ತುರುವೇಕೆರೆ: ಬರಗಾಲದ ಹಿನ್ನೆಲೆಯಲ್ಲಿ ಯಾವುದೇ ಬ್ಯಾಂಕ್, ಮೈಕ್ರೋಫೈನಾನ್ಸ್ ಗಳು ರೈತರಿಂದ ಸಾಲಮರುಪಾವತಿಗೆ ಮುಂದಿನ ಎರಡು ತಿಂಗಳ ಕಾಲ ಒತ್ತಡ ಹೇರಬಾರದು, ಆ ರೀತಿ ಒತ್ತಡ ಹೇರಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ರೇಣುಕುಮಾರ್ ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಬ್ಯಾಂಕ್, ಮೈಕ್ರೋಫೈನಾನ್ಸ್ ಗಳು ಸಾಲ ಮರುಪಾವತಿ ಮಾಡಲು ಒತ್ತಾಯ ಹೇರದಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತಿಪಟೂರಿನಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದು, ಮೈಕ್ರೋಫೈನಾನ್ಸ್, ಬ್ಯಾಂಕ್ಗಳು ಮುಂದಿನ ಎರಡು ತಿಂಗಳ ಕಾಲ ಸಾಲ ಮರುಪಾವತಿ ಮಾಡುವಂತೆ ಸಾಲ ಪಡೆದವರಿಗೆ ಒತ್ತಡ ಹೇರಬಾರದೆಂದು ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯನ್ನು ತಾಲೂಕಿನ ಎಲ್ಲಾ ಬ್ಯಾಂಕ್, ಮೈಕ್ರೋಫೈನಾನ್ಸ್ ಗಳಿಗೆ ತಿಳಿಸಲಾಗಿದೆ. ರೈತರು ಭಯಪಡಬೇಕಾದ ಅಗತ್ಯವಿಲ್ಲ. ಯಾರೇ ಸಾಲ ಮರುಪಾವತಿಗೆ ಒತ್ತಡ ಹೇರಿ ತೊಂದರೆ ನೀಡಿದರೆ ಅಂತಹವರ ಮಾಹಿತಿಯನ್ನು ತಾಲೂಕು ಆಡಳಿತಕ್ಕೆ ನೀಡಿದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