ತುಮಕೂರು: ದಸರಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಸಹಯೋಗದಲ್ಲಿ ಈ ತಿಂಗಳ 22ರಿಂದ 11 ದಿನಗಳ ಕಾಲ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮಾಸ್ಟರ್ ಹಿರಣ್ಣಯ್ಯ ರಂಗವೇದಿಕೆಯಲ್ಲಿ ತುಮಕೂರು ರಂಗ ದಸರಾ ನಾಟಕೋತ್ಸವ ಏರ್ಪಾಟಾಗಿದೆ.
ಈ ಸಂಬಂಧ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣನವರ ಅಧ್ಯಕ್ಷತೆಯಲ್ಲಿ ಕಲಾವಿದರು ಶನಿವಾರ ಸಭೆ ಸೇರಿ ಕಾರ್ಯಕ್ರಮಗಳ ಸಿದ್ಧತೆ ಕುರಿತು ಚರ್ಚೆ ನಡೆಸಿದರು.
ಹಿರಿಯ ಕಲಾವಿದ ಎಂ.ವಿ.ನಾಗಣ್ಣ ಮಾತನಾಡಿ, ಇದೇ ಮೊದಲ ಬಾರಿಗೆ ತುಮಕೂರು ದಸರಾ ಉತ್ಸವದಲ್ಲಿ ಜಿಲ್ಲಾಡಳಿತದ ಸಹಕಾರದಲ್ಲಿ ರಂಗ ನಾಟಕೋತ್ಸವ ಆಯೋಜನೆಗೆ ಅವಕಾಶ ಸಿಕ್ಕಿದೆ. ಜಿಲ್ಲಾ ಉಸ್ತುವಾರ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿ.ಪಂ. ಸಿಇಒ ಜಿ.ಪ್ರಭು ಹಾಗೂ ಇತರರ ಸಹಕಾರದಿಂದ ನಾಟಕೋತ್ಸವ ವ್ಯವಸ್ಥೆಯಾಗಿದೆ ಎಂದರು.
ರಂಗಭೂಮಿ ಕಲೆಗೆ ತುಮಕೂರು ಜಿಲ್ಲೆ ಹೆಸರುವಾಸಿಯಾಗಿದೆ. ಜಿಲ್ಲೆಯ ಅನೇಕ ಕಲಾವಿದರು ಈ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಡಾ.ಗುಬ್ಬಿ ವೀರಣ್ಣನವರು ಸೇರಿದಂತೆ ಹೆಸರಾಂತ ಕಲಾವಿದರ ಸೇವೆ ಸ್ಮರಿಸಲು, ಕಲಾವಿದರನ್ನು ಪ್ರೋತ್ಸಾಹಿಸಲು ಈ ನಾಟಕೋತ್ಸವ ಆಯೋಜಿಸಲಾಗಿದೆ. 22ರಂದು ಬೆಳಿಗ್ಗೆ 11 ಗಂಟೆಗೆ ಸಚಿವ ಡಾ.ಜಿ.ಪರಮೇಶ್ವರ ನಾಟಕೋತ್ಸವ ಉದ್ಘಾಟಿಸುವರು. ಅಂದಿನಿಂದ 11 ದಿನಗಳವರೆಗೆ ಪ್ರತಿದಿನ ಒಂದು ಅಥವಾ ಎರಡು ನಾಟಕಗಳ ಒಟ್ಟು 15 ನಾಟಕಗಳ ಪ್ರದರ್ಶನ ವ್ಯವಸ್ಥೆಯಾಗಿದೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಲು ಎಂ.ವಿ.ನಾಗಣ್ಣ ಕೋರಿದರು.
ಮತ್ತೊಬ್ಬ ಹಿರಿಯ ಕಲಾವಿದ ಯೋಗಾನಂದಕುಮಾರ್ ಮಾತನಾಡಿ, ಜಿಲ್ಲಾಡಳಿತ ನಾಟಕೋತ್ಸವಕ್ಕೆ ಕಲಾಕ್ಷೇತ್ರವನ್ನು ಉಚಿತವಾಗಿ ನೀಡಿದೆ. ಜೊತೆಗೆ ಕಲಾವಿದರಿಗೆ ಗೌರವ ಧನ ನೀಡುತ್ತದೆ. ಉಳಿದ ಖರ್ಚುವೆಚ್ಚವನ್ನು ಕಲಾವಿದರೇ ಭರಿಸಿ ನಾಟಕೋತ್ಸವವನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಜಿಲ್ಲೆಯಲ್ಲಿ ರಂಗಭೂಮಿ ಕಲೆ ಉಳಿದು ಬೆಳೆಯಬೇಕು. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕು. ಈಗ ಯುವ ಕಲಾವಿದರೂ ಆಸಕ್ತಿಯಿಂದ ರಂಗಭೂಮಿ ಪ್ರವೇಶಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದಕ್ಕೆ ಪೂರಕವಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ರಂಗಭೂಮಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಯೋಗಾನಂದಕುಮಾರ್ ಕೋರಿದರು.
ನಾಟಕ ಅಕಾಡೆಮಿ ಸದಸ್ಯ, ಪತ್ರಕರ್ತ ಉಗಮ ಶ್ರೀನಿವಾಸ್ ಮಾತನಾಡಿ, ಬೇರೆ ಜಿಲ್ಲೆಗಳಲ್ಲಿ ದಸರಾ ಸಂದರ್ಭದಲ್ಲಿ ನಾಟಕೋತ್ಸವ ನಡೆಯುತ್ತವೆ. ಕಲಾವಿದರ ಮನವಿ ಮೇರೆಗೆ ನಮ್ಮಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಇನ್ನು ಮುಂದೆ ಜಿಲ್ಲಾಡಳಿತ ಪ್ರತಿ ವರ್ಷ ತುಮಕೂರು ರಂಗ ದಸರಾ ನಾಟಕೋತ್ಸವ ಆಯೋಜಿಸಲಿ ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಬಹಳಷ್ಟು ಕಲಾವಿದರಿದ್ದಾರೆ. ಡಾಕ್ಟರ್, ಇಂಜಿನಿಯರ್, ಶಿಕ್ಷಕರು, ರೈತರು, ಉದ್ಯಮಿಗಳೂ ಹವ್ಯಾಸಿ ಕಲಾವಿದರಾಗಿ ರಂಗಭೂಮಿ ಕಲೆಯನ್ನು ಬೆಳಗುತ್ತಿದ್ದಾರೆ. ಇವರಿಗೆಲ್ಲಾ ಹೆಚ್ಚಿನ ಪ್ರೋತ್ಸಾಹ ದೊರೆಯಲಿ ಎಂದು ಆಶಿಸಿದರು.
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ, ಹಿರಿಯ ಕಲಾವಿದರುಗಳಾದ ಹೆಚ್.ಆರ್.ರಂಗಪ್ಪ, ರಘುನಾಥ್, ವೆಂಕಟೇಶ್, ತಿಮ್ಮೇಗೌಡ, ವಸಂತಕುಮಾರ್ ಮೊದಲಾದವರು ಭಾಗವಹಿಸಿದ್ದರು