ತುಮಕೂರು: ಸರ್ಕಾರದ ಅನುದಾನ ಹಾಗೂ ಸಾರ್ವಜನಿಕರ ತೆರಿಗೆ ಹಣ ಬಳಸಿಕೊಂಡು ಕಳೆದ ವರ್ಷ ಜಿಲ್ಲಾಡಳಿತ ನಗರದಲ್ಲಿ ಆಚರಿಸಿದ ದಸರಾ ಮಹೋತ್ಸವದಲ್ಲಿ ಲಕ್ಷಾಂತರ ರೂ. ಸಾರ್ವಜನಿಕರ ಹಣ ದುರುಪಯೋಗವಾಗಿದೆ. ಆಗಿನ ಲೆಕ್ಕ ನೀಡದೆ ಸಮಿತಿಯವರು ಯಾವ ಮುಖ ಹೊತ್ತು ಈ ಬಾರಿ ಮತ್ತೊಂದು ದಸರಾ ಉತ್ಸವ ಆಚರಿಸಲು ಹೊರಟಿದ್ದಾರೆ? ಎಂದು ತುಮಕೂರು ದಸರಾ ಸಮಿತಿ ಖಜಾಂಚಿ ಜಿ.ಎಸ್.ಬಸವರಾಜು ಪ್ರಶ್ನಿಸಿದರು.
ಜಿಲ್ಲಾಡಳಿತ ಕಳೆದ ಬಾರಿ ನಡೆಸಿದ ದಸರಾ ಆಚರಣೆಯಲ್ಲಿ ಆಗಿರುವ ಹಣದ ಅಕ್ರಮಗಳ ಬಗ್ಗೆ ದಾಖಲಾತಿಗಳನ್ನು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಲಕ್ಷಾಂತರ ರೂ. ಸಾರ್ವಜನಿಕರ ಹಣ ದುರುಪಯೋಗವಾಗಿದೆ, ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿದ್ದಾರೆ. ಕಳೆದ ವರ್ಷದ ದಸರಾ ಉತ್ಸವದ ಖರ್ಚಿನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷದ ದಸರಾ ಉತ್ಸವದ ಖರ್ಚಿನ ಮಾಹಿತಿ ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿ ದೊರೆತ ಮಾಹಿತಿ ಪ್ರಕಾರ, ಸರ್ಕಾರದಿಂದ ಒಂದು ಕೋಟಿ ರೂ. ಅನುದಾನ ಬಂದಿತ್ತು. ಆದರೆ ಆ ಪೈಕಿ ಕೇವಲ 15 ಲಕ್ಷ ರೂ.ಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ಖರ್ಚು ಮಾಡಲಾಗಿದೆ. ಉಳಿದ 85 ಲಕ್ಷ ರೂ. ಏನಾಯಿತು, ಯಾವುದಕ್ಕೆ ಖರ್ಚಾಯಿತು ಎಂಬ ಮಾಹಿತಿ ನೀಡುತ್ತಿಲ್ಲ. ಮಹಾನಗರ ಪಾಲಿಕೆಯಿಂದ ದಸರಾ ಉತ್ಸವಕ್ಕೆ ನಾಗರೀಕರು ಕಟ್ಟಿದ ತೆರಿಗೆ ಹಣದಲ್ಲಿ 49.99 ಲಕ್ಷ ರೂ. ನೀಡಲಾಗಿದೆ. ಲಭ್ಯ ಅನುದಾನದಲ್ಲಿ ದಸರಾ ಉತ್ಸವಕ್ಕೆ ಖರ್ಚು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಅನುದಾನದ ಹಣವನ್ನು ಬಳಸಿಕೊಳ್ಳದೆ ಸಾರ್ವಜನಿಕರ ತೆರಿಗೆ ಹಣವನ್ನು ಆಯುಕ್ತರು ದಸರಾ ಉತ್ಸವದ ಖರ್ಚಿಗೆ ಬಳಸಿದ್ದಾರೆ. ಹಿಂದೆ ತುಮಕೂರು ದಸರಾ ಸಮಿತಿಗೆ ದೇಣಿಗೆ ಕೇಳಿದಾಗ ಆಗಿನ ಆಯುಕ್ತರು 25 ಸಾವಿರಕ್ಕಿಂಥಾ ಹೆಚ್ಚಿನ ಹಣ ನೀಡಲು ಬರುವುದಿಲ್ಲ ಎಂದು ಹೇಳಿದರು. ಆದರೆ ಜಿಲ್ಲಾಡಳಿತದ ದಸರಾ ಉತ್ಸವಕ್ಕೆ 50 ಲಕ್ಷ ರೂ. ಹೇಗೆ ಕೊಡಲು ನಗರಪಾಲಿಕೆಗೆ ಸಾಧ್ಯವಾಯಿತು? ಇದೇ ರೀತಿ ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ 25 ಲಕ್ಷ ರೂ. ಪಡೆಯಲಾಗಿದೆ. ಸಾರ್ವಜನಿಕರು ದೇಣಿಗೆ ನೀಡಿದ ಸುಮಾರು 50 ಲಕ್ಷ ರೂ.ಗಳನ್ನು ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬುದರ ಲೆಕ್ಕ ನೀಡುತ್ತಿಲ್ಲ ಎಂದು ಜಿ.ಎಸ್.ಬಸವರಾಜು ಆರೋಪಿಸಿದರು.
