ಕದ ಗ್ರಾಮವಾದ ಮತ್ತಿಘಟ್ಟಕ್ಕೆ ಕೊಂಡಯ್ಯಲಾಯಿತು. ಭಾನುವಾರ ರಾತ್ರಿ ಅಲ್ಲಿಯೇ ಇರುವ ದೇವರು ಸೋಮವಾರ ತೊರೆಹಳ್ಳಿಗೆ ಹಿಂತಿರುಗಿ ಬಂದು ಮತ್ತೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ನಂತರ ಜಾತ್ರೆಯನ್ನು ಸಂಪನ್ನಗೊಳಿಸಲಾಗುವುದು.
ಮುಳ್ಳಿನ ಹಾಸಿಗೆಯ ಮೇಲೆ ಕುಣಿದು ಮಲಗುವ ಸಂಪ್ರದಾಯವು ಅನೇಕ ತಲೆಮಾರುಗಳಿಂದಲೂ ನಡೆದುಕೊಂಡು ಬರುತ್ತಿದ್ದು,ಗ್ರಾಮದ ಎಲ್ಲಾ ಕೋಮಿನವರ ಜೊತೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತಾದಿಗಳು ಭಾಗವಹಿಸಿ ತಮ್ಮ ಹರಕೆಯನ್ನು ತೀರಿಸುವರು.ರಾಮಪ್ಪ ಸ್ವಾಮಿಯನ್ನು ಹೊತ್ತಿರುವ ಅರ್ಚಕರ ಕೈಯಲ್ಲಿರುವ ಚಾಟಿಯಿಂದ ಏಟು ತಿಂದರೆ ರೋಗ,ರುಜಿನೆಗಳು ವಾಸಿಯಾಗುವ ಜೊತೆಗೆ ಪಾಪವನ್ನು ಕಳೆದುಕೊಳ್ಳಬಹುದು ಎಂಬ ನಂಬಿಕೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಇದ್ದು, ಈ ಭಾಗದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ.