ತುಮಕೂರು: ತುಮಕೂರು ದಸರಾ ಸಮಿತಿಯ ದಸರಾ ಉತ್ಸವದಲ್ಲಿ ಈ ನೆಲದ ಕ್ರೀಡೆಯಾದ ಮಲ್ಲಕಂಬ ಪ್ರದರ್ಶನ ಆಕರ್ಷಣೀಯವಾಗಿತ್ತು. ನಗರದ ಶ್ರೀರಾಮ ಮಂದಿರದ ಆವರಣದಲ್ಲಿ ನಡೆದ ಮಲ್ಲಕಂಬ ಕ್ರೀಡೆ ಪ್ರದರ್ಶನದಲ್ಲಿ ಬೆಂಗಳೂರಿನ ಜಿಗಣಿ ವಿವೇಕಾನಂದ ಕೇಂದ್ರ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಲ್ಲಕಂಬ ಮೇಲೆ ವಿವಿಧ ಕಸರತ್ತಿನ ರೋಮಾಂಚಕಾರಿ ಪ್ರದರ್ಶನ ನೀಡಿದರು.
ಮಲ್ಲಕಂಬ ಈ ನೆಲದಲ್ಲಿ ಹುಟ್ಟಿದ ಅಪ್ಪಟ ದೇಶೀಯ ಕ್ರೀಡೆ. ಹೆಸರೇ ಸೂಚಿಸುವಂತೆ ಗರಡಿಯಲ್ಲಿ ಕಸರತ್ತು ಮಾಡುವ ಕುಸ್ತಿಪಟುಗಳು ಉಪಯೋಗಿಸುವ ಕಂಬ. ಆದರೆ ನಂತರದ ವರ್ಷಗಳಲ್ಲಿ ಮಲ್ಲಕಂಬ ಪ್ರತ್ಯೇಕ ಕ್ರೀಡೆಯಾಗಿ ರೂಪುಗೊಂಡಿತು. ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವ ಮಲ್ಲಕಂಬಕ್ಕೆ ಶ್ರೇಷ್ಠ ಪ್ರದರ್ಶನ ಮೌಲ್ಯವಿದೆ. ಮಲ್ಲಕಂಬ ಯುದ್ಧ ತರಬೇತಿ ಅಂಗವಾಗಿಯೇ ರೂಪಗೊಂಡಿರಬಹುದು, ಪುರಾಣದ ಭೀಮ, ದುರ್ಯೋಧನ, ಜರಾಸಂಧ, ವಾಲಿ, ಸುಗ್ರೀವ, ಹನುಮಂತ ಮುಂತಾದ ಮಲ್ಲರು, ಕುಸ್ತಿಪಟುಗಳು ಪಟ್ಟುಗಳನ್ನು ಅಭ್ಯಸಿಸಲು ಮಲ್ಲಕಂಬ ಬಳಸುತ್ತಿದ್ದರೆಂಬ ಉಲ್ಲೇಖವಿದೆ.
ಈ ನೆಲದ ಪುರಾತನ ಕ್ರೀಡೆಯನ್ನು ಉಳಿಸಿ ಹೊಸತಲೆಮಾರಿಗೆ ಪರಿಚಯಿಸಬೇಕೆಂಬ ಕಾರಣಕ್ಕೆ ತುಮಕೂರು ದಸರಾ ಸಮಿತಿಯು ಉತ್ಸವದಲ್ಲಿ ಮಲ್ಲಕಂಬ ಪ್ರದರ್ಶನ ಆಯೋಜಿಸಿತ್ತು.
ಕೈಗಾರಿಕೋದ್ಯಮಿ, ಟೂಡಾ ಮಾಜಿ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಹಾಗೂ ಸಮಿತಿ ಮುಖಂಡರು ಮಲ್ಲಕಂಬಕ್ಕೆ ಪೂಜೆ ಸಲ್ಲಿಸಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಉದ್ಯಮಿ ಮಹೇಂದ್ರಕುಮಾರ್, ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಸಮಿತಿ ಉಪಾಧ್ಯಕ್ಷ ಎಂ.ಕೆ.ನಾಗರಾಜ ರಾವ್, ಜಿ.ಕೆ.ಶ್ರೀನಿವಾಸ್, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕರಾದ ಕೆ.ಎನ್.ಗೋವಿಂದರಾವ್, ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.