ಕಳೆದ ವರ್ಷ ಉತ್ಸವಕ್ಕೆ ಬಳಸಿದ ಸಾರ್ವಜನಿಕರ ಹಣದ ಲೆಕ್ಕದ ಮಾಹಿತಿ ಕೊಡದೆ ಲಕ್ಷಾಂತರ ರೂ. ದುರುಪಯೋಗ ಮಾಡಿಕೊಳ್ಳಲಾಗಿದೆ. ಈಗ ಮತ್ತೊಮ್ಮೆ ದಸರಾ ಆಚರಿಸಲು ಅವರಿಗೆ ಯಾವ ನೈತಿಕತೆ ಇದೆ. ಸಂಬಂಧಿಸಿದವರು ದಸರಾ ಉತ್ಸವಕ್ಕೆ ಆದ ಖರ್ಚು ವೆಚ್ಚಗಳನ್ನು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
35ನೇ ವರ್ಷದ ದಸರಾ ಮಹೋತ್ಸವಕ್ಕೆ ಸಜ್ಜು
ಕಳೆದ 34 ವರ್ಷಗಳಿಂದ ತುಮಕೂರು ದಸರಾ ಸಮಿತಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜಾತ್ಯತೀತ, ಪಕ್ಷಾತೀತವಾಗಿ ಎಲ್ಲರನ್ನೂ ಒಳಗೊಂಡು ನಗರದಲ್ಲಿ ವೈಭವದ ದಸರಾ ಮಹೋತ್ಸವ ಆಚರಿಸಿಕೊಂಡು ಬರುತ್ತಿದೆ. ಆದರೆ ಕಳೆದ ವರ್ಷದಿಂದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ದಸರಾ ಉತ್ಸವ ಆಚರಿಸಲು ಆರಂಭಿಸಿದೆ. ಹಾಗಾಗಿ ಶ್ರೀರಾಮ ಮಂದಿರದಲ್ಲಿ ಎಂದಿನಂತೆ ಸಾಂಪ್ರದಾಯಕವಾಗಿ ನಾಡ ಹಬ್ಬ ಆಚರಿಸಲಾಯಿತು ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಡಾ.ಎಸ್.ಪರಮೇಶ್ ಈ ವೇಳೆ ಹೇಳಿದರು.
34 ವರ್ಷ ಕಾಲ ಆಚರಿಸಿದ ತುಮಕೂರು ದಸರಾ ವೈಭವವು ಮನೆಮಾತಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಅಲಂಕಾರ, ಎಲ್ಲಾ ದೇವಸ್ಥಾನಗಳ ಉತ್ಸವ ಮೂರ್ತಿಗಳ ಮೆರವಣಿಗೆ, ತಾಲ್ಲೂಕು ದಂಡಾಧಿಕಾರಿಗಳಿಂದ ಶಮೀ ಪೂಜೆ, ನಾಡಪ್ರೇಮ ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸರ್ಕಾರಿ ಕಾಲೇಜು ಮೈದಾನದಲ್ಲಿ ದಸರಾ ಉತ್ಸವ ಆಚರಿಸಲು ಅನುಮತಿ ನೀಡುವಂತೆ ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ಅನುಮತಿ ನೀಡಿದರೆ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ದಸರಾ ಮಹೋತ್ಸವ ಆಚರಿಸಲಾಗುತ್ತದೆ ಎಂದು ಹೇಳಿದರು.
ದಸರಾ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಸೂರ್ಯ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಜೆ.ಲಕ್ಷ್ಮೀಕಾಂತ್ ಮಾತನಾಡಿ, ನಮ್ಮ ನಾಡಿದ ಹೆಮ್ಮೆಯ ಸಂಸ್ಕøತಿ, ಸಂಪ್ರದಾಯ, ಪರಂಪರೆ ಸಾರುವ ದಸರಾ ಮಹೋತ್ಸವವನ್ನು ತುಮಕೂರು ದಸರಾ ಸಮಿತಿ ಇದೂವರೆಗೆ ಯಾವುದೇ ಲೋಪವಾಗದಂತೆ, ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಘನತೆಯಿಂದ ನಡೆಸಿಕೊಂಡು ಬರುತ್ತಿದೆ. ಮೈಸೂರು ನಂತರ ತುಮಕೂರು ದಸರಾ ಆಕರ್ಷಣೆಯಾಗಿರುತ್ತದೆ ಎಂಬುದು ಜನಜನಿತವಾಗಿತ್ತು. ಆದರೆ ಕಾಲೇಜು ಮೈದಾನದಲ್ಲಿ ಆಚರಣೆಗೆ ಅವಕಾಶ ಇಲ್ಲದಂತಾಗಿದೆ. ಆದರೂ ಹಿಂದಿನಂತೆ ರಾಮಮಂದಿರದಲ್ಲಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ದಸರಾ ಮಹೋತ್ಸವ ಹಮ್ಮಿಕೊಳ್ಳಲಾಗುವುದು ಎಂದರು.
ಈ ತಿಂಗಳ 22ರಿಂದ ಆರಂಭವಾಗಿ ಅಕ್ಟೋಬರ್ 2ರವರೆಗೆ ಪ್ರತಿದಿನ ಆಕರ್ಷಕ ಕಾರ್ಯಕ್ರಮಗಳು ನಡೆಯಲಿದ್ದು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮನವಿ ಮಾಡಿದರು.
ತುಮಕೂರು ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಹೇಶ್, ಸಂಚಾಲಕ ಕೆ.ಎನ್.ಗೋವಿಂದರಾವ್, ಕಾರ್ಯದರ್ಶಿಗಳಾದ ಕೆ.ಶಂಕರ್ ಉಪ್ಪಾರಹಳ್ಳಿ, ಕೆ.ಪರಶುರಾಮಯ್ಯ ಹಾಜರಿದ್ದರು.