ಖಜಾನೆ ತುಂಬಲು ಸರ್ಕಾರದಿಂದ ಜನರ ಶೋಷಣೆ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಸಚಿವ ಸೋಮಣ್ಣ ಖಂಡನೆ

ತುಮಕೂರು: ರಾಜ್ಯದ ಖಜಾನೆ ಖಾಲಿಯಾಗಿದೆ, ಹಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿ, ಯಾವ ರೀತಿಯಲ್ಲಿ ಜನರನ್ನು ಶೋಷಣೆ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಇತ್ತೀಚೆಗೆ ಸಣ್ಣಪುಟ್ಟ ವ್ಯಾಪಾರಿಗಳಿಂದ ತೆರಿಗೆ ಹಣ ವಸೂಲಿ ಮಾಡುತ್ತಾ ಬಡ ವ್ಯಾಪಾರಿಗಳನ್ನು ಶೋಷಣೆ ಮಾಡುತ್ತಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಟೀಕಿಸಿದರು.

ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಗಳ 63ನೇ ಜನ್ಮದಿನದ ಅಂಗವಾಗಿ ಸಚಿವ ಸೋಮಣ್ಣ, ಪತ್ನಿ ಶೈಲಜಾ ಸೋಮಣ್ಣ ಅವರು ಮಂಗಳವಾರ ಮಠಕ್ಕೆ ಆಗಮಿಸಿ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದಿಗೆಗೆ ಪೂಜೆ ಸಲ್ಲಿಸಿ ನಂತರ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ನಂತರ ಪತ್ರಕರ್ತರ ಜೊತೆ ಮಾತನಾಡಿದ ಸಚಿವ ಸೋಮಣ್ಣ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪರಿಸ್ಥಿತಿ ಏನಾಗಿದೆ ಎಂದು ಗೊತ್ತು. ಕೇಂದ್ರ ಸರ್ಕಾರ ಬಾಕಿ ತೆರಿಗೆ ಹಣ ನೀಡುತ್ತಿಲ್ಲ ಎಂದು ಪದೇಪದೇ ಹೇಳಿಕೆ ನೀಡುತ್ತಿರುವುದು ಸರಿಯಲ್ಲ, ಯಾವುದನ್ನು ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಬೇಕು ಎಂಬುದನ್ನು ಅವರು ತಿಳಿಯಬೇಕು. ಜಿಎಸ್‍ಟಿ ಸಭೆ, ಪ್ರಧಾನ ಮಂತ್ರಿಗಳ ಸಭೆಯಲ್ಲಿ ಭಾಗವಹಿಸುವ ಸೌಜನ್ಯ ಸಿದ್ದರಾಮಯ್ಯನವರಿಗಿಲ್ಲ. ಆದರೆ ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡುವುದು ಏಳು ಕೋಟಿ ಜನರ ಪ್ರತಿನಿಧಿಯಾಗಿ, ಮುಖ್ಯಮಂತ್ರಿಯಾಗಿರುವ ಅವರಿಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯ ತಮ್ಮ ವರ್ತನೆ ಬದಲು ಮಾಡಲಿಕೊಳ್ಳಲಿ ಎಂದರು.

ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ನಂತರ ಚರ್ಚೆ ಮಾಡಲು ಅವಕಾಶವಿದೆ. ನಂತರ ಆಪರೇಷನ್ ಸಿಂಧೂರ ವಿಚಾರ ಚರ್ಚೆ ಮಾಡೋಣ ಎಂದು ಸಭಾಪತಿಗಳು ಹೇಳಿದರೂ ಕಾಂಗ್ರೆಸ್‍ನವರು ಅನಾವಶ್ಯಕವಾಗಿ ಗೊಂದಲ ಮಾಡಿರುವುದು ಸರಿಯಲ್ಲ ಎಂದು ಟೀಕಿಸಿದರು.

 

ಸಿದ್ಧಗಂಗಾ ಮಠ ಸೇರಿದಂತೆ ಮಠಮಾನ್ಯಗಳು ಸಮಾಜ ಸೇವಾ ಕಾರ್ಯ ಮಾಡುತ್ತಿವೆ. ಎಲ್ಲಾ ಜಾತಿ, ವರ್ಗದ ಬಡ, ಕಡು ಬಡವರ ಮಕ್ಕಳಿಗೆ ವಿದ್ಯೆ ದಾನ, ಅನ್ನ ದಾಸೋಹ ಮಾಡಿ ಆ ಮಕ್ಕಳೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಡಾ.ಶಿವಕುಮಾರ ಸ್ವಾಮೀಜಿಗಳ ಸಂಕಲ್ಪವನ್ನು ಸಿದ್ಧಲಿಂಗ ಸ್ವಾಮೀಜಿಗಳು ಮುಂದುವರೆಸಿದ್ದಾರೆ ಎಂದು ಸೋಮಣ್ಣ ಹೇಳಿದರು.

 

ಮುಖಂಡರಾದ ಎಸ್.ಶಿವಪ್ರಸಾದ್, ವೈ.ಹೆಚ್.ಹುಚ್ಚಯ್ಯ, ಡಾ.ಎಸ್.ಪರಮೇಶ್, ಬಿ.ಬಿ.ಮಹದೇವಯ್ಯ, ಹಕ್ಕೊತ್ತಾಯ ಬಸವರಾಜು, ಸಾಗರನಹಳ್ಳಿ ವಿಜಯಕುಮಾರ್, ರುದ್ರೇಶ್, ಭೈರಣ್ಣ, ಸತ್ಯಮಂಗಲ ಜಗದೀಶ್, ಧನುಷ್, ತರಕಾರಿ ಮಹೇಶ್, ವಿರೂಪಾಕ್ಷಪ್ಪ, ಕೊಪ್ಪಲ್ ನಾಗರಾಜ್, ಗಣೇಶ್‍ಪ್ರಸಾದ್, ಯಶಸ್, ಸಂತೋಷ್ ಮೊದಲಾದವರು ಈ ವೇಳೆ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!