ತಿಪಟೂರು ತಾಲೂಕಿನ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಲವಾರು ವರ್ಷಗಳಿಂದ ಮಳೆಗಾಲ ಬಂತೆಂದರೆ, ಸುದ್ದಿ ಪತ್ರಿಕೆಗಳ ಮತ್ತು ನ್ಯೂಸ್ ಚಾನಲ್ ಗಳ ಬಾಯಿಗೆ ತುತ್ತಾಗುವುದು ಸರ್ವೇ ಸಾಮಾನ್ಯವಾಗಿದೆ.
ಕೆಲವು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ನವೀಕರಣಗೊಳಿಸಲಾಗಿರುವ ತಿಪಟೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕೆಲವೊಂದಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಅರಸೀಕೆರೆ,ಚನ್ನರಾಯಪಟ್ಟಣ, ತುರುವೇಕೆರೆ,ಹುಳಿಯಾರು ಹಾಸನ ಹೀಗೆ ಹಲವಾರು ನಗರ ಪ್ರದೇಶದ ಜನ,ಗ್ರಾಮೀಣ ಭಾಗದ ಜನರು ಮತ್ತು ವಿದ್ಯಾರ್ಥಿಗಳು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ತಿಪಟೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕಾರ್ಯನಿಮಿತ ಆಗಮಿಸುತ್ತಾರೆ. ಆದರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನವೀಕರಣಗೊಳಿಸಿರುವ ಸರಕಾರಿ ಬಸ್ ನಿಲ್ದಾಣದಲ್ಲಿ ಮಳೆ ಬಂತೆಂದರೆ ನಗರದ ಯುಜುಡಿ ನೀರು ಮತ್ತು ಚರಂಡಿ ನೀರು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣವನ್ನು ಆವರಿಸುತ್ತದೆ. ಜೊತೆಗೆ ಬಸ್ ನಿಲ್ದಾಣದ ಒಳಗು ( ಪ್ರಯಾಣಿಕರು ಓಡಾಡುವಂತಹ ಜಾಗ ) ಕೊಳೆಚೆ ನೀರು ಆಗಮಿಸುವ ಕಾರಣ, ಪ್ರಯಾಣಿಕರು ಮತ್ತು ಸಾರ್ವಜನಿಕರು ಮೂಗು ಮುಚ್ಚಿಕೊಂಡು,ಅಸಹ್ಯ ಪಟ್ಟುಕೊಂಡು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಛೀಮಾರಿ ಹಾಕಿಕೊಂಡು, ಓಡಾಡುತ್ತಿರುವುದು ಹಲವಾರು ವರ್ಷಗಳಿಂದ ಈ ಜಾಗದಲ್ಲಿ ವಾಡಿಕೆಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ, ಮಲೇರಿಯಾ ದಂತಹ ಇನ್ನು ಕೆಲ ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಬೆನ್ನಲ್ಲೇ, ಇಂತಹ ಸ್ಥಿತಿಯಲ್ಲಿ ಇರುವ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಗ್ಗೆ ಈ ವರೆಗೂ ಯಾವುದೇ ಅಧಿಕಾರಿಗಳು ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳದೆ, ಇರುವುದು ತಾಲೂಕಿನ ಆಡಳಿತ ವ್ಯವಸ್ಥೆ ಯಾವ ಮಟ್ಟಿಗಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಪ್ರತಿ ಬಾರಿಯೂ ಹೆಚ್ಚು ಮಳೆ ಬಂದಂತ ಸಂದರ್ಭದಲ್ಲಿ ನಗರದ ತ್ಯಾಜ್ಯ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ತಲುಪಿ ಪ್ರತಿ ವರ್ಷವೂ ಇಂಥ ವಾತಾವರಣ ಸೃಷ್ಟಿಯಾಗುತ್ತದೆ. ಹಲವು ಬಾರಿ ಕೆಲ ಮಾಧ್ಯಮಗಳು ಸುದ್ದಿ ಪ್ರಕಟಿಸಿದರು ಕೂಡ, ನಮಗೂ ಈ ಸಮಸ್ಯೆಗೂ ಸಂಬಂಧವಿಲ್ಲದಂತೆ ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಕೂಡಲೇ ಇಂತಹ ಸಮಸ್ಯೆಯನ್ನು ಬಗೆಹರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ನಗರದ ಬಸ್ ನಿಲ್ದಾಣದ ವಾತಾವರಣವನ್ನು ಉತ್ತಮಗೊಳಿಸಬೇಕೆಂದು, ಪ್ರಯಣಿಕರ ಮತ್ತು ಸಾರ್ವಜನಿಕರ ಮನವಿಯಾಗಿದೆ.