ತಿಪಟೂರು ಸುದ್ದಿ
ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ನಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೀಕೆರೆ ಗ್ರಾಮದ,ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆಂಗಿನ ಸಸಿ ನೆಡುವ ಮೂಲಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಆಯೋಜನೆ ಮಾಡಲಾಗಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ 13 ಶಾಲೆಗಳಿಂದ ,150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧಿಸಿದ್ದರು.
ಕಾರ್ಯಕ್ರಮದಲ್ಲಿ ಜ್ಯೋತಿಯನ್ನು ಬೆಳಗಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ರವರು ಮಕ್ಕಳಿಗೆ ವಿದ್ಯಾಭ್ಯಾಸವು ಅಷ್ಟೇ ಮುಖ್ಯವಲ್ಲ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಅಷ್ಟೇ ಮುಖ್ಯವಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪ್ರತಿಭೆಯು ರಾಜ್ಯಮಟ್ಟಕ್ಕೆ ತಲುಪಬೇಕು ಎಂಬ ಉದ್ದೇಶದಿಂದ, ರಾಜ್ಯ ಸರ್ಕಾರ 2001ರಲ್ಲಿ ಪ್ರತಿಭಾ ಕಾರಂಜಿಯನ್ನು ಮೊದಲು ಪ್ರಾರಂಭಿಸಿತು. ಪ್ರತಿಭಾ ಕಾರಂಜಿಯನ್ನು ಕ್ಲಸ್ಟರ್ ಮಟ್ಟದಲ್ಲಿ ಮಾತ್ರವಲ್ಲದೆ ತಾಲೂಕು ಮಟ್ಟ, ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದವರೆಗೂ ನಡೆಸಲಾಗುತ್ತದೆ. ಮಕ್ಕಳಲ್ಲಿನ ಪ್ರತಿಭೆಯು ಅತಿ ಅಮೂಲ್ಯವಾದದ್ದು ಅವರಲ್ಲಿರುವ ಪ್ರತಿಭೆಯು ತಿಳಿಯಬೇಕೆಂದರೆ, ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ತಿಳಿಸಿದರು .
ಪ್ರತಿಭಾ ಕಾರಂಜಿಯಲ್ಲಿ ಮಕ್ಕಳಿಂದ ಚಿತ್ರ ಬಿಡಿಸುವ ಸ್ಪರ್ಧೆ,ಕ್ಲೇ ಮಾಡ್ಲಿಂಗ್,ರಸಪ್ರಶ್ನೆ, ವೇಷ ಭೂಷಣ ಸ್ಪರ್ಧೆ, ಕಂಠಪಾಠ ಸ್ಪರ್ಧೆ, ಹಾಡು ಹೇಳುವ ಸ್ಪರ್ಧೆಗಳು ಒಳಗೊಂಡಂತೆ ಇನ್ನು ಹಲವಾರು ಸ್ಪರ್ಧೆಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಂತೆ ಕೆಲ ರಾಜಕೀಯ ವ್ಯಕ್ತಿಗಳಿಗೆ, ಸಮಾಜ ಸೇವಕರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕರೀಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ರಾಜಶೇಖರ್. ಕೆ.ಎಂ, ಮುಖ್ಯ ಶಿಕ್ಷಕ ರಂಗಸ್ವಾಮಿ.ಹೆಚ್.ಜಿ, ಸಿ.ಎಂ. ಈಶ್ವರಪ್ಪ, ನಿವೃತ್ತ ಪಿ ಡಿ ಓ ಡಾ. ಕೋದಂಡರಾಮಯ್ಯ, ಕ್ಲಸ್ಟರ್ ಮಟ್ಟದ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು,ಅಡುಗೆ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.